ಮಂಗಳವಾರ, ಆಗಸ್ಟ್ 20, 2019
25 °C

ಬೆಳೆ ಹಾನಿ: ಟಿಪ್ಪರ್ ತಡೆದು ಪ್ರತಿಭಟನೆ

Published:
Updated:
Prajavani

ಚಿಕ್ಕಬಳ್ಳಾಪುರ: ಜೆಲ್ಲಿ ಕ್ರಷರ್‌ಗಳು ಮತ್ತು ಟಿಪ್ಪರ್‌ಗಳ ಹಾವಳಿಯಿಂದ ಕೃಷಿ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಪೇರೇಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗಮಾಕಲಹಳ್ಳಿಯಲ್ಲಿ ರೈತರು ಜೆಲ್ಲಿ ಕಲ್ಲು ಸಾಗಿಸುವ ಟಿಪ್ಪರ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸೀಗಮಾಕಲಹಳ್ಳಿ ರೈತ ರಾಮಪ್ಪ, ‘ಜೆಲ್ಲಿ ಕ್ರಷರ್‌ಗಳು ಮತ್ತು ಜೆಲ್ಲಿ ಕಲ್ಲು ಓಡಾಡುವ ಟಿಪ್ಪರ್‌ಗಳಿಂದ ಬರುವ ಧೂಳಿನಿಂದಾಗಿ ನನ್ನ ತೋಟದಲ್ಲಿ ಲಕ್ಷಾಂತರ ಮೌಲ್ಯದ ಟೊಮೆಟೊ ಬೆಳೆ ನಷ್ಟವಾಗಿದೆ. ವಿವಿಧ ಗ್ರಾಮಗಳ ನೂರಾರು ರೈತರು ಇಂತಹ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜೆಲ್ಲಿ ಕ್ರಷರ್‌ಗಳು, ಟಿಪ್ಪರ್‌ಗಳಿಂದಾಗಿ ಸೀಗಮಾಕಲಹಳ್ಳಿ, ಕೋರೇನಹಳ್ಳಿ, ಯಲಗಲಹಳ್ಳಿ ಗ್ರಾಮಗಳ ರೈತರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಕೂಡ ಬಗ್ಗೆ ಗಮನ ಹರಿಸುತ್ತಿಲ್ಲ. ಮೊದಲೇ ಮಳೆ ಇಲ್ಲದೆ ಕಂಗಾಲಾಗಿರುವ ರೈತರು ಇದೀಗ ಧೂಳಿನಿಂದಾಗಿ ಬೆಳೆ ಬೆಳೆಯಲಾಗದೆ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ’ ಎಂದು ತಿಳಿಸಿದರು.

‘ಹಗಲು, ರಾತ್ರಿ ಸಂಚರಿಸುವ ಟಿಪ್ಪರ್‌ಗಳಿಂದ ತೂರಿ ಬರುವ ಧೂಳಿನಿಂದಾಗಿ ಟೊಮೆಟೊ, ಆಲೂಗಡ್ಡೆ, ಕ್ಯಾರೆಟ್ ಸೇರಿದಂತೆ ಹಲವು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆಗುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಗಮನ ಸೆಳೆದರೂ ಏನು ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

Post Comments (+)