ಗುರುವಾರ , ಆಗಸ್ಟ್ 22, 2019
25 °C
5808 ಬಿಸ್ಕತ್‌ಗಳ ರಾಶಿ ತೋರಿಸಿ ಜನರ ಕಣ್ಣಿಗೆ ಮಣ್ಣೆರಚಿದ ಐಎಂಎ!

ಮನ್ಸೂರ್‌ ಖಾನ್‌ ಬಳಿ 303 ಕೆ.ಜಿ ನಕಲಿ ಚಿನ್ನ!

Published:
Updated:
Prajavani

ಬೆಂಗಳೂರು: ಐಎಂಎ ವಂಚನೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸರು ರಿಚ್ಮಂಡ್‌ ರಸ್ತೆಯಲ್ಲಿರುವ ಮನ್ಸೂರ್‌ ಖಾನ್‌ಗೆ ಸೇರಿದ ಕಟ್ಟಡದ ಮೇಲೆ ಬುಧವಾರ ದಾಳಿ ನಡೆಸಿ, ಆರನೇ ಮಹಡಿಯಲ್ಲಿರುವ ಈಜು ಕೊಳದಲ್ಲಿ ಬಚ್ಚಿಟ್ಟಿದ್ದ 303 ಕೆ.ಜಿ ನಕಲಿ ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಖಾನ್‌, 5808 ನಕಲಿ ಚಿನ್ನದ ಬಿಸ್ಕತ್‌ಗಳನ್ನು ಜನರಿಗೆ ತೋರಿಸಿ ಕೋಟ್ಯಂತರ ರೂಪಾಯಿ ದೋಚಿದ್ದಾನೆ. ಈತನ ಮಾಹಿತಿ ಅನುಸರಿಸಿ ಎಸ್‌ಐಟಿ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡ ಹಾಗೂ ಉಪ ಪೊಲೀಸ್‌ ಕಮಿಷನರ್‌ ಕೆ.ಎಸ್‌. ಗಿರೀಶ್‌ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಯಿತು. 

ಮನ್ಸೂರ್‌ ಖಾನ್‌ ನಕಲಿ ಬಿಸ್ಕತ್‌ಗಳನ್ನು ಬಚ್ಚಿಟ್ಟಿದ್ದ ಆಸ್ತಿಯನ್ನು ಚಾಮರಾಜಪೇಟೆಯ ಶಾಸಕ ಜಮೀರ್‌ ಅಹಮದ್‌ ಅವರಿಂದ ಖರೀದಿಸಿದ್ದ. ಈ ಸಂಬಂಧ ಎಸ್‌ಐಟಿ ಹಾಗೂ ಇ.ಡಿ ಅಧಿಕಾರಿಗಳು ಜಮೀರ್‌ ಖಾನ್‌ ಅವರ ವಿಚಾರಣೆ ಮಾಡಿದ್ದಾರೆ. ಈ ದಾಳಿ ಕಾರ್ಯಾಚರಣೆಯಲ್ಲಿ ಬಿ.ಕೆ. ಶೇಖರ್‌ ಮತ್ತು ಅವರ ಸಿಬ್ಬಂದಿ ಭಾಗವಹಿಸಿದ್ದರು.

ಈ ಕಟ್ಟಡವನ್ನು ನೋಡಿಕೊಳ್ಳುತ್ತಿದ್ದ ವಸೀಂ ಎಂಬಾತನನ್ನು ಬಂಧಿಸಲಾಗಿದೆ. ಐಎಂಎ ಕಂಪನಿ ನಿರ್ದೇಶಕರಲ್ಲಿ ಈತನೂ ಒಬ್ಬ ಎಂದು ‍ಪೊಲೀಸರು ತಿಳಿಸಿದ್ದಾರೆ.

₹ 350 ಕೋಟಿ ಮೌಲ್ಯದ ಆಸ್ತಿ ಜಪ್ತಿ: ಈ ಮಧ್ಯೆ, ಮನ್ಸೂರ್‌ ಖಾನ್‌ ಹಾಗೂ ಅವರ ಒಡೆತನದ ಐಎಂಎ ಸಮೂಹ ಕಂಪನಿಗಳಿಗೆ ಸೇರಿರುವ ₹ 350 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ರಾಜ್ಯ ಸರ್ಕಾರ ಜಪ್ತಿ ಮಾಡಿದೆ.

ಬೆಂಗಳೂರು, ಹಾಸನ, ದಾವಣಗೆರೆ ಮತ್ತು ತುಮಕೂರು ಸೇರಿದಂತೆ ವಿವಿಧೆಡೆ ಈ ಆಸ್ತಿಗಳಿವೆ. ಅಲ್ಲದೆ, ₹ 66.5 ಕೋಟಿಗೂ ಅಧಿಕ ಮೊತ್ತದ ಚಿನ್ನ, ಬೆಳ್ಳಿ, ವಜ್ರದ ಆಭರಣ, ಬ್ಯಾಂಕಿನಲ್ಲಿಟ್ಟಿದ್ದ ₹ 11 ಕೋಟಿ ನಗದು ಹಾಗೂ ₹ 1.20 ಲಕ್ಷ ಮೌಲ್ಯದ ಜಾಗ್ವಾರ್‌, ರೇಂಜ್‌ ರೋವರ್‌ ಹಾಗೂ ಇನ್ನೊವಾ ಕ್ರಿಸ್ಟ ಕಾರುಗಳನ್ನು ಜ‍‍ಪ್ತಿ ಮಾಡಿರುವುದಾಗಿ ಕಂದಾಯ ಇಲಾಖೆ ಹೇಳಿದೆ.

Post Comments (+)