ಭಾನುವಾರ, ಆಗಸ್ಟ್ 18, 2019
22 °C
ದುಡ್ಡಿನ ಅಧಿದೇವತೆಯನ್ನು ಪೂಜಿಸಿದ ಹೆಂಗಳೆಯರು

ಶ್ರದ್ಧೆಭಕ್ತಿಯಿಂದ ವರ ಮಹಾಲಕ್ಷ್ಮಿಯ ಆರಾಧನೆ

Published:
Updated:
Prajavani

ಚಿಕ್ಕಬಳ್ಳಾಪುರ: ಶ್ರಾವಣಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರ ಮಹಾಲಕ್ಷ್ಮೀ ಹಬ್ಬವನ್ನು ನಗರದಲ್ಲೆಡೆ ಶುಕ್ರವಾರ ಶ್ರದ್ಧಾಭಕ್ತಿ, ಸಡಗರದಿಂದ ಆಚರಿಸಲಾಯಿತು. ಮನೆ ಮನೆಗಳಲ್ಲಿ ದುಡ್ಡಿನ ಅಧಿದೇವತೆಯ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಹೆಣ್ಣುಮಕ್ಕಳು ಲಕ್ಷ್ಮಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತೋರಣ ಕಟ್ಟಲಾಗಿತ್ತು. ಪೂಜಾ ಸ್ಥಳದಲ್ಲಿ ರಂಗೋಲಿ ಹಾಕಿ, ಬಾಳೆಕಂಬ, ಮಾವಿನ ಎಲೆಗಳಿಂದ ಸಿಂಗರಿಸಲಾಗಿತ್ತು. ಹೊಸ ಸೀರೆ, ಒಡವೆ ತೊಟ್ಟು ಓಡಾಡುತ್ತಿದ್ದ ಹೆಂಗಳೆಯರು ಲಕ್ಷ್ಮೀ ಮೂರ್ತಿಯ ಅಲಂಕಾರವನ್ನು ಮುತುವರ್ಜಿವಹಿಸಿ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು. ಕೆಲ ಮನೆಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತಿಗೀತೆಗಳ ಹಾಡುಗಳು ಕೇಳಿಬರುತ್ತಿದ್ದವು.

ಕೆಲವರು ಕಲಶದ ಮೇಲೆ ವಿವಿಧ ಲೋಹಗಳಿಂದ ಮಾಡಿದ ಲಕ್ಷ್ಮೀ ದೇವಿ ಮುಖವಾಡವನಿಟ್ಟು ಪೂಜಿಸಿದರೆ, ಹಲವರು ತೆಂಗಿನಕಾಯಿಗೆ ಹಳದಿಯ ಹಿಟ್ಟಿನಿಂದ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳನ್ನು ಏರಿಸಿ, ಸೀರೆ ಉಡಿಸಿ, ಅಲಂಕಾರ ಮಾಡಿದ್ದರು. ಮತ್ತೆ ಕೆಲವರು ಮಾರುಕಟ್ಟೆಯಲ್ಲಿ ಸಿದ್ಧವಾಗಿ ದೊರೆಯುವ ಮೂರ್ತಿಯನ್ನೇ ಪ್ರತಿಷ್ಠಾಪಿಸಿದ್ದರು. ಅಲಂಕೃತ ಮೂರ್ತಿಯ ಮುಂದೆ ಬಗೆಬಗೆಯ ಹಣ್ಣು, ತಿಂಡಿ, ತಿನಿಸು, ಬಾಗಿನ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತಿತ್ತು.

ದೇವಿಯ ಮೂರ್ತಿಗೆ ಅರಿಶಿನ, ಕುಂಕುಮ,ಹೂವು, ಪತ್ರೆ ಮತ್ತು ಅಕ್ಷತೆಯೊಂದಿಗೆ ದ್ವಾದಶನಾಮಾವಳಿ ಹೇಳುತ್ತ ಪೂಜಿಸಿದ ಹೆಣ್ಣುಮಕ್ಕಳು ಹಿರಿಯರಿಂದ ಬಲಗೈಗೆ ಕಂಕಣ ಕಟ್ಟಿಸಿಕೊಳ್ಳುತ್ತಿದ್ದರು. ಪೂಜೆಯ ಬಳಿಕ ಅಕ್ಕಪಕ್ಕದ ಮನೆಯ ಸುಮಂಗಲಿಯರನ್ನು ಮನೆಗೆ ಕರೆದು ದೇವಿಯ ಕಥಾ ಶ್ರವಣ ಮಾಡಿದ ಗೃಹಿಣಿಯರು ನಂತರ ಸುಮಂಗಲಿಯರಿಗೆ ಅರಿಶಿನ, ಕುಂಕುಮ ರವಿಕೆ ಬಟ್ಟೆ ಹಾಗೂ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು ಕೊಟ್ಟು ಕಳುಹಿಸುತ್ತಿದ್ದ ದೃಶ್ಯ ಗೋಚರಿಸಿತು.

Post Comments (+)