ಸೋಮವಾರ, ಆಗಸ್ಟ್ 26, 2019
28 °C
ನದಿ ನೀರು ಸಮುದ್ರಕ್ಕೆ ಸೇರುವುದು ವ್ಯರ್ಥ ಎಂಬ ಭಾವನೆ ಅಪಾಯಕಾರಿ

ನದಿ ಜೋಡಣೆ ಮತ್ತು ಜಲವಿಜ್ಞಾನ

Published:
Updated:
Prajavani

ನದಿ ಜೋಡಣೆಯ ಕಲ್ಪನೆಯು ಮೊದಲು ಬಂದದ್ದು 1858ರಲ್ಲಿ. ಕೃಷ್ಣಾ ಹಾಗೂ ಗೋದಾವರಿ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿಸಿದ ಬ್ರಿಟಿಷ್‌ ಅಧಿಕಾರಿ ಸರ್ ಆರ್ಥರ್ ಕಾಟನ್ ಎಂಬಾತ ಕಟ್ಟಿಕೊಟ್ಟ ಕಲ್ಪನೆ ಅದು. ಹೆಚ್ಚು ನೀರಿನ ಹರಿವಿದ್ದ ನದಿಗಳನ್ನು, ಕಡಿಮೆ ನೀರಿನ ಹರಿವಿರುವ ನದಿಗಳೊಡನೆ ಕಾಲುವೆಗಳ ಮೂಲಕ ಜೋಡಿಸುವ ಯೋಜನೆ ಆತನದಾಗಿತ್ತು. ಆದರೆ ಜಲವಿಜ್ಞಾನ ಅಲ್ಲಿಂದ ಬಹುದೂರ ಸಾಗಿಬಂದಿದೆ.

ಆತ ಇಂಗ್ಲೆಂಡ್ ಹಾಗೂ ಯುರೋಪ್ ನದಿಗಳ ಅನುಭವವನ್ನು ಹೊತ್ತು ಬಂದಿದ್ದ. ಆದರೆ ಅಲ್ಲಿಯ ನದಿಗಳು ಭಾರತೀಯ ನದಿಗಳಿಗಿಂತ ಭಿನ್ನ, ಅಂದರೆ ಯುರೋಪ್ ನದಿಗಳಲ್ಲಿನ ನೀರಿನ ಮಟ್ಟವು ವಾರ್ಷಿಕ ಕಾಲಘಟ್ಟದಲ್ಲಿ ಗಣನೀಯ ಏರಿಳಿತವನ್ನು ಕಾಣುವುದಿಲ್ಲ. ಸಾಮಾನ್ಯವಾಗಿ ಯುರೋಪ್‍ನ ನದಿಗಳಲ್ಲಿನ ನೀರಿನ ಮಟ್ಟದ ಏರಿಳಿತವು 20ರಷ್ಟು ಪ್ರತಿಶತವನ್ನು ವರ್ಷದ ಯಾವುದೇ ಸಮಯದಲ್ಲೂ ದಾಟುವುದಿಲ್ಲ. ಆದರೆ ಭಾರತದಲ್ಲಿ ಈ ಏರಿಳಿತವು 80ರಷ್ಟು ಪ್ರತಿಶತವನ್ನು ದಾಟಬಹುದು. ಮುಂಗಾರಿನಲ್ಲಿ ನೋಡಿದ ನದಿಯನ್ನು ಬೇಸಿಗೆಯಲ್ಲಿ ಮತ್ತೊಮ್ಮೆ ನೋಡಿದರೆ ನಿಮಗೆ ಗುರುತೇ ಸಿಗುವುದಿಲ್ಲ.

ಉಷ್ಣವಲಯದ ಪ್ರದೇಶದಲ್ಲಿರುವ ದೇಶದಲ್ಲಿ, ಹೆಚ್ಚು ನೀರಿನ ಹರಿವಿರುವ ನದಿ ಹಾಗೂ ಕಡಿಮೆ ನೀರಿನ ಹರಿವಿರುವ ನದಿ ಎಂಬ ಪರಿಕಲ್ಪನೆ ಬರುವುದೇ ಇಲ್ಲ. ಏಕೆಂದರೆ ಇಲ್ಲಿ ಮಳೆ ಬಂದರೆ ನದಿಗಳಲ್ಲಿ ಪ್ರವಾಹ ಉಂಟಾಗುತ್ತದೆ, ಇಲ್ಲವಾದರೆ ನದಿಗಳಲ್ಲಿ ನೀರೇ ಇರುವುದಿಲ್ಲ. ಚೆಕ್ ಡ್ಯಾಂಗಳನ್ನು ಕಟ್ಟಿಸುವುದು, ಮಳೆನೀರು ಶೇಖರಣೆಗಾಗಿ ಇಂಗುಗುಂಡಿ ನಿರ್ಮಿಸುವುದು ತಕ್ಷಣಕ್ಕೆ ಕಂಡು
ಕೊಳ್ಳಬಹುದಾದ ಪರಿಹಾರಗಳು. ಆದರೆ ದೀರ್ಘಕಾಲದಲ್ಲಿ ಮಳೆಯ ನೀರು ನದಿಯನ್ನು ಮಂದಗತಿಯಲ್ಲಿ ಸೇರುವಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದಾಗಬೇಕಾದಲ್ಲಿ ಭೂಮಿಯ ಮೇಲೆ ನೈಸರ್ಗಿಕವಾಗಿ ಸಸ್ಯರಾಶಿ ಇರಲೇಬೇಕು. ಇಲ್ಲವಾದಲ್ಲಿ, ಮತ್ತೆ ಯಾವ ದಾರಿಯೂ ಇಲ್ಲ.

ನದಿ ಜೋಡಣೆಗೆ ಬೃಹತ್ತಾದ ಆರ್ಥಿಕ ಅವಶ್ಯಕತೆಯೂ ಬೇಕಾಗುತ್ತದೆ. ವಿಶೇಷವಾಗಿ, ಸರಾಸರಿ 35 ಡಿಗ್ರಿ ಸೆಂಟಿಗ್ರೇಡ್‌ನಷ್ಟು ತಾಪಮಾನ ಹೊಂದಿರುವ ನಮ್ಮ ದೇಶದಲ್ಲಿ, ಒಂದು ನದಿಯನ್ನು ಮತ್ತೊಂದು ನದಿಗೆ ಜೋಡಿಸಲು ಸಾವಿರಾರು ಕಿ.ಮೀ.ನಷ್ಟು ಕಾಲುವೆಗಳನ್ನು ಕಟ್ಟಿಸುವುದೇ ಆದರೆ, ನದಿಯಲ್ಲಿನ ಬಹುಪಾಲು ನೀರು ಆವಿಯಾಗಿಯೇ ಹೋಗುತ್ತದೆ. ಮೇಲಾಗಿ ಭೂಮಿಯೂ ಕಾದಿರುತ್ತದೆ. ಆದ್ದರಿಂದ ಯಾವುದೇ ರೀತಿಯಲ್ಲಿ ಕಾಲುವೆಯನ್ನು ಕಟ್ಟಿದರೂ, ಎಲ್ಲಾದರೊಂದು ಕಡೆ ನೀರಿನ ಸೋರಿಕೆಯಾಗಿ ಕಾದ ನೆಲವೆಲ್ಲಾ ನೀರನ್ನು ಹೀರಿಕೊಳ್ಳುತ್ತದೆ.

ಸಮಸ್ಯೆ ಎಂದರೆ, ನೀರಿಲ್ಲದ ಕಡೆಯಲ್ಲಿಯೇ ಜನರು ಕೃಷಿಯನ್ನು ಕೈಗೆತ್ತಿಕೊಳ್ಳುತ್ತಾರೆ. ಬತ್ತಿದ ನೆಲದಲ್ಲಿ ಹೆಚ್ಚು ನೀರು ಬೇಡುವ ಬೆಳೆಗಳನ್ನು ಬೆಳೆಯಲು ಪ್ರಯತ್ನಿಸುವುದರಲ್ಲಿ ತರ್ಕವೇ ಇಲ್ಲ. ನೀರಿಲ್ಲದ ಪ್ರದೇಶದಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡು ತದನಂತರ ಅಲ್ಲಿ ಭತ್ತ ಅಥವಾ ಗೋಧಿಯನ್ನು ಬೆಳೆಯುವ ಬದಲಾಗಿ ಹೆಚ್ಚು ನೀರಿರುವಲ್ಲಿಯೇ ಇವನ್ನು ಬೆಳೆದು, ನೀರಿಲ್ಲದ ಪ್ರದೇಶಗಳಿಗೆ ಸಾಗಿಸಬಹುದು.

ಸಾಗರವನ್ನು ಸೇರುವ ನದಿ ನೀರು ಪೋಲಾಗುತ್ತದೆ ಎಂಬ ಚಿಂತನೆಯ ಆಧಾರದ ಮೇಲೆ ನದಿ ಜೋಡಣೆಯ ಯೋಜನೆಯು ನಿಂತಿದೆ. ಇದು ಬಹಳ ಅಪಾಯಕಾರಿಯಾದ ಚಿಂತನೆ. ಏಕೆಂದರೆ ನದಿಯ ನೀರು ಸಾಗರವನ್ನು ಸೇರದಿದ್ದರೆ ಅದು ಇಡಿಯ ನೀರಿನ ಚಕ್ರವನ್ನೇ ಗೊಂದಲಕ್ಕೆ ಸಿಕ್ಕಿಸುತ್ತದೆ. ಎಷ್ಟು ಪ್ರಮಾಣದಲ್ಲಿ ನದಿಯ ನೀರು ಸಾಗರವನ್ನು ಸೇರುತ್ತದೆ ಎಂಬುದು, ನಮಗೆ ಮುಂಗಾರಿನ ಸಮಯದಲ್ಲಿ ಎಷ್ಟು ಮಳೆಯಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ನದಿಯು ಸಾಗರ ತಲುಪುವುದನ್ನು ತಡೆಯುವುದರಿಂದ ಕಡಲತೀರದ ಪ್ರದೇಶಗಳಿಗೂ ಹಾನಿಯಾಗುತ್ತದೆ. ಲವಣಯುಕ್ತ (ಉಪ್ಪಿನಂಶದ) ನೀರು ಅಂತರ್ಜಲದ ಒಳನುಗ್ಗುತ್ತದೆ. ಗುಜರಾತ್ ಪ್ರತಿ ವರ್ಷವೂ 550 ಚದರ ಕಿ.ಮೀ.ನಷ್ಟು ಕಡಲತೀರವನ್ನು ಈ ಕಾರಣದಿಂದಾಗಿ ಕಳೆದುಕೊಳ್ಳುತ್ತಿದೆ.

ಉಪ್ಪಿನಂಶವು 60 ಕಿ.ಮೀ.ನಷ್ಟು ಒಳನಾಡನ್ನು ಆವರಿಸಿದೆ. ಭಾರತವು 7,400 ಕಿ.ಮೀ.ನಷ್ಟು ಕಡಲತೀರವನ್ನು ಹೊಂದಿದೆ. ಅಂದಾಜೊಂದರ ಪ್ರಕಾರ, ನದಿಯ ನೀರು ಹರಿದು ಸಾಗರವನ್ನು ಸೇರದಿದ್ದಲ್ಲಿ, ಲವಣಯುಕ್ತ ನೀರು 100-130 ಕಿ.ಮೀ.ನಷ್ಟು ಒಳ
ನುಗ್ಗುತ್ತದೆ. ಹಾಗಾದಲ್ಲಿ ಭಾರತದ ಮೂರರ ಒಂದು ಭಾಗದಷ್ಟು ಭೌಗೋಳಿಕ ಪ್ರದೇಶವನ್ನು ಲವಣಯುಕ್ತ ನೀರಿನಿಂದಾಗಿ ಕಳೆದುಕೊಳ್ಳ ಬೇಕಾಗುತ್ತದೆ. ಇಂತಹ ಸ್ಥಳಗಳಲ್ಲಿ ಸಣ್ಣ ಬೆಳೆಯನ್ನೂ ಬೆಳೆಯಲು ಸಾಧ್ಯವಿಲ್ಲ.

ಗುಜರಾತ್ ಹಾಗೂ ತಮಿಳುನಾಡಿನ ಸಮುದ್ರ ತೀರದ ಹಳ್ಳಿಗಳನ್ನು ಖಾಲಿ ಮಾಡಿ ಬೇರೆಡೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಕೊಳವೆಬಾವಿ ತೋಡಿದ ಎಲ್ಲೆಡೆಯೂ ಲವಣಯುಕ್ತ ನೀರೇ ಸಿಗುತ್ತಿದೆ. ಕೇವಲ 25 ವರ್ಷಗಳ ಹಿಂದೆಯಷ್ಟೇ ಅಲ್ಲಿ ಸಿಹಿನೀರು ಸಿಗುತ್ತಿತ್ತು.

ಪ್ರವಾಹವನ್ನು ತಗ್ಗಿಸಲು ಕೆಲವು ಪ್ರದೇಶಗಳಲ್ಲಿ ನದಿ ಜೋಡಣೆಯನ್ನು ಮಾಡಿದರೆ ಅದಕ್ಕೆ ಬೆಲೆಯಿದೆ. ಅಂತಹ ಪ್ರವಾಹ ಸನ್ನಿವೇಶವನ್ನು ನಿರಂತರ ಎದುರಿಸುವ ಪ್ರದೇಶಗಳಿರುವುದು ಕೋಶಿ, ಮಹಾನದಿ ಹಾಗೂ ಬ್ರಹ್ಮಪುತ್ರಾದ ತಟದಲ್ಲಿ. ಅದು ಬಿಟ್ಟು, ದೇಶದ ಉದ್ದಗಲಕ್ಕೂ ನಿರ್ದಯವಾಗಿ ನದಿ ಜೋಡಣೆ ಮಾಡುವುದರಿಂದ ಯಾವ ಲಾಭವೂ ಇಲ್ಲ. ಸುಸ್ಥಿರ ಸನ್ನಿವೇಶದ ಆಶಯ ನಮ್ಮದಾಗಿದ್ದರೆ, ಮಣ್ಣಿನಿಂದ ನೀರು ಮಂದಗತಿಯಲ್ಲಿ ನದಿಯನ್ನು ಸೇರುವಂತೆ ಮಾಡಬೇಕು. ಸಸ್ಯರಾಶಿಯೊಂದೇ ಇದಕ್ಕೆ ಉತ್ತರ.

Post Comments (+)