ಗುರುವಾರ , ಆಗಸ್ಟ್ 22, 2019
21 °C

ನಾನು ಕುಶನ ವಂಶಸ್ಥೆ: ಬಿಜೆಪಿ ಸಂಸದೆ ದಿಯಾ

Published:
Updated:

ಜೈಪುರ (ಪಿಟಿಐ): ಶ್ರೀರಾಮನ ಮಗ ಕುಶನ ವಂಶಸ್ಥೆ ತಾವು ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿದ್ದಾರೆ. ದಿಯಾ ಅವರು ಜೈಪುರ ರಾಜ ಕುಟುಂಬದವರು. ‘ರಘುವಂಶಕ್ಕೆ ಸೇರಿದ ಯಾರಾದರೂ ಅಯೋಧ್ಯೆಯಲ್ಲಿ ಈಗ ನೆಲೆಸಿದ್ದಾರೆಯೇ’ ಎಂದು ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಪೀಠವು ಶುಕ್ರವಾರ ಪ್ರಶ್ನಿಸಿತ್ತು. 

‘ರಾಮನ ವಂಶಸ್ಥರು ಎಲ್ಲಿದ್ದಾರೆ ಎಂದು ನ್ಯಾಯಾಲಯವು ಪ್ರಶ್ನಿಸಿದೆ... ರಾಮನ ವಂಶಸ್ಥರು ಜಗತ್ತಿನ ಎಲ್ಲೆಡೆಯೂ ಇದ್ದಾರೆ. ನಾವು ಕುಶನ ವಂಶಸ್ಥರು’ ಎಂದು ದಿಯಾ ಹೇಳಿದ್ದಾರೆ. 

ಹಸ್ತಪ್ರತಿಗಳು, ವಂಶಾವಳಿ ಮತ್ತು ರಾಜಕುಟುಂಬದಲ್ಲಿ ಲಭ್ಯ ಇರುವ ದಾಖಲೆಗಳ ಆಧಾರದಲ್ಲಿ ತಾವು ಈ ಮಾತು ಹೇಳಿದ್ದಾಗಿ ಅವರು ತಿಳಿಸಿದ್ದಾರೆ. 

‘ರಘುವಂಶದ ಯಾರಾದರೂ ಈಗ ಅಯೋಧ್ಯೆಯಲ್ಲಿ ಇರಬಹುದು ಎಂಬುದೇ ಅನುಮಾನ’ ಎಂಬ ಪೀಠದ ‍ಹೇಳಿಕೆಗೆ ರಾಮಲಲ್ಲಾ ವಿರಾಜಮಾನ್‌ ಪರ ವಕೀಲ ಕೆ.ಪರಾಶರನ್‌ ಅವರು ‘ಈ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತೇನೆ’ ಎಂದಿದ್ದರು. 

ರಾಮನ ಮೇಲೆ ಎಲ್ಲರಿಗೂ ಭಕ್ತಿ ಇದೆ. ಹಾಗಾಗಿ, ರಾಮಮಂದಿರ ಪ್ರಕರಣದ ವಿಚಾರಣೆಯನ್ನು ಬೇಗನೆ ಮುಗಿಸಿ ತೀರ್ಪು ಪ್ರಕಟಿಸಬೇಕು ಎಂದು ದಿಯಾ ಕೋರಿದ್ದಾರೆ.

Post Comments (+)