ಗುರುವಾರ , ಆಗಸ್ಟ್ 22, 2019
27 °C
ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳಿಗೆ ಹಾನಿ

ಪ್ರವಾಹ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ₹ 274 ಕೋಟಿ ಮೊತ್ತದ ನಷ್ಟ

Published:
Updated:
Prajavani

ಧರ್ಮಸ್ಥಳ (ಮಂಗಳೂರು): ಮಳೆ ಮತ್ತು ಭೂಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆ, ಸೇತುವೆ, ಕಟ್ಟಡ ಮತ್ತಿತರ ಸಾರ್ವಜನಿಕ ಆಸ್ತಿಗಳು ಹಾಳಾಗಿವೆ. ₹ 274 ಕೋಟಿ ಮೊತ್ತದ ನಷ್ಟ ಉಂಟಾಗಿದೆ ಎಂಬುದು ಪ್ರಾಥಮಿಕ ಹಂತದ ಅಂದಾಜು ವರದಿಯಲ್ಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಅವಲೋಕಿಸಲು ಧರ್ಮಸ್ಥಳದ ಅತಿಥಿ ಗೃಹದಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿದ ಅವರು, ‘ಲೋಕೋಪಯೋಗಿ ಇಲಾಖೆಯ ರಸ್ತೆ ಮತ್ತು ಸೇತುವೆಗಳಿಗೆ ಆಗಿರುವ ಹಾನಿಯಿಂದ ₹ 142 ಕೋಟಿ ನಷ್ಟವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಸ್ತಿಗಳಿಗೆ ₹ 62 ಕೋಟಿ ನಷ್ಟವಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ₹ 15 ಕೋಟಿ ಮತ್ತು ಮೆಸ್ಕಾಂಗೆ ₹ 6.5 ಕೋಟಿ ನಷ್ಟವಾಗಿದೆ’ ಎಂದು ತಿಳಿಸಿದರು.

ಸಾರ್ವಜನಿಕ ಆಸ್ತಿಗಳಿಗೆ ಆಗಿರುವ ಹಾನಿ ಕುರಿತು ಅಧಿಕಾರಿಗಳು ಪ್ರಾಥಮಿಕ ವರದಿ ಸಿದ್ಧಪಡಿಸಿದ್ದಾರೆ. ಪೂರ್ಣ ಪ್ರಮಾಣದ ವರದಿ ಲಭ್ಯವಾದ ಬಳಿಕ ಹಾನಿಯ ಖಚಿತ ಅಂದಾಜು ಲಭ್ಯವಾಗಲಿದೆ. ರಸ್ತೆಗಳ ದುರಸ್ತಿ ಮತ್ತು ಕಟ್ಟಡಗಳ ಮರು ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ತಡೆಗೋಡೆ ನಿರ್ಮಾಣ: ಸಸಿಹಿತ್ಲುವಿನಿಂದ ಮುಕ್ಕವರೆಗಿನ 2.5 ಕಿ.ಮೀ. ಕಡಲ ತೀರದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಹಲವು ಮನೆಗಳಿಗೆ ಹಾನಿಯಾಗಿದೆ. ತಕ್ಷಣವೇ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿದ್ದ ಮೂಡುಬಿದಿರೆ ಕ್ಷೇತ್ರದ ಶಾಸಕ ಕೆ.ಉಮಾನಾಥ ಕೋಟ್ಯಾನ್‌ ಒತ್ತಾಯಿಸಿದರು.

‘ಕಡಲ್ಕೊರೆತ ತಡೆಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ನೆರವಿನಲ್ಲಿ ಎರಡನೇ ಹಂತದ ಯೋಜನೆಗೆ ಅನುಮೋದನೆ ದೊರತಿದೆ. ಅದರ ಅಡಿಯಲ್ಲೇ ಈ ಭಾಗದಲ್ಲೂ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಕಾನೂನು ತೊಡಕಿನ ನೆಪವೊಡ್ಡಿ ಅಧಿಕಾರಿಗಳು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಹಿಂದೇಟು ಹಾಕಬಹುದು ಎಂದು ಕೋಟ್ಯಾನ್‌ ಮತ್ತು ಉಳ್ಳಾಲ ಶಾಸಕ ಯು.ಟಿ.ಖಾದರ್‌ ಅನುಮಾನ ವ್ಯಕ್ತಪಡಿಸಿದರು. ಎಡಿಬಿ ಯೋಜನೆಯಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಅವರಿಗೆ ಯಡಿಯೂರಪ್ಪ ಸೂಚಿಸಿದರು.

ಮಂಗಳೂರು ನಗರದ ಬೆಂಗರೆ, ಕುದ್ರೋಳಿ, ಬಂದರು, ಜೆಪ್ಪು ಸೇರಿದಂತೆ ಹಲವು ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗುತ್ತಿದೆ. ಇಲ್ಲಿಯೂ ತಡೆಗೋಡೆ ನಿರ್ಮಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್‌ ಆಗ್ರಹಿಸಿದರು. ಈ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರವಾಹ ಮತ್ತು ಭೂಕುಸಿತದಿಂದ ಕೃಷಿ ಮತ್ತು ತೋಟಗಾರಿಕೆ ಜಮೀನುಗಳಿಗೆ ಹಾನಿಯಾಗಿರುವ ಪ್ರಕರಣಗಳಲ್ಲಿ ಹೆಚ್ಚಿನ ಪರಿಹಾರ ನೀಡುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಆಗ್ರಹಿಸಿದರು. ಮಳೆ ಹಾನಿ ಅಂದಾಜು ಮಾಡಲು ಅನುಕೂಲವಾಗುವಂತೆ ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಮತ್ತು ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಗಳಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಮನವಿ ಮಾಡಿದರು.

ವರದಿಗೆ ಸೂಚನೆ: ಬಂಟ್ವಾಳದಲ್ಲಿ ಪಟ್ಟಣ ಪ್ರದೇಶವನ್ನು ಪ್ರವಾಹ ಆವರಿಸಿತ್ತು. ಅಂಗಡಿಗಳಿಗೆ, ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿದೆ. ಈ ರೀತಿ ನಷ್ಟ ಉಂಟಾದವರಿಗೂ ಪರಿಹಾರ ನೀಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಒತ್ತಾಯಿಸಿದರು. ಯು.ಟಿ.ಖಾದರ್‌ ಕೂಡ ದನಿಗೂಡಿಸಿದರು.

ಅಂಗಡಿ, ವಾಣಿಜ್ಯ ಮಳಿಗೆ ಸೇರಿದಂತೆ ಪಟ್ಟಣ ಪ್ರದೇಶದಲ್ಲಿ ಆಗಿರುವ ಹಾನಿಯ ಕುರಿತು ಅಂದಾಜು ಮಾಡಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.

ಸೀಮೆಎಣ್ಣೆ ಪೂರೈಕೆ: ‘ಜಿಲ್ಲೆಯಲ್ಲಿ ಮೂರು ತಿಂಗಳಿನಿಂದ ಗ್ರಾಮೀಣ ಪ್ರದೇಶಗಳಿಗೆ ಸೀಮೆಎಣ್ಣೆ ಪೂರೈಕೆ ಸ್ಥಗಿತವಾಗಿದೆ. ಈಗ ಮಳೆಯಿಂದಾಗಿ ಹತ್ತು ದಿನಗಳಿಂದ ವಿದ್ಯುತ್‌ ಪೂರೈಕೆ ಇಲ್ಲ. ತಕ್ಷಣದಲ್ಲೇ ಸೀಮೆಎಣ್ಣೆ ಪೂರೈಕೆ ಮಾಡಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಹರೀಶ್‌ ಕುಮಾರ್‌ ಆಗ್ರಹಿಸಿದರು.

ಶೀಘ್ರದಲ್ಲೇ ಸೀಮೆಎಣ್ಣೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಮುಖ್ಯಮಂತ್ರಿಯವರ ಸಲಹೆಗಾರ ಎಂ.ಲಕ್ಷ್ಮೀನಾರಾಯಣ್‌, ಸಂಸದ ನಳಿನ್‌ಕುಮಾರ್‌ ಕಟೀಲ್‌, ವಿಧಾನ ಪರಿಷತ್‌ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ರವಿಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಇದ್ದರು.

Post Comments (+)