ಸೋಮವಾರ, ಆಗಸ್ಟ್ 26, 2019
21 °C

ನಮ್ಮ ನಗರ ನಮ್ಮ ಧ್ವನಿ ಪ್ರತಿಕ್ರಿಯೆಗಳು

Published:
Updated:

ಬೆಂಗಳೂರು: ಮನೆಮನೆಗೆ ಆಹಾರ ತಲುಪಿಸುವ ‘ಡೆಲಿವರಿ ಬಾಯ್‌’ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಯ ‘ನಮ್ಮ ನಗರ ನಮ್ಮ ಧ್ವನಿ’ಯಲ್ಲಿ ಭಾನುವಾರ ಪ್ರಕಟವಾದ ವರದಿಗೆ ಓದುಗರು ಪ್ರತಿಕ್ರಿಯಿಸಿದ್ದಾರೆ. ಹುಡುಗರ ಮೇಲೆ ಗ್ರಾಹಕರು ದರ್ಪ ತೋರಬಾರದು ಎಂದು ಓದುಗರು ಕಿವಿಮಾತು ಹೇಳಿದ್ದು, ಆಯ್ದ ಪ್ರತಿಕ್ರಿಯೆಗಳು ಹೀಗಿವೆ.

ನಿಮ್ಮ ಗುಲಾಮರಲ್ಲ

ಬಿಸಿಲು, ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೇ ಹಗಲು ರಾತ್ರಿ ಗ್ರಾಹಕರ ಹೊಟ್ಟೆ ತುಂಬಿಸುವ ಹುಡುಗರು ಮಾಲೀಕರಿಂದ ಬೈಗುಳ ತಿನ್ನಬೇಕಿದೆ. ಇತ್ತ ಗ್ರಾಹಕರ ದರ್ಪ ಎದುರಿಸಬೇಕಿದೆ. ಇದು ಅಮಾನವೀಯ. ಅವರೂ ನಮ್ಮಂತೆ ಮನುಷ್ಯರೇ ಹೊರತು ಗುಲಾಮರಲ್ಲ.

ಸಯ್ಯದ್ ಪಾಷ, ಬೆಂಗಳೂರು

***

ಮನುಷ್ಯತ್ವ ಮರೆಯಾಗದಿರಲಿ

ಗ್ರಾಹಕರೇ ದೇವರು ಎಂಬ ಸ್ಥಾನ ನೀಡಿ ಡೆಲಿವರಿ ಹುಡುಗರು ಆಹಾರ ತಲುಪಿಸುತ್ತಾರೆ. ಆದರೆ, ಆ ಗೌರವವನ್ನು ಉಳಿಸಿಕೊಳ್ಳದ ಕೆಲ ಗ್ರಾಹಕರು ಮುಖ ಗಂಟು ಮಾಡಿಕೊಂಡು ಅವರ ಮೇಲೆ ಕೂಗಾಡುವುದು ಎಷ್ಟರ ಮಟ್ಟಿಗೆ ಸರಿ?

ಎಂ.ಎಸ್.ರಾಘವೇಂದ್ರ, ಹೊಸಕೋಟೆ

***

ದರ್ಪ ತೋರದಿರಿ

ನಿಮ್ಮೆಲ್ಲರ ಹೊಟ್ಟೆ ತುಂಬಿಸುವ ಅವರ ಹೊಟ್ಟೆ ತುಂಬಿಸುತ್ತಿರುವುದು ಡೆಲಿವರಿ ವೃತ್ತಿ. ಯಾವುದೇ ವೃತ್ತಿಯನ್ನು ಕೀಳಾಗಿ ನೋಡಬೇಡಿ. ಸಂಚಾರ ದಟ್ಟಣೆಯ ನಡುವೆಯೂ ಸಾಗಿ ಆಹಾರ ಕೈಲಿಡುತ್ತಾರೆ. ಅಂತಹವರ ಮೇಲೆ ನಿಮ್ಮ ದರ್ಪ ತೋರದಿರಿ.

ಬಿ.ಆರ್.ಮಾರುತಿ, ವಿಜಯನಗರ

***

ಸಂಚಾ‌ರಿ ನಿಯಮ ಪಾಲಿಸಿ

ಆಹಾರ ಸರಬರಾಜು ಮಾಡುವ ಭರದಲ್ಲಿ ಹುಡುಗರು ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ಸರಬರಾಜು ಮಾಡುವ ಹೆಸರಲ್ಲಿ ನಿಯಮ ಉಲ್ಲಂಘನೆ ಮಾಡದಿರಿ. ಹೆಚ್ಚಾದ ದಂಡದ ಪ್ರಮಾಣ ನಿಮ್ಮ ಸಂಬಳಕ್ಕೆ ಮಾರಕವಾಗಲಿದೆ. 

ವೆಂಕಟೇಶ್, ಬೆಂಗಳೂರು

***

ಸೌಲಭ್ಯ ಒದಗಿಸಿ

ಡೆಲಿವರಿ ಹುಡುಗರ ಹುದ್ದೆಗೆ ಇಎಸ್ಐ, ಪಿಎಫ್‌ ಸೌಲಭ್ಯವಿಲ್ಲ. ಅವರ ಹೆಗಲ ಮೇಲೂ ಕೌಟುಂಬಿಕ ಜವಾಬ್ದಾರಿ ಇರುವುದರಿಂದ ಅವರಿಗೆ ಸೂಕ್ತ ಸೌಲಭ್ಯ, ಭದ್ರತೆ ಒದಗಿಸಬೇಕು. 

ನಾಗವೇಣಿ, ಆರ್.ಟಿ.ನಗರ

***

ಬಾಳೆ ಎಲೆಯಲ್ಲಿ ಆಹಾರ ಕೊಡಿ

ಆನ್‌ಲೈನ್‌ ಮೂಲಕ ಆಹಾರ ತರಿಸಿಕೊಳ್ಳುತ್ತಿರುವ ವಿಧಾನ ಉತ್ತಮವಾಗಿದೆ. ಆದರೆ, ಆಹಾರ ಸರಬರಾಜಿನಿಂದ ಅಧಿಕ ಪ್ರಮಾಣದ ಪ್ಲಾಸ್ಟಿಕ್ ಹೊರಬೀಳುತ್ತಿದೆ. ಪ್ಲಾಸ್ಟಿಕ್‌ ಬದಲಿಗೆ ಪೇಪರ್‌ ಅಥವಾ ಬಾಳೆ ಎಲೆಯಲ್ಲಿ ಆಹಾರ ಪೂರೈಸುವುದು ಸೂಕ್ತ.

ಗೌರಿ, ಬೆಂಗಳೂರು

Post Comments (+)