ಶನಿವಾರ, ಆಗಸ್ಟ್ 24, 2019
23 °C
1979ರ ಹಕ್ಕುಪತ್ರ ರದ್ದುಪಡಿಸಿದ್ದ ಹೈಕೋರ್ಟ್‌

ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

Published:
Updated:

ನವದೆಹಲಿ: ಉಚಿತ ನಿವೇಶನ ಮಂಜೂರು ಮಾಡಿ, 1979ರಲ್ಲಿ ವಿತರಿಸಲಾಗಿದ್ದ ಹಕ್ಕು ಪತ್ರಗಳನ್ನು ಮಾನ್ಯ ಮಾಡುವ ಮೂಲಕ ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಹೊಸದಾಗಿ ವಿಚಾರಣೆ ನಡೆಸಿ ಮೂರು ತಿಂಗಳೊಳಗೆ ಪ್ರಕರಣ ಇತ್ಯರ್ಥಪಡಿಸಬೇಕು ಎಂದು ನ್ಯಾಯಮೂರ್ತಿ
ಗಳಾದ ಎ.ಎಂ. ಖನ್ವಿಲ್ಕರ್‌ ಹಾಗೂ ದಿನೇಶ್‌ ಮಾಹೇಶ್ವರಿ ಅವರಿದ್ದ ಪೀಠ ವಿಶೇಷ ಜಿಲ್ಲಾಧಿಕಾರಿಗೆ ಸೂಚಿಸಿದೆ.

ಅಲ್ಲದೆ, ಪ್ರಸ್ತುತ ಆದೇಶದ ಪ್ರತಿಯನ್ನು ಸಂಬಂಧಿಸಿದ ಅಧಿಕಾರಿಗೆ ಕಳುಹಿಸುವಂತೆ ನಿರ್ದೇಶನ ನೀಡಿರುವ ಪೀಠ, ಕೋರ್ಟ್‌ ಆದೇಶ ಪಾಲಿಸಿ ಕ್ರಮ ಕೈಗೊಂಡ ವರದಿಯನ್ನು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ಗೆ ನಿಗದಿತ ಸಮಯದೊಳಗೆ ಸಲ್ಲಿಸುವಂತೆಯೂ ಹೇಳಿದೆ.

‘ಮನೆ ಇಲ್ಲದವರಿಗೆ ನಿವೇಶನ ನೀಡಿ 1979ರಲ್ಲಿ ನೀಡಲಾದ ಹಕ್ಕು ಪತ್ರಗಳನ್ನು ಆಧರಿಸಿ 2010ರ ಆಗಸ್ಟ್‌ 4ರಂದು ನಿವೇಶನ ಮಂಜೂರಾತಿ ಮಾಡಿದ್ದ ವಿಶೇಷ ಜಿಲ್ಲಾಧಿಕಾರಿಯವರ ಕ್ರಮವು ಅಧಿಕಾರ ವ್ಯಾಪ್ತಿ ಮೀರಿದ್ದು’ ಎಂಬ ಕಾರಣದಿಂದ ರದ್ದುಪಡಿಸುವ ಮೂಲಕ 2019ರ ಫೆಬ್ರುವರಿ 28ರಂದು ಹೈಕೋರ್ಟ್ ಆದೇಶ ನೀಡಿತ್ತು.

ಇದನ್ನು ಪ್ರಶ್ನಿಸಿ ಜೆ.ಎಚ್‌. ಪಾರ್ವತಮ್ಮ ಮತ್ತಿತರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಬೆಂಗಳೂರು ದಕ್ಷಿಣದಲ್ಲಿ ಇರುವ 1 ಎಕರೆ 34 ಗುಂಟೆ ಸರ್ಕಾರಿ ಜಮೀನಿನ ವಿವಾದಕ್ಕೆ ಸಂಬಂಧಿಸಿದ ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ನಡೆಸಿತ್ತು. ಕಳೆದ 40 ವರ್ಷಗಳಿಂದ ಸರ್ಕಾರ ತನ್ನ ಒಡೆತನದ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದೆ. ಹಕ್ಕು ಸ್ಥಾಪಿಸಲು ಯಾವುದೇ ಆಧಾರ ಇಲ್ಲದ ಅನೇಕರು ಪ್ರಕರಣಗಳ ಮೇಲೆ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸಿದ್ದಾರೆ. ಅವರಿಗೆ ಭೂಮಿ ಮಂಜೂರು ಮಾಡಲು ಸಮರ್ಪಕ ದಾಖಲೆಗಳಿಲ್ಲ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ
ಅಭಿಪ್ರಾಯಪಟ್ಟಿತ್ತು.

Post Comments (+)