ಬುಧವಾರ, ಆಗಸ್ಟ್ 21, 2019
28 °C

ಬಿಬಿಎಂಪಿಗೆ ಇಂದಿರಾ ಕ್ಯಾಂಟೀನ್ ‘ಹೊರೆ’

Published:
Updated:
Prajavani

ಬೆಂಗಳೂರು: ರಾಜ್ಯ ಸರ್ಕಾರದ ಅನುದಾನ ಪಡೆದು ನಡೆಸಲಾಗುತ್ತಿದ್ದ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಹೊರೆಯನ್ನು ಇನ್ನು ಮುಂದೆ ಬಿಬಿಎಂಪಿಯೇ ಹೊರಬೇಕಾಗಿದೆ.

ಇಂದಿರಾ ಕ್ಯಾಂಟೀನ್‌ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಗೆ ರಾಜ್ಯ ಸರ್ಕಾರವೇ ಅನುದಾನ ಒದಗಿಸುವ ಭರವಸೆ ನೀಡಿತ್ತು. ಅದರಂತೆ 2017-18ನೇ ಸಾಲಿನಲ್ಲಿ ₹100 ಕೋಟಿ ಬಿಡುಗಡೆ ಮಾಡಿ ಯೋಜನೆಗೆ ಚಾಲನೆಯನ್ನೂ ನೀಡಲಾಗಿತ್ತು.

ವರ್ಷ ಮುಗಿಯುವಷ್ಟರಲ್ಲಿ ಕ್ಯಾಂಟೀನ್‌ ನಿರ್ವಹಣಾ ವೆಚ್ಚ ₹124 ಕೋಟಿ ಆಗಿತ್ತು. 2018–19ನೇ ಸಾಲಿನಲ್ಲಿ ₹115 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಎರಡು ವರ್ಷಗಳಲ್ಲಿ ₹58 ಕೋಟಿ ಹೆಚ್ಚುವರಿ ಹಣವನ್ನು ಬಿಬಿಎಂಪಿ ಖರ್ಚು ಮಾಡಿದೆ. 2019–20ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಹಣ ನಿಗದಿ ಮಾಡಲೇ ಇಲ್ಲ.

‌ಕ್ಯಾಂಟೀನ್‌ ನಿರ್ವಹಣೆಗೆ ಈ ವರ್ಷ ಕನಿಷ್ಠ ₹152 ಕೋಟಿ ಬೇಕಿದೆ ಎಂದು ಬಿಬಿಎಂಪಿ ಅಂದಾಜು ಮಾಡಿದೆ. ಬಾಕಿ ₹58 ಕೋಟಿ ಸೇರಿ ₹210 ಕೋಟಿ ಬಿಡುಗಡೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಎರಡು ಬಾರಿ ಮನವಿ ಮಾಡಿದೆ.

ಆದರೆ, ಇಲಾಖೆ ಬಾಕಿ ಮೊತ್ತವನ್ನಾಗಲೀ, ಪ್ರಸಕ್ತ ಸಾಲಿನ ನಿರ್ವಹಣೆಗೆ ಬೇಕಿರುವ ಅನುದಾನವನ್ನಾಗಲೀ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಸರ್ಕಾರ ಅನುದಾನ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದ ಬಿಬಿಎಂಪಿ, ತನ್ನ ಬಜೆಟ್‌ನಲ್ಲೂ ಹಣ ನಿಗದಿ ಮಾಡಿ
ಕೊಂಡಿಲ್ಲ. ಈಗ ಸರ್ಕಾರ ಕೈಚೆಲ್ಲಿದ್ದು, ಪಾಲಿಕೆ ಹಣದಲ್ಲೇ ನಿರ್ವಹಣೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

Post Comments (+)