ಸೋಮವಾರ, ಆಗಸ್ಟ್ 26, 2019
22 °C
ವಿರೋಧ ಪಕ್ಷದ ಸ್ಥಾನಮಾನ: ಅನ್ವಯವಾಗದ ಪಕ್ಷಾಂತರ ನಿಷೇಧ ಕಾಯ್ದೆ

ಸಿಕ್ಕಿಂ: ಎಸ್‌ಡಿಎಫ್‌ನ 10 ಶಾಸಕರು ಬಿಜೆಪಿಗೆ

Published:
Updated:
Prajavani

ನವದೆಹಲಿ: ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ನ (ಎಸ್‌ಡಿಎಫ್‌) 13 ಶಾಸಕರ ಪೈಕಿ ಹತ್ತು ಮಂದಿ ಮಂಗಳವಾರ ಬಿಜೆಪಿ ಸೇರಿದರು. ಹೀಗಾಗಿ ಆ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನಮಾನ ದೊರೆಯಿತು.

ಈಚೆಗೆ ನಡೆದ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲೂ ಜಯಗಳಿಸದ ಬಿಜೆಪಿ ಈಗ ವಿರೋಧ ಪಕ್ಷದ ಸ್ಥಾನ ಪಡೆದುಕೊಳ್ಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿಯನ್ನುಂಟು ಮಾಡಿದೆ.

 ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ಈಶಾನ್ಯ ರಾಜ್ಯಗಳ ಉಸ್ತುವಾರಿ ವಹಿಸಿಕೊಂಡಿರುವ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಅವರ ಸಮ್ಮುಖದಲ್ಲಿ ಶಾಸಕರು ಬಿಜೆಪಿ ಸೇರಿದರು.

32 ಸದಸ್ಯ ಬಲದ ವಿಧಾನಸಭೆಯಲ್ಲಿ ಎಸ್‌ಡಿಎಫ್‌ನ 13 ಶಾಸಕರಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಎಸ್‌ಡಿಎಫ್‌ 15 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ, ಇಬ್ಬರು ಶಾಸಕರು ತಲಾ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದರಿಂದ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ, ಪಕ್ಷದ ಬಲ 13ಕ್ಕೆ ಇಳಿದಿತ್ತು. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಸ್ಥಾನಗಳಲ್ಲಿ ಜಯಗಳಿಸಿದ್ದು, ಆ ಪಕ್ಷದ ಪ್ರೇಮ್‌ಸಿಂಗ್‌ ತಮಾಂಗ್‌ ಮುಖ್ಯಮಂತ್ರಿಯಾಗಿದ್ದಾರೆ.

ಮೂರನೇ ಎರಡರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಬೇರೆ ಪಕ್ಷವನ್ನು ಸೇರಿದರೆ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಯಾಗುವುದಿಲ್ಲ.

ಪವನ್‌ ಕುಮಾರ್‌ ಚಾಮ್ಲಿಂಗ್‌ ನೇತೃತ್ವದ ಎಸ್‌ಡಿಎಫ್‌, ಸುಮಾರು 25 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿತ್ತು. ಈ ಮೂಲಕ ದೇಶದಲ್ಲೇ ಅತಿ ಹೆಚ್ಚಿನ ಅವಧಿಗೆ ಆಡಳಿತ ನಡೆಸಿದ ಕೀರ್ತಿಗೆ ಚಾಮ್ಲಿಂಗ್‌ ಪಾತ್ರರಾಗಿದ್ದರು.

ಚಾಮ್ಲಿಂಗ್‌ ಸರ್ಕಾರದಲ್ಲಿ ಮೂರು ಬಾರಿ ಸಚಿವರಾಗಿದ್ದ ದೊರ್ಜೀ ಶೆರಿಂಗ್‌ ಲೆಪ್ಚಾ ಮತ್ತು ಮೂರು ಬಾರಿ ಶಾಸಕರಾಗಿದ್ದ ಯುಗೆನ್‌ ಗ್ಯೆಟ್ಸೊ ಬಿಜೆಪಿ ಸೇರಿದ ಪ್ರಮುಖರು.

’ಸಿಕ್ಕಿಂನಲ್ಲಿ ಕಮಲ ಅರಳಿಸುತ್ತೇವೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ ನಿಲುವು ಮೆಚ್ಚಿ ಬಿಜೆಪಿ ಸೇರಿದ್ದೇವೆ’ ಎಂದು ಲೆಪ್ಚಾ ತಿಳಿಸಿದರು.

 

Post Comments (+)