ಬುಧವಾರ, ಆಗಸ್ಟ್ 21, 2019
25 °C

‘ಇಂಡಿಯನ್‌ 2’ ಬಂಡವಾಳ ₹200 ಕೋಟಿ

Published:
Updated:

ಶಂಕರ್‌ ಹಾಗೂ ಕಮಲ್‌ ಹಾಸನ್‌ ಅವರ ಬಹುನಿರೀಕ್ಷಿತ ಚಿತ್ರ ‘ಇಂಡಿಯನ್ 2’ ಚಿತ್ರಕತೆ ಸಿದ್ಧಗೊಂಡು ವರ್ಷ ಕಳೆದರೂ, ಬಂಡವಾಳ ವಿವಾದದಿಂದಾಗಿ ಚಿತ್ರೀಕರಣ ಆರಂಭವಾಗಿರಲಿಲ್ಲ. ಈಗ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಲೈಕಾ ಪ್ರೊಡಕ್ಷನ್‌ ಬಂಡವಾಳವನ್ನು ₹50 ಕೋಟಿ ಹೆಚ್ಚಿಸಿದ್ದು, ಒಟ್ಟು ₹200 ಕೋಟಿ ವೆಚ್ಚದಲ್ಲಿ ಸಿನಿಮಾ ಸಿದ್ಧವಾಗಲಿದೆ. 

ಬಂಡವಾಳ ವಿಚಾರದಲ್ಲಿ ನಿರ್ದೇಶಕ ಶಂಕರ್‌ ಹಾಗೂ ಲೈಕಾ ಪ್ರೊಡಕ್ಷನ್‌ ನಡುವೆ ಕೊಂಚ ಮನಸ್ತಾಪ ಉಂಟಾಗಿತ್ತು.  ಭಾರಿ ಕುತೂಹಲ ಮೂಡಿಸಿದ್ದ ಈ ಚಿತ್ರ ಸೆಟ್ಟೇರುವುದೋ ಇಲ್ಲವೋ  ಎಂದು ಅಭಿಮಾನಿಗಳಿಗೆ ಗೊಂದಲ ಮೂಡಿಸಿತ್ತು. ಈಗ ಬಜೆಟ್‌ ಏರಿಕೆಯಿಂದ ಈ ಗೊಂದಲಕ್ಕೆ ತೆರೆ ಬಿದ್ದಿದೆ. 

ಈ ಚಿತ್ರದಲ್ಲಿ ಗ್ರಾಫಿಕ್ಸ್‌ ಕೆಲಸಗಳು ತುಂಬಾ ಇರಲಿರುವುದರಿಂದ ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ. ನಿರ್ದೇಶಕ 
ಶಂಕರ್‌ ಅವರ ಕತೆ, ಇಚ್ಛೆಯಂತೆ ಚಿತ್ರವನ್ನು ನಿರ್ಮಾಣ ಮಾಡಲಾಗುವುದು. ರಜನಿಕಾಂತ್‌ ಅವರ ‘2.0’ ಚಿತ್ರದಂತೆ ಇದರಲ್ಲೂ ತಂತ್ರಜ್ಞಾನ ಗುಣಮಟ್ಟದಲ್ಲಿ ರಾಜಿಯಿಲ್ಲ ಎಂದು ಲೈಕಾ ಪ್ರೊಡಕ್ಷನ್‌ ತಿಳಿಸಿದೆ. 

ಈ ಸಿನಿಮಾ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಸಿದ್ಧಾರ್ಥ್‌ ಹಾಗೂ ರಕುಲ್‌ ಪ್ರೀತ್‌ ಸಿಂಗ್‌ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಸೆಪ್ಟೆಂಬರ್‌ ತಿಂಗಳಲ್ಲಿ ಕಮಲ್‌ ಹಾಸನ್‌ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಪ್ರಿಯಾ ಭವಾನಿ ಶಂಕರ್‌, ಐಶ್ವರ್ಯಾ ರಾಜೇಶ್‌ ಇತರರು ಈ ಸಿನಿಮಾದಲ್ಲಿದ್ದಾರೆ.

Post Comments (+)