ಬುಧವಾರ, ಆಗಸ್ಟ್ 21, 2019
27 °C
ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಸನ್ಮಾನ

ಚಿಕ್ಕಬಳ್ಳಾಪುರ | ಜಿಲ್ಲೆಗೆ ಸಂಪೂರ್ಣ ಸಹಕಾರ ನೀಡುವೆ: ಜಿಲ್ಲಾಧಿಕಾರಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಸರ್ಕಾರಿ ಅಧಿಕಾರಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುವ ಚಿಕ್ಕಬಳ್ಳಾಪುರದ ಜನತೆಯನ್ನು ನಾನು ಎಲ್ಲೇ ಇದ್ದರೂ ಮರೆಯುವುದಿಲ್ಲ. ನಾನು ಯಾವುದೇ ಇಲಾಖೆಯಲ್ಲಿ ಇರಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದರು.

ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್‌ ಹೆಗಡೆ ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಬುಧವಾರ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯ ಜನರನ್ನು ಬೇರೆ ಜಿಲ್ಲೆಯವರೊಂದಿಗೆ ಹೋಲಿಕೆ ಮಾಡಿದರೆ ಇಲ್ಲಿನ ಜನರು ಸೌಮ್ಯ ಸ್ವಭಾವದವರು ಹಾಗೂ ಬದ್ಧತೆ, ಪ್ರಾಮಾಣಿಕತೆ ಉಳ್ಳವರು. ಇಲ್ಲಿ ಕುಡಿಯುವ ನೀರಿಗೆ ತುಂಬಾ ಸಮಸ್ಯೆ ಇದೆ. ಆದರೂ ಇಲ್ಲಿನ ರೈತರು ಧೈರ್ಯದಿಂದ ಬರವನ್ನು, ಸಮಸ್ಯೆಗಳನ್ನು ಛಲದಿಂದ ಎದುರಿಸುತ್ತ ಹೋರಾಟ ಮಾಡುವ ಗುಣ ನನಗೆ ತುಂಬಾ ಇಷ್ಟವಾಯಿತು’ ಎಂದು ತಿಳಿಸಿದರು.

‘ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸಾಮಾನ್ಯ ಸಂಗತಿ. ಅದು ಶಿಕ್ಷೆ ಅಲ್ಲ. ನನಗೆ ಇಷ್ಟೊಂದು ಅದ್ಭುತವಾಗಿ ಬೀಳ್ಕೊಡುಗೆ ಕೊಟ್ಟು ನನಗೆ ಧೈರ್ಯ ತುಂಬಿದ ಎಲ್ಲಾ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸುವೆ. ಇಲ್ಲಿನ ಸಾರ್ವಜನಿಕರು, ರೈತ ಸಂಘಟನೆಗಳು, ಸಂಘ ಸಂಸ್ಥೆಗಳು ಜಿಲ್ಲೆಯ ಅಭಿವೃದ್ಧಿಗೆ ತುಂಬಾ ಸಹಕಾರ ನೀಡಿದ್ದಾರೆ. ನೂತನ ಜಿಲ್ಲಾಧಿಕಾರಿ, ಸಿಇಒ ಅವರಿಗೂ ಸಹಕರಿಸಿ ಅಭಿವೃದ್ಧಿಗೆ ಶ್ರಮಿಸಿ’ ಎಂದು ಮನವಿ ಮಾಡಿದರು.

‘ನಾನು ಜಿಲ್ಲೆಗೆ ಬಂದ ಆರಂಭದಲ್ಲಿ ಇಲ್ಲಿನ ಪತ್ರಕರ್ತರ ಬಗ್ಗೆ ನನಗೆ ಕೆಲವರು ಋಣಾತ್ಮಕವಾಗಿ ಹೇಳಿದ್ದರು. ಆದರೆ ಅದನ್ನು ನಾನು ನಂಬಲಿಲ್ಲ. ನಾವು ಮಾಡುವ ಕೆಲಸ ಸರಿಯಾಗಿದ್ದರೆ ನಮ್ಮನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ನಾನು ಸಾಕಷ್ಟು ಜಿಲ್ಲೆಗಳ ಪತ್ರಕರ್ತರನ್ನು ನೋಡಿದ್ದೇನೆ. ಆದರೆ ಇಲ್ಲಿನ ಪತ್ರಕರ್ತರು ತುಂಬಾ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ’ ಎಂದು ಶ್ಲಾಘಿಸಿದರು.

ಗುರುದತ್ ಹೆಗಡೆ ಮಾತನಾಡಿ, ‘ಜಿಲ್ಲೆಯಲ್ಲಿ ನೀರಿಗೆ ತುಂಬಾ ಸಮಸ್ಯೆ ಇದ್ದ ಸಂದರ್ಭದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ನಮಗೆ ತುಂಬಾ ಸಹಕಾರ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರ ಸೇವೆ ಮಾಡಲು ಅವಕಾಶ ಸಿಕ್ಕರೆ ಖಂಡಿತ ಬರುತ್ತೇನೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ, ಮಾಜಿ ಅಧ್ಯಕ್ಷ ಎಂ.ಜಯರಾಂ, ಖಜಾಂಚಿ ಕೆ.ಎಸ್.ನಾರಾಯಣಸ್ವಾಮಿ, ಕರ್ನಾಟಕ ಅಂಗವಿಕಲರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಉಷಾಕಿರಣ್ ಹಾಗೂ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

Post Comments (+)