ಗುರುವಾರ , ಆಗಸ್ಟ್ 22, 2019
27 °C
ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗುವ ಬಡ ರೋಗಿಗಳಿಗೆ ದಾನಿಗಳ ಮೂಲಕ ಸಹಾಯ ಕಲ್ಪಿಸುವ ವಿನೂತನ ಸಮಾಜಮುಖಿ ಪ್ರಯತ್ನ

‘ಅಕ್ಷಯ ನೆರವು’ ಕೇಂದ್ರ ಉದ್ಘಾಟನೆ

Published:
Updated:
Prajavani

ಚಿಕ್ಕಬಳ್ಳಾಪುರ: ಬಡ ರೋಗಿಗಳಿಗೆ ದಾನಿಗಳ ಮೂಲಕ ಸಹಾಯ ಕಲ್ಪಿಸುವ ‘ಅಕ್ಷಯ ನೆರವು’ ಕೇಂದ್ರವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಉದ್ಘಾಟನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ‘ಜಿಲ್ಲಾ ಆಸ್ಪತ್ರೆಯಲ್ಲಿ ತಿಂಗಳಿಗೆ 300ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತವೆ. ಅದರಲ್ಲಿ ಕೆಲವು ಬಡವರು ಇರುತ್ತಾರೆ. ಅಂತಹ ಬಡವರಿಗೆ ಈ ಕೇಂದ್ರದ ಮೂಲಕ ದಾನಿಗಳ ನೆರವಿನೊಂದಿಗೆ ಧಾನ್ಯಗಳು, ಬಟ್ಟೆಗಳು, ಹಣ್ಣು ಹಂಪಲು, ಮಕ್ಕಳ ಆಟಿಕೆಗಳು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಉದ್ದೇಶದಿಂದ ಈ ಕೇಂದ್ರ ತೆರೆಯಲಾಗಿದೆ’ ಎಂದು ಹೇಳಿದರು.

‘ಹುಟ್ಟುಹಬ್ಬ, ಮನೆ ಹಿರಿಯರ ತಿಥಿ ಕಾರ್ಯಕ್ರಮಗಳನ್ನು ಬಡವರಿಗೆ ಏನಾದರೂ ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ಉದಾತ್ತ ಚಿಂತನೆ ಸಾಕಷ್ಟು ಜನರಲ್ಲಿರುತ್ತದೆ. ಅಂತಹವರು ಈ ಕೇಂದ್ರಕ್ಕೆ ಬಂದು ಹಣವನ್ನು ಹೊರತುಪಡಿಸಿ ಬಡವರಿಗೆ ಅಗತ್ಯ ವಸ್ತುಗಳನ್ನು ನೀಡಬಹುದು. ಅವುಗಳನ್ನು ಆಸ್ಪತ್ರೆ ಸಿಬ್ಬಂದಿ ಅರ್ಹರಿಗೆ ತಲುಪಿಸುವ ಕೆಲಸ ಮಾಡುತ್ತಾರೆ’ ಎಂದು ತಿಳಿಸಿದರು.

‘ಅಕ್ಷಯ ನೆರವು ಕೇಂದ್ರಕ್ಕಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿ ಮೀಸಲಿಡಸಲು ಶ್ರಮವಹಿಸಿದ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಸಹ ಈ ಕೇಂದ್ರವನ್ನು ಸಮರ್ಪಕವಾಗಿ ಮುಂದುವರಿಸಿಕೊಂಡು ಹೋಗಬೇಕು’ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಯ ರಕ್ತನಿಧಿ ಕೇಂದ್ರದ ಉಪಾಧ್ಯಕ್ಷ ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಎನ್.ಕೆ.ಗುರುರಾಜ್ ರಾವ್‌, ಖಜಾಂಚಿ ಎಂ.ಜಯರಾಂ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್ ಕುಮಾರ್, ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್‌ ಉಪಸ್ಥಿತರಿದ್ದರು.

ಬಡ ರೋಗಿಗಳಿಗೆ ನೆರವು ನೀಡಲು ಮುಂದಾಗುವ ಸಂಘ, ಸಂಸ್ಥೆಗಳು ಅಥವಾ ದಾನಿಗಳು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿರುವ ‘ಅಕ್ಷಯ ನೆರವು’ ಕೇಂದ್ರಕ್ಕೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ: 9902745010.

Post Comments (+)