ಬುಧವಾರ, ಆಗಸ್ಟ್ 21, 2019
27 °C
ಆರ್‌ಸಿಎಂ ಕಾಲೇಜಿನಲ್ಲಿ ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಶೈಕ್ಷಣಿಕ ಉತ್ಕೃಷ್ಟತೆಯ ಭರವಸೆ ಮುಖ್ಯ

Published:
Updated:
Prajavani

ಚಿಕ್ಕಬಳ್ಳಾಪುರ: ‘ಗುಣಮಟ್ಟದ ಶಿಕ್ಷಣ ಮತ್ತು ನೈತಿಕತೆಯಲ್ಲಿ ರಾಜೀ ಮಾಡಿಕೊಳ್ಳದ ಗುಣದಿಂದಾಗಿ ರೀಜನಲ್ ನಿರ್ವಹಣಾ ಅಧ್ಯಯನ ಕಾಲೇಜು (ಆರ್‌ಸಿಎಂ) ಬೆಂಗಳೂರು ಭಾರತದ ಅಗ್ರ 20 ಬಿಸಿನೆಸ್‌ ಸ್ಕೂಲ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ’ ಎಂದು ಆರ್‌ಸಿಎಂ ಬೆಂಗಳೂರು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಸ್.ಆರ್.ಮಂಡಲ್ ಹೇಳಿದರು.

ದೇವನಹಳ್ಳಿ ಸಮೀಪದ ಮುದುಗುರ್ಕಿ ಬಳಿ ಇರುವ ಆರ್‌ಸಿಎಂ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾಗತಿಕವಾಗಿ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪೂರೈಸುವ ಮೂಲಕ ಕಳೆದ 37 ವರ್ಷಗಳಿಂದ ಪ್ರಾಯೋಗಿಕ, ವೃತ್ತಿ ಕೇಂದ್ರಿತ ನಿರ್ವಹಣಾ ಶಿಕ್ಷಣ ನೀಡುತ್ತಿರುವ ಕಾಲೇಜು ಉತ್ತಮ ಬೋಧಕ ವರ್ಗ, ಕಾರ್ಪೊರೇಟ್ ಕ್ಷೇತ್ರ ಮತ್ತು ಉದ್ಯಮದ ಅನುಭವದಿಂದ ಕೂಡಿದೆ. ಅದಕ್ಕಾಗಿಯೇ ಕಾಲೇಜು ಎ +++ ವಿಭಾಗ ಮತ್ತು ದಕ್ಷಿಣ ಭಾರತದ 5ನೇ ಅತ್ಯುತ್ತಮ ಬಿಸಿನೆಸ್‌ ಸ್ಕೂಲ್‌ ಸ್ಥಾನ ಗಳಿಸಿದೆ’ ಎಂದು ತಿಳಿಸಿದರು.

‘ಇಂದು ಯಶಸ್ಸು ಎಂದರೆ ಲಾಭ, ನಷ್ಟ ಅಳೆಯುವ ದೃಷ್ಟಿಕೋನದಿಂದ ಮಾತ್ರ ನೋಡಲಾಗುತ್ತದೆ. ಇದು ಆದರೆ ಸುಸ್ಥಿರ ಗುಣಗಳ ಕೊರತೆ ಯಶಸ್ಸಿಗೆ ಮಾರಕವಾಗಿರುತ್ತದೆ. ಹೀಗಾಗಿ ನಾವು ಯಶಸ್ಸನ್ನು ಪಡೆಯುವುದು ಮಾತ್ರವಲ್ಲದೆ ಬಿಕ್ಕಟ್ಟನ್ನು ನಿವಾರಿಸುವುದು ಹೇಗೆ ಎಂಬುದರತ್ತ ಗಮನ ಕೇಂದ್ರೀಕರಿಸುತ್ತೇವೆ. ಹೀಗಾಗಿ ನಾವು ಸದಾ ಶೈಕ್ಷಣಿಕ ಉತ್ಕೃಷ್ಟತೆಯ ಭರವಸೆ ನೀಡುತ್ತೇವೆ’ ಎಂದರು.

‘ಪರಿಣಾಮ, ಕಾಲೇಜಿನ ಸುಮಾರು 10,000 ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಭಾರತ ಮತ್ತು ವಿದೇಶಗಳ ಪ್ರಮುಖ ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ. ಕಾಲೇಜನ್ನು ಇತ್ತೀಚೆಗೆ ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಪ್ರಮುಖ ಸಂಸ್ಥೆಗಳ ಪಟ್ಟಿಗೆ ಸೇರಿಸಿದೆ. ಹೀಗಾಗಿ ನಮ್ಮ ವಿದ್ಯಾರ್ಥಿಗಳಿಗೆ ಎಸ್‌ಬಿಐ ಆರ್ಥಿಕ ಹಿನ್ನೆಲೆ ನೋಡದೆ ಶೈಕ್ಷಣಿಕ ಸಾಲ ನೀಡಲು ಮುಂದೆ ಬಂದಿದೆ’ ಎಂದು ಹೇಳಿದರು.

ಸ್ವಿಟ್ಜರ್ಲೆಂಡ್‌ನ ನಿರ್ವಹಣಾ ಪ್ರಾಧ್ಯಾಪಕ ಮತ್ತು ಹ್ಯೂಮನಿಸ್ಟಿಕ್ ಮ್ಯಾನೇಜ್‌ಮೆಂಟ್ ನೆಟ್‌ವರ್ಕ್ ಸ್ಥಾಪಕ ಅರ್ನ್ಸ್ಟ್ ವಾನ್ ಕಿಮಾಕೊವಿಟ್ಜ್ ಮಾತನಾಡಿ, ‘ಇಂದಿನ ಜಾಗತಿಕ ಉದ್ಯಮ ವ್ಯವಸ್ಥಾಪಕರಿಗೆ ಜಾಗತಿಕ ವ್ಯವಹಾರದ ತಿಳುವಳಿಕೆ ಮತ್ತು ವೃತ್ತಿಯಲ್ಲಿ ಸಮಗ್ರತೆ ಮತ್ತು ಪ್ರಾಮಾಣಿಕತೆ ಮುಖ್ಯವಾಗಿ ಬೇಕಾದ ಗುಣಗಳಾಗಿವೆ. ವಿದ್ಯಾರ್ಥಿಗಳು ಇವತ್ತು ಜಾಗತಿಕ ಉದ್ಯಮ ಕ್ಷೇತ್ರದತ್ತ ಆಸಕ್ತಿ ತೋರುವ ಅಗತ್ಯವಿದೆ’ ಎಂದು ತಿಳಿಸಿದರು.

ವೋಲ್ವೋ ಗ್ರೂಪ್ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಮೆಟ್ಜೆನ್ ಚೆರಿಯನ್ ಮಾತನಾಡಿ, ‘ವ್ಯವಸ್ಥಾಪಕ ಪ್ರತಿಭೆಗಳನ್ನು ರೂಪಿಸುವಲ್ಲಿ ಕಲಿಕೆಯ ವಾತಾವರಣವು ಪ್ರಮುಖ ಪಾತ್ರ ವಹಿಸುತ್ತದೆ. ಪಠ್ಯಕ್ರಮವನ್ನು ಮೀರಿದ ನವೀನ ಮಾದರಿಯ ಕಲಿಕಾ ವಿಧಾನ ಓದಿಗೆ ಮೆರಗು ನೀಡುತ್ತದೆ. ಅಂತಹ ವಾತಾವರಣ ಈ ಕಾಲೇಜಿನಲ್ಲಿದೆ’ ಎಂದು ಅಭಿಪ್ರಾಯಪಟ್ಟರು.

ಚಂಡಿಗಡ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಶಿವ್ ತ್ರಿಪಾಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Post Comments (+)