ಭಾನುವಾರ, ನವೆಂಬರ್ 17, 2019
24 °C

ಮಳೆಯಲ್ಲೂ ಗಣೇಶನ ಆರಾಧನೆಗೆ ತಯಾರಿ

Published:
Updated:
Prajavani

ಯರಗೋಳ: ಜಿಟಿ ಜಿಟಿ ಮಳೆಯ ನಡುವೆಯೂ ದೇಶದ ಏಕತೆಯ ಹಬ್ಬ ಗಣೇಶ ಚತುರ್ಥಿಗೆ ಭರ್ಜರಿ ತಯಾರಿ ನಡೆದಿದೆ.

ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಾದ ಅಲ್ಲಿಪುರ, ವೆಂಕಟೇಶ ನಗರ, ಕಂಚಗಾರಹಳ್ಳಿ, ಹೋರುಂಚ, ಮಲ್ಲಪ್ಪನಹಳ್ಳಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಮೋಟ್ನಳ್ಳಿ ಹಾಗೂ ಕಟ್ಟಿಗೆ ಶಹಾಪುರ ಗ್ರಾಮಗಳಲ್ಲಿ ತುಂತುರು ಮಳೆಯ ನಡುವೆಯೇ ಮಂಡಳಿಗಳು ತಯಾರಿ ನಡೆಸಿವೆ.

ಪ್ರತಿ ಮನೆಗಳಲ್ಲೂ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಲು ಜಿಲ್ಲಾ ಕೇಂದ್ರಗಳಲ್ಲಿ ಜನರು ವಿನಾಯಕ ಮೂರ್ತಿಗಳ ಖರೀದಿಯಲ್ಲಿ ಮಗ್ನರಾಗಿದ್ದು ಭಾನುವಾರ ಸಾಮಾನ್ಯವಾಗಿತ್ತು.

ಪಿಒಪಿ ಗಣಪತಿ ನಿಷೇಧದಿಂದ ಬಣ್ಣ–ಬಣ್ಣದ ಪಿಒಪಿ ಮೂರ್ತಿಗಳ ಬೆಲೆ ಕಡಿಮೆಯಾಗಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬೆಲೆ ಏರಿಕೆಯಾಗಿದೆ. ಆದ್ದರಿಂದ ಖರೀದಿಯಲ್ಲೂ ಇಳಿಮುಖವಾಗಿದೆ.

₹250ಯಿಂದ ₹350 ರೂಪಾಯಿವರೆಗೆ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳು ಲಭ್ಯವಿದ್ದು, ಅಗಲ ಹಾಗೂ ಎತ್ತರದ ಆಧಾರದ ಮೇಲೆ ದರ ನಿಗದಿ ಮಾಡಲಾಗಿದೆ. ಹೂವು, ಹಣ್ಣು, ಪೂಜಾ ಸಾಮಾಗ್ರಿ, ದಿನಸಿ ಹಾಗೂ ತರಕಾರಿ ಬೆಲೆಗಳು ಹೆಚ್ಚಾದ್ದರಿಂದ ಗ್ರಾಹಕರ ಜೇಬಿಗೆ ಸ್ವಲ್ಪ ಮಟ್ಟಿಗೆ ಕತ್ತರಿ ಬಿದ್ದಿದೆ.

ಯರಗೋಳ ಗ್ರಾಮದ ವಾರ್ಡ್‌ ಸಂಖ್ಯೆ 4ರಲ್ಲಿ ಬಸವಣ್ಣ ಗುಡಿ ಹತ್ತಿರ ಜಯ ಗಣೇಶ ಯುವಕ ಮಂಡಳಿಯವರು, ವಾರ್ಡ್ ಸಂಖ್ಯೆ 2ರಲ್ಲಿ ಮರೆಮ್ಮ ದೇವಿ ಮಂದಿರದ ಬಳಿ ವಿನಾಯಕ ಯುವ ಬಳಗದಿಂದ, ವಾರ್ಡ್ ಸಂಖ್ಯೆ 1ರಲ್ಲಿ ಪೊಲೀಸ್ ಗೌಡರ ಮನೆ ಮುಂದೆ ರಾಘವೇಂದ್ರ ಗೆಳೆಯರ ಬಳಗದಿಂದ, ವಾರ್ಡ್ ಸಂಖ್ಯೆ 4ರಲ್ಲಿ ಶಿವಕುಮಾರ್ ಗೆಳೆಯರ ಬಳಗದಿಂದ ವಿನಾಯಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ಯುವಕ ಸಾಬಣ್ಣ ಮಾತನಾಡಿ,‘ಸರ್ಕಾರ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧ ಮಾಡಿದ್ದು ಸ್ವಾಗತಾರ್ಹ, ಮುಂದಿನ ದಿನಗಳಲ್ಲಿ ಕಾನೂನನ್ನು ಬಿಗಿಗೊಳಿಸಿದರೆ ಪರಿಸರ ಸಂರಕ್ಷಣೆಯಾಗುತ್ತದೆ’ ಎಂದರು.

ಪ್ರತಿಕ್ರಿಯಿಸಿ (+)