ಭಾನುವಾರ, ನವೆಂಬರ್ 17, 2019
28 °C
ಮಹಿಳೆಯರ 10 ಮೀಟರ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ

ಶೂಟಿಂಗ್‌: ಭಾರತಕ್ಕೆ ಒಲಿದ ಮೂರನೇ ಚಿನ್ನ

Published:
Updated:
Prajavani

ರಿಯೊ ಡಿ ಜನೈರೊ: ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಒಲಿಯಿತು.

ಶನಿವಾರ ತಡರಾತ್ರಿ ನಡೆದ ಸ್ಪರ್ಧೆಯಲ್ಲಿ ಭಾರತದ ಯಶಸ್ವಿನಿ ಸಿಂಗ್ ದೇಶ್ವಾಲ್ ಅವರು ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಹೋದ ವಾರ ಇದೇ ಚಾಂಪಿಯನ್‌ಷಿಪ್‌ನಲ್ಲಿ ಅಭಿಷೇಕ್ ವರ್ಮಾ ಮತ್ತು ಇಲಾವೆನಿಲ ವಾಳಅರಿವನ್ ಅವರು ಚಿನ್ನದ ಪದಕ ಗಳಿಸಿದ್ದರು. ಭಾರತ ತಂಡವು ಒಟ್ಟು ಮೂರು ಚಿನ್ನ, ಒಂದು ಬೆಳ್ಳೀ ಮತ್ತು ಒಂದು ಕಂಚಿನ ಪದಕ ಗಳಿಸಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

22 ವರ್ಷದ ಯಶಸ್ವಿನಿ ಅವರು ಫೈನಲ್‌ನಲ್ಲಿ 236.7 ಅಂಕಗಳನ್ನು ಗಳಿಸಿ ಮೊದಲಿಗರಾದರು. ವಿಶ್ವದ ಅಗ್ರಕ್ರಮಾಂಕದ ಶೂಟರ್,  ಉಕ್ರೇನ್‌ನ ಒಲೆನಾ ಕೊಸ್ತಾವಿಚ್  ಅವರನ್ನು ಯಶಸ್ವಿನಿ ಹಿಂದಿಕ್ಕಿದ್ದರು. ಒಲೆನಾ 234.8 ಪಾಯಿಂಟ್‌ಗಳೊಂದಿಗೆ ಬೆಳ್ಳಿ ಪದಕ ಮತ್ತು ಸರ್ಬಿಯಾದ ಜಸ್ಮಿನಾ ಮಿಲಾವೊನೊವಿಚ್ 215.7 ಪಾಯಿಂಟ್ಸ್‌ ಗಳಿಸಿ ಕಂಚಿನ ಪದಕ ಪಡೆದರು.

ಅರ್ಥಶಾಸ್ತ್ರ ವಿದ್ಯಾರ್ಥಿನಿಯಾಗಿರುವ ಯಶಸ್ವಿನಿ ಅವರು ಫೈನಲ್‌ನಲ್ಲಿ ಬಹಳ ಪೈಪೋಟಿ ಎದುರಿಸಿದರು.10.1, 10.5 ಮತ್ತು 10.1 ಅಂಕಗಳನ್ನು ಪಡೆಯುವ ಮೂಲಕ ಫೈನಲ್ ಅಭಿಯಾನ ಆರಂಭಿಸಿದರು.ಮೊದಲ ಐದು ಶೂಟ್‌ಗಳು ಮುಕ್ತಾಯವಾದಾಗ ಅವರು ಮೂರನೇ ಸ್ಥಾನದಲ್ಲಿದ್ದರು. ನಂತರದಲ್ಲಿ 10.6 ಗಳಿಸಿದ ಅವರು ಎರಡನೇ ಸ್ಥಾನಕ್ಕೆ ಬಡ್ತಿ ಪಡೆದರು. ಅದರ ನಂತರ ಮತ್ತೆ 10.1 ಗುರಿ ಸಾಧಿಸಿದ ಅವರು ಮೊದಲ ಸ್ಥಾನಕ್ಕೆ ಬಂದರು.  ಅವರು ಅರ್ಹತಾ ಸುತ್ತಿನಲ್ಲಿ 582 ಪಾಯಿಂಟ್ಸ್‌ ಗಳಿಸಿದ್ದರು.

ಮಹಿಳೆಯರ ವಿಭಾಗದ 50 ಮೀಟರ್ಸ್‌ ರೈಫಲ್  ತ್ರಿ ಪೊಸಿಷನ್‌ನಲ್ಲಿ ಭಾರತದ ಕಾಜಲ್ ಸೈನಿ 22ನೇ ಸ್ಥಾನ ಪಡೆದರು. ತೇಜಸ್ವಿನಿ ಸಾವಂತ್ 47ನೇ ಸ್ಥಾನ ಪಡೆದರು.

ಪುರುಷರ 25 ಮೀ ರ‍್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಆದರ್ಶ ಸಿಂಗ್ ಮತ್ತು ಅನೀಶ್ ಭಾನವಾಲಾ ಅವರು ಕ್ರಮವಾಗಿ 13 ಮತ್ತು 14ನೇ ಸ್ಥಾನ ಪಡೆದರು. ಅನ್ಹಾದ್ ಜವಾಂದಾ 48ನೇಯ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು.

ಪ್ರತಿಕ್ರಿಯಿಸಿ (+)