ಶುಕ್ರವಾರ, ನವೆಂಬರ್ 15, 2019
22 °C

ಕಬ್ಬಿನ ಹಾಲು, ಊಟ ಕೊಡಿಸಿದವರ ಕಾರಿಗೇ ಕಲ್ಲೆಸೆದ ‘ಹುಚ್ಚ’ ವೆಂಕಟ್‌!

Published:
Updated:
Prajavani

ಮಂಡ್ಯ: ಮಡಿಕೇರಿ, ಕುಶಾಲನಗರದ ನಂತರ ನಟ ‘ಹುಚ್ಚ’ ವೆಂಕಟ್‌ ಮಂಡ್ಯದಲ್ಲೂ ಹುಚ್ಚಾಟ ಮುಂದುವರಿಸಿದ್ದಾನೆ. ಕಳೆದೆರಡು ದಿನಗಳಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಆತ ಕಬ್ಬಿನ ಹಾಲು ಹಾಗೂ ಊಟ ಕೊಡಿಸಿದ ಯುವಕರ ಕಾರಿಗೇ ಕಲ್ಲೆಸೆದು ಗೂಸಾ ತಿಂದಿದ್ದಾನೆ.

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜ್ಯೋತಿ ಇಂಟರ್‌ನ್ಯಾಷನಲ್‌ ಹೋಟೆಲ್‌ನಲ್ಲಿ ಆ.30ರಂದು ರಾತ್ರಿ ಬಂದು ತಂಗಿದ್ದಾನೆ. ತನ್ನದೇ ಕಾರ್‌ನಲ್ಲಿ ಬಂದಿದ್ದಾನೆ. ಹೋಟೆಲ್‌ನವರು ಹಣ ಕೇಳಿದಾಗ, ಎಟಿಎಂನಿಂದ ತೆಗೆದುಕೊಡುತ್ತೇನೆ ಎಂದು ತಿಳಿಸಿದ್ದಾನೆ. ಹುಚ್ಚ ವೆಂಕಟ್‌ ಹೋಟೆಲ್‌ನಲ್ಲಿದ್ದಾನೆ ಎಂಬ ಸುದ್ದಿ ತಿಳಿದ ಯುವಕರು ಭಾನುವಾರ ಬೆಳಿಗ್ಗೆ ಹೋಟೆಲ್‌ ಮುಂದೆ ಜಮಾಯಿಸಿದ್ದಾರೆ.

ಕಿರಣ್‌ ಹಾಗೂ ವಿನಯ್‌ ಎಂಬ ಯುವಕರನ್ನು ಪರಿಚಯ ಮಾಡಿಕೊಂಡ ವೆಂಕಟ್‌ ಕಬ್ಬಿನ ಹಾಲು ಕುಡಿಯಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾನೆ. ಯುವಕರು ತಮ್ಮ ಕಾರ್‌ನಲ್ಲಿ ಕೂರಿಸಿಕೊಂಡು ಕಿರಗಂದೂರು ಬಳಿಯ ಆಲೆಮನೆಗೆ ಕರೆದೊಯ್ದು ಕಬ್ಬಿನಹಾಲು ಕುಡಿಸಿದ್ದಾರೆ. ಮಧ್ಯಾಹ್ನ ಆಲೆಮನೆ ಕಾರ್ಮಿಕರಿಗೆ ತಂದಿದ್ದ ಮುದ್ದೆ, ಉಪ್ಪುಸಾರು ಊಟ ಸವಿದಿದ್ದಾನೆ.

ನಂತರ ಹೋಟೆಲ್‌ಗೆ ಕರೆದು ತಂದಾಗ, ಬಿಲ್‌ ಪಾವತಿಸುವಂತೆ ಯುವಕರನ್ನು ಕೇಳಿಕೊಂಡಿದ್ದಾನೆ. ಅದಕ್ಕೂ ಮುಂದಾದ ಯುವಕರು ಬಿಲ್‌ ಪಾವತಿಸಲು ಒಳಗೆ ತೆರಳಿದ್ದಾರೆ. ಹೊರಗೇ ನಿಂತಿದ್ದ ವೆಂಕಟ್‌ ಯುವಕರ ಕಾರ್‌ಗೆ ಕಲ್ಲು ಹೊಡೆದಿದ್ದಾನೆ. ಇದರಿಂದ ಕೆರಳಿದ ಯುವಕರು ವೆಂಕಟ್‌ಗೆ ಹಲ್ಲೆ ಮಾಡಿದ್ದಾರೆ.

ಹೋಟೆಲ್‌ ಮುಂದೆ ಜನ ಸೇರಿಕೊಂಡ ನಂತರ ಪಶ್ಚಿಮ ಪೊಲೀಸ್‌ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಗುಂಪು ಚದುರಿಸಿದ್ದಾರೆ. ನಂತರ ವೆಂಕಟ್‌ನನ್ನು ತನ್ನ ಕಾರ್‌ನಲ್ಲೇ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)