ಬುಧವಾರ, ನವೆಂಬರ್ 13, 2019
23 °C

ಬಡವರ ಮೇಲೆ ಕರುಣೆ ಇರಲಿ

Published:
Updated:

ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಕಸಿವಿಸಿಯಾಗುವ ಒಂದು ವಿಡಿಯೊ ಇತ್ತೀಚೆಗೆ ಹರಿದಾಡಿತು. ಅದು,
ಮಧ್ಯಪ್ರದೇಶದ ಯಾವುದೋ ಊರಿನ ತಳ್ಳುಗಾಡಿಯಲ್ಲಿ ಬೀದಿ ಬೀದಿ ಸುತ್ತಾಡಿ ತರಕಾರಿ ಮಾರಾಟ ಮಾಡುತ್ತಿದ್ದ ಬಡ ವ್ಯಾಪಾರಿಯು ನೆಲದ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಆತನಿಗೆ ಕೊಟ್ಟ ಶಿಕ್ಷೆ.

ಆ ಶಿಕ್ಷೆಯೆಂದರೆ, ಆತನ ಕುಟುಂಬದ ಜೀವನಾಧಾರವಾಗಿದ್ದ ನಾಲ್ಕು ಚಕ್ರದ ತಳ್ಳುಗಾಡಿಯನ್ನು ಸ್ಥಳೀಯ ಆಡಳಿತಾಧಿಕಾರಿಗಳು ಎಲ್ಲರ ಎದುರು ಸುತ್ತಿಗೆಯಿಂದ ಹೊಡೆದು ಚೂರು ಚೂರು ಮಾಡಿದರು. ಆ ಸಂದರ್ಭದಲ್ಲಿ ಆ ನಿಸ್ಸಹಾಯಕ ಬಡ ವ್ಯಾಪಾರಿಯು ‘ಸಾರ್, ಸಾರ್ ಇನ್ನೊಮ್ಮೆ ತಪ್ಪು ಮಾಡೋದಿಲ್ಲ. ನನ್ನ ಗಾಡಿ ಬಿಟ್ಟುಬಿಡಿ’ ಎಂದು ಅಳುತ್ತಾ ಅಂಗಲಾಚಿ ಬೇಡಿದರೂ ಕಿಂಚಿತ್ತೂ ಕರುಣೆ ತೋರಿಸಲಿಲ್ಲ.

ತದೇಕಚಿತ್ತದಿಂದ ವಿಡಿಯೊ ನೋಡಿದ ನನ್ನ ಕಣ್ತುಂಬಿ ಬಂತು. ಕಾನೂನಿನ ಕಣ್ತಪ್ಪಿಸಿ ಕೋಟಿ ಕೋಟಿ ರೂಪಾಯಿ ವಂಚಿಸಿ, ಸಭ್ಯರಂತೆ ರಾಜಾರೋಷವಾಗಿ ಓಡಾಡುತ್ತಿರುವ ಜನರಿಗಿಲ್ಲವೇ ಇಂತಹ ಕಟ್ಟುನಿಟ್ಟಿನ ಶಿಕ್ಷೆ? ಅಂತಹವರಿಗೆ ರಕ್ಷಣೆ ನೀಡುವವರು ಬಹಳ ಮಂದಿ. ಆದರೆ ಆ ಬಡ ವ್ಯಾಪಾರಿಯ ಕಷ್ಟ ಕೇಳುವವರು ಯಾರು? ಅಧಿಕಾರಿಗಳು ಬಡಜನರ ಮೇಲೆ ಸ್ವಲ್ಪ ಕರುಣೆ ತೋರಲಿ.

ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ಪ್ರತಿಕ್ರಿಯಿಸಿ (+)