ಬುಧವಾರ, ನವೆಂಬರ್ 20, 2019
21 °C
ಪ್ರೊ ಕಬಡ್ಡಿ: ಬೆಂಗಾಲ್‌ ವಾರಿಯರ್ಸ್ ಎದುರು ಯೋಧಾ ತಂಡ ಪರಾಕ್ರಮ

ಬೆಂಗಳೂರು ಬುಲ್ಸ್ ಜಯಭೇರಿ

Published:
Updated:

ಬೆಂಗಳೂರು: ಅಮೋಘ ಆಟವಾಡಿದ ಪವನ್‌ ಶೆರಾವತ್‌ ಬೆಂಗಳೂರು ಬುಲ್ಸ್ ತಂಡಕ್ಕೆ ಮತ್ತೊಂದು ಜಯ ಸಂಪಾದಿಸಿಕೊಟ್ಟರು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ 33–27 ರಿಂದ ಬೆಂಗಳೂರು ತಂಡ ತಮಿಳ್‌ ತಲೈವಾಸ್‌ ತಂಡವನ್ನು ಮಣಿಸಿತು. ಪವನ್‌ 21 ಪ್ರಯತ್ನಗ
ಳಲ್ಲಿ 17 ರೈಡಿಂಗ್‌ ಪಾಯಿಂಟ್‌ ಗಳಿಸಿ ಮಿಂಚಿದರು. ಬುಲ್ಸ್ ತಂಡದ ನಾಯಕ ರೋಹಿತ್‌ 5 ರೈಡಿಂಗ್‌ ಪಾಯಿಂಟ್‌ ತಮ್ಮದಾಗಿಸಿಕೊಂಡರು. ಅಮಿತ್‌ ಶೆರಾನ್‌ ಟ್ಯಾಕಲ್‌ನಲ್ಲಿ ಐದು ಪಾಯಿಂಟ್‌ ಗಳಿಸಿದರು.

ಬುಲ್ಸ್ ಪರ ಮೊದಲ ರೈಡ್‌ ಮಾಡಿದ ರೋಹಿತ್‌ಕುಮಾರ್‌ ಅವರು ತಲೈವಾಸ್‌ ನಾಯಕ ಅಜಯ್‌ ಠಾಕೂರ್‌ ಮೋಹಿತ್‌ ಚಿಲ್ಲಾರ್‌ ಮತ್ತು ಅವರನ್ನು ಔಟ್‌ ಮಾಡಿ ಉತ್ತಮ ಆರಂಭ ಒದಗಿಸಿದರು. ತಲೈವಾಸ್‌ನ ರಾಹುಲ್‌ ಚೌಧರಿ ರೈಡಿಂಗ್‌ ತಮ್ಮ ತಂಡದ ಖಾತೆ ತೆರೆದರು. 

ಉಭಯ ತಂಡಗಳು ಜಿದ್ದಾ ಜಿದ್ದಿನ ಪೈಪೋಟಿ ನಡೆಸಿದವು. ಮೊದಲಾರ್ಧದ ಮುಕ್ತಾಯಕ್ಕೆ ಬುಲ್ಸ್ 14–13ರ ಅಲ್ಪ ಮುನ್ನಡೆ ಕಾಯ್ದುಕೊಂಡಿತ್ತು. ದ್ವಿತೀಯಾರ್ಧದ ಆರಂಭದಲ್ಲಿ ಬುಲ್ಸ್ ತಂಡದ ಸುಮಿತ್‌ ಸಿಂಗ್‌ ಅವರನ್ನು ಟ್ಯಾಕಲ್‌ ಮಾಡಿದ ರಾಹುಲ್‌ ಚೌಧರಿ, ತಂಡ 14–14ರ ಸಮಬಲ ಸಾಧಿಸುವಂತೆ ಮಾಡಿದರು. ಮೋಹಿತ್‌ ಶೆರಾವತ್‌ ಅವರ ಅದ್ಭುತ ಟ್ಯಾಕಲ್‌ ಮತ್ತು ಪವನ್‌ರ ‘ಡು ಆರ್‌ ಡೈ’ ರೈಡ್‌ ಮೂಲಕ ಬುಲ್ಸ್ 18–14 ಮುನ್ನಡೆ ಗಳಿಸಿತು. ಬಳಿಕ ಬುಲ್ಸ್ ಹಿಂದಿರುಗಿ ನೋಡಲಿಲ್ಲ. ಮುನ್ನಡೆ ಕಾಯ್ದುಕೊಳ್ಳುತ್ತಲೇ ಸಾಗಿತು. ಪಂದ್ಯ ಗೆದ್ದು ಬೀಗಿತು.

ತಲೈವಾಸ್‌ ಪರ ರಾಹುಲ್‌ ಚೌಧರಿ ಒಟ್ಟು 8 ಪಾಯಿಂಟ್‌ ಗಳಿಸಿದರೆ, ಮಂಜೀತ್‌ ಚಿಲ್ಲಾರ್‌ ಹಾಗೂ ಅಜಯ್‌ ಠಾಕೂರ್‌ ತಲಾ 4 ಪಾಯಿಂಟ್‌ ಸಂಪಾದಿಸಿದರು. ಯುಪಿ ಯೋಧಾ ಜಯಭೇರಿ: ಕೊನೆಯ ಹಂತದವರೆಗೂ ರೋಚಕತೆಯನ್ನು ಉಳಿಸಿಕೊಂಡಿದ್ದ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಯುಪಿ ಯೋಧಾ ಜಯಭೇರಿ ಮೊಳಗಿಸಿತು.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಯೋಧಾ ತಂಡವು 32–29ರಿಂದ  ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಮಣಿಸಿ ಸಂಭ್ರಮಿಸಿತು.

ನಾಲ್ಕು ನಿಮಿಷಗಳಾಗುವಷ್ಟರಲ್ಲಿ ಬೆಂಗಾಲ್‌ ತಂಡಕ್ಕೆ ಎರಡು ಪಾಯಿಂಟ್‌ ಮುನ್ನಡೆ ದೊರೆಯಿತು. ಏಳನೇ ನಿಮಿಷದಲ್ಲಿ ಮುನ್ನಡೆ 5–2ಕ್ಕೆ ತಲುಪಿತ್ತು. ಈ ಹಂತದಲ್ಲಿ ತಿರುಗೇಟು ನೀಡಿದ ಯೋಧಾ, ಬೆಂಗಾಲ್‌ ತಂಡದ ನಾಯಕ ಮಣಿಂದರ್‌ ಸಿಂಗ್‌ ಅವರನ್ನು ಟ್ಯಾಕಲ್‌ ಮಾಡಿ ಹಿನ್ನಡೆಯನ್ನು 4–6ಕ್ಕೆ ತಗ್ಗಿಸಿಕೊಂಡಿತು.

ಪಂದ್ಯದ 15ನೇ ನಿಮಿಷದಲ್ಲಿ ಯೋಧಾ ತಂಡದ ಹಿನ್ನಡೆ 8–9ಕ್ಕೆ ತಲುಪಿತು. ಆದರೆ ಮೊದಲಾರ್ಧ ಮುಗಿದಾಗ ಬೆಂಗಾಲ್‌ 13–12ರಿಂದ ಮುಂದಿತ್ತು.  ದ್ವಿತೀಯಾರ್ಧದಲ್ಲಿ ಆಟ ಇನ್ನಷ್ಟು ರಂಗೇರಿತು. ಯೋಧಾ ತಂಡದ ಸುರಿಂದರ್‌ ಗಿಲ್‌ ಅವರನ್ನು ಟ್ಯಾಕಲ್‌ ಮಾಡಿದ ಬೆಂಗಾಲ್‌ಗೆ 15–13ರ ಮುನ್ನಡೆ ಸಿಕ್ಕಿತು. ಆದರೆ ಪಂದ್ಯ ಮುಕ್ತಾಯಕ್ಕೆ 14 ನಿಮಿಷ ಬಾಕಿಯಿದ್ದಾಗ ಬೆಂಗಾಲ್‌ ಆಲೌಟ್‌ ಆಯಿತು. ಯೋಧಾಗೆ 19–17 ಮುನ್ನಡೆ ಸಿಕ್ಕಿತು.

ಬಳಿಕ ಎರಡು ಬಾರಿ ಪಂದ್ಯ ಸಮಬಲವಾಯಿತು. ಎಚ್ಚರಿಕೆಯ ಆಟವಾಡಿದ ಯೋಧಾ ತಂಡ ಅಂತಿಮವಾಗಿ ಪಂದ್ಯ ಜಯಿಸಿತು. ಯೋಧಾ ತಂಡದ ಶ್ರೀಕಾಂತ್‌ ಜಾಧವ್‌ 9 ರೈಡಿಂಗ್‌ ಪಾಯಿಂಟ್‌ ಸಂಪಾದಿಸಿದರು. ನಿತೇಶ್‌ಕುಮಾರ್‌ 7 ಟ್ಯಾಕಲ್‌ ಪಾಯಿಂಟ್‌ ಗಳಿಸಿದರು.

ಬೆಂಗಾಲ್‌ ಪರ ಮೊಹಮ್ಮದ್‌ ನಬಿಬಕ್ಷ ಒಟ್ಟು 7, ಬಲದೇವ್‌ ಸಿಂಗ್‌ 5 ಪಾಯಿಂಟ್‌ ತಮ್ಮದಾಗಿಸಿಕೊಂಡರು.

ಪ್ರತಿಕ್ರಿಯಿಸಿ (+)