ಬುಧವಾರ, ನವೆಂಬರ್ 13, 2019
28 °C
ಬಾಣಸವಾಡಿ ಪೊಲೀಸರಿಂದ ಇಬ್ಬರ ಬಂಧನ

ಸ್ನೇಹಿತೆಯ ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ

Published:
Updated:

ಬೆಂಗಳೂರು: ಸಾಲ ವಾಪಸು ಪಡೆಯಲು ಮನೆಗೆ ಬಂದಿದ್ದ ಸ್ನೇಹಿತೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಇಬ್ಬರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

‘ಎಂ.ಎಸ್. ನಗರದ ವಿನೋದ್ ಹಾಗೂ ಆತನ ಸ್ನೇಹಿತ ಹರೀಶ್ ಬಂಧಿತರು. 19 ವರ್ಷದ ಯುವತಿ ನೀಡಿರುವ ದೂರಿನನ್ವಯ ಲೈಂಗಿಕ ದೌರ್ಜನ್ಯ (ಐಪಿಸಿ 354) ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಯುವತಿ ಹಾಗೂ ಆರೋಪಿ ವಿನೋದ್ ಹಲವು ವರ್ಷಗಳಿಂದ ಪರಿಚಿತರು. ಯುವತಿಯಿಂದ ₹ 5,000 ಸಾಲ ಪಡೆದಿದ್ದ ಆರೋಪಿ, ಹಲವು ದಿನವಾದರೂ ವಾಪಸು ಕೊಟ್ಟಿರಲಿಲ್ಲ. ಬೇಸರಗೊಂಡಿದ್ದ ಯುವತಿ, ಹಣ ವಾಪಸು ನೀಡುವಂತೆ ಒತ್ತಾಯಿಸಲಾರಂಭಿಸಿದ್ದರು. ಸಾಲ ವಾಪಸು ನೀಡುವುದಾಗಿ ಹೇಳಿ ಆಗಸ್ಟ್‌ 31ರಂದು ಯುವತಿಯನ್ನು ಮನೆಗೆ ಕರೆಸಿಕೊಂಡಿದ್ದ ಆರೋಪಿಗಳು ಕೃತ್ಯ ಎಸಗಿದ್ದರು’ ಎಂದು ಹೇಳಿದರು.

ಸ್ಥಳೀಯರಿಂದ ಯುವತಿ ರಕ್ಷಣೆ: ‘ಮನೆಯ ಕೊಠಡಿಯಲ್ಲಿ ಯುವತಿಯನ್ನು ಕೂಡಿ ಹಾಕಿದ್ದ ಆರೋಪಿಗಳು, ವಿವಸ್ತ್ರಗೊಳಿಸಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಯುವತಿಯು ಕಿರುಚಾಡಿದ್ದರಿಂದ ಸಹಾಯಕ್ಕೆ ಬಂದ ಸ್ಥಳೀಯರು, ಅವರನ್ನು ರಕ್ಷಿಸಿ ಠಾಣೆಗೆ ವಿಷಯ ತಿಳಿಸಿದ್ದರು’ ಎಂದು ಪೊಲೀಸರು ತಿಳಿಸಿದರು. 

ಪ್ರತಿಕ್ರಿಯಿಸಿ (+)