ಮಂಗಳವಾರ, ನವೆಂಬರ್ 19, 2019
29 °C
ಆಯ್ಕೆ ಸಮಿತಿ ವಿರುದ್ಧ ಶೆಲ್ಡನ್ ಜಾಕ್ಸನ್ ಅಸಮಾಧಾನ

ಆಯ್ಕೆಗಾರರಿಗೆ ಪಾರದರ್ಶಕ ಧೋರಣೆ ಇರಬೇಕು

Published:
Updated:
Prajavani

ರಾಜಕೋಟ್ (ಪಿಟಿಐ): ಭಾರತ ‘ಎ’ ಮತ್ತು ದುಲೀಪ್ ಟ್ರೋಫಿ ತಂಡಗಳಲ್ಲಿ ಸ್ಥಾನ ಪಡೆಯದ ಸೌರಾಷ್ಟ್ರದ ಆಟಗಾರ ಶೆಲ್ಡನ್ ಜಾಕ್ಸನ್ ಆಯ್ಕೆ ಸಮಿತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶೆಲ್ಡನ್ ಹೋದ ರಣಜಿ ಋತುವಿನಲ್ಲಿ 854 ರನ್‌ಗಳನ್ನು ಗಳಿಸಿದ್ದರು. ಆದರೂ ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರಿನ ಸರಣಿಗೆ ಮತ್ತು ದುಲೀಪ್ ಟ್ರೋಫಿ ತಂಡಕ್ಕೆ ಅವರನ್ನು ಆಯ್ಕೆ ಮಾಡಿರಲಿಲ್ಲ.

‘ಈ ವರ್ಷ ಸೌರಾಷ್ಟ್ರ ತಂಡವು ರಣಜಿ ಫೈನಲ್ ತಲುಪಿತ್ತು. ಆದರೂ ತಂಡದ ಯಾವುದೇ ಆಟಗಾರ ಯಾವ ತಂಡಕ್ಕೂ ಆಯ್ಕೆ ಆಗದಿರುವುದು ಅಚ್ಚರಿ ಮೂಡಿಸಿದೆ. ಎಲ್ಲ ಮಾದರಿಗಳಲ್ಲಿಯೂ ಉತ್ತಮವಾಗಿ ಆಡಿರುವ ಆಟಗಾರರು ಭಾರತ ‘ಎ’ ತಂಡಕ್ಕೆ ಆಯ್ಕೆ ಆಗಿಲ್ಲ’  ಎಂದು ಶೆಲ್ಡನ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.

’ಸಣ್ಣ ರಾಜ್ಯಗಳ ತಂಡಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇ. ಸೌರಾಷ್ಟ್ರ ತಂಡವು ಹೋದ ಐದು ವರ್ಷಗಳಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದೆ. ಸಿತಾಂಶು ಕೋಟಕ್ ಕೋಚಿಂಗ್‌ನಲ್ಲಿ ಬಹಳಷ್ಟು ಒಳ್ಳೆಯ ಸಾಧನೆ ಮಾಡಿದೆ. ಏನೂ ಮಾತಾಡದಂತೆ ನನಗೆ ಹೇಳಲಾಗಿದೆ. ಆದರೆ, ಪ್ರತಿಷ್ಠಿತವಾದ ತಂಡದ ಪ್ರತಿನಿಧಿಯಾಗಿ ಮಾತನಾಡುತ್ತಿದ್ದೇನೆ. ತಮಗೆ ಯಾಕೆ ಅವಕಾಶ ಸಿಕ್ಕಿಲ್ಲ, ಯಾವ ಬಗೆಯ ಸುಧಾರಣೆ ಮಾಡಿಕೊಳ್ಳಬೇಕು ಎಂಬುದು  ಆಟಗಾರರಿಗೆ ತಿಳಿಯಬೇಕು. ಆಯ್ಕೆ ಪ್ರಕ್ರಿಯೆ ಮತ್ತು ಆಯ್ಕೆಗಾರರ ಧೋರಣೆ ಪಾರದರ್ಶಕವಾಗಿರಬೇಕು’ ಎಂದು ಶೆಲ್ಡನ್ ಟ್ವೀಟ್ ಮಾಡಿದ್ದಾರೆ.

ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿರುವ ಬಂಗಾಳ ತಂಡದ ಮನೋಜ್ ತಿವಾರಿ, ‘ಶೆಲ್ಡನ್ ನಿಮ್ಮ ನೋವು ನನಗರ್ಥವಾಗುತ್ತದೆ. ನಿಮ್ಮ ಹತಾಶೆಗೆ ಪರಿಹಾರ ಸಿಗುವುದು. ಕಾಯುತ್ತಿರಿ. ದೇವರು ಯಾವಾಗಲೂ ಒಳ್ಳೆಯದನ್ನು ಮಾಡುತ್ತಾನೆ’ ಎಂದಿದ್ದಾರೆ.

 

ಪ್ರತಿಕ್ರಿಯಿಸಿ (+)