ಗುರುವಾರ , ನವೆಂಬರ್ 21, 2019
20 °C

ರಾಜಮೌಳಿಯ ಸಿನಿಮಾದಲ್ಲಿ ನಟಿಸುವುದೇ ಅದೃಷ್ಟ: ಆಲಿಯಾ

Published:
Updated:
Prajavani

ಟಾಲಿವುಡ್‌ ಸಿನಿರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ ಬಾಹುಬಲಿ. ರಾಜಮೌಳಿ ನಿರ್ದೇಶನದ ಈ ಸಿನಿಮಾ ಇಡೀ ಪ್ರಪಂಚವೇ ತೆಲುಗು ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಈಗ ಅದೇ ರಾಜಮೌಳಿ ಮತ್ತೆ ಆರ್‌ಆರ್‌ಆರ್‌ ಸಿನಿಮಾದ ಮೂಲಕ ಇನ್ನೊಂದು ಅಚ್ಚರಿ ಸೃಷ್ಟಿಸುವ ಭರವಸೆ ಮೂಡಿಸಿದ್ದಾರೆ.

ಈ ಸಿನಿಮಾವು ಆರಂಭದಿಂದಲೇ ಬೇರೆ ಬೇರೆ ಕಾರಣಕ್ಕೆ ಸುದ್ದಿಯಾಗುತ್ತಲೇ ಇತ್ತು. ಜ್ಯೂನಿಯರ್ ಎನ್‌ಟಿಆರ್‌ ಹಾಗೂ ರಾಂಚರಣ್ ತೇಜ ನಾಯಕರಾಗಿ ನಟಿಸಿರುವ ಈ ಸಿನಿಮಾದಲ್ಲಿ ಬಾಲಿವುಡ್‌ನ ಬ್ಯೂಟಿ ಆಲಿಯಾ ಭಟ್ ನಟಿಸುತ್ತಿರುವುದು ಹಳೆಯ ವಿಷಯ.

ರಾಜಮೌಳಿ ಸಿನಿಮಾಗಳೆಂದರೆ ಅಲ್ಲಿ ನಾಯಕಿಗೆ ಹೆಚ್ಚು ಪ್ರಾಧಾನ್ಯ ಇಲ್ಲ. ನಾಯಕನೇ ಅಲ್ಲಿ ಮುಖ್ಯ ಎಂಬೆಲ್ಲ ಮಾತುಗಳು ಟಾಲಿವುಡ್‌ನಲ್ಲಿ ಹರಿದಾಡುತ್ತಿದ್ದವು. ಅದು ಸತ್ಯ ಕೂಡ. ಆದರೆ ಅದನ್ನು ಸುಳ್ಳು ಮಾಡಲೇನೋ ಎಂಬಂತೆ ಬಾಹುಬಲಿಯಲ್ಲಿ ಅನುಷ್ಕಾ ಶೆಟ್ಟಿ ಹಾಗೂ ರಮ್ಯಾಕೃಷ್ಣ ಅವರ ಪಾತ್ರಕ್ಕೆ ಒತ್ತು ನೀಡಲಾಗಿತ್ತು. ಆ ಸಿನಿಮಾದಲ್ಲಿ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ಅವರಷ್ಟೇ ಪ್ರಾಮುಖ್ಯತೆಯನ್ನು ಅನುಷ್ಕಾ ಹಾಗೂ ರಮ್ಯಾಕೃಷ್ಣ ಅವರಿಗೆ ನೀಡಿದ್ದರು ಮೌಳಿ.  

ಆರ್‌ಆರ್‌ಆರ್‌ ಸಿನಿಮಾದಲ್ಲಿ ನಟಿ ಆಲಿಯಾ ಅವರದ್ದು ‘ಗೆಸ್ಟ್ ರೋಲ್‌’. ಇದರಲ್ಲಿ ಅವರು ಕೇವಲ ಒಂದು ಹಾಡು ಹಾಗೂ ಕೆಲ ಸನ್ನಿವೇಶಗಳಲ್ಲಷ್ಟೇ ಬಂದು ಹೋಗುತ್ತಾರೆ ಎನ್ನಲಾಗುತ್ತಿದೆ. ಆದರೂ ಆಲಿಯಾ ಅವರಿಗೆ ಬಾಹುಬಲಿ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಕನಸಿದ್ದ ಕಾರಣ ಅವರು ಈ ಬಗ್ಗೆ ಬೇಸರಗೊಂಡಿಲ್ಲ ಎಂದು ಅವರೇ ತಿಳಿಸಿದ್ದಾರೆ.

‘ನಾನು ಕರಣ್ ಜೊಹರ್ ಅವರ ನಿರ್ದೇಶನದ ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶಿಸಿದವಳು. ಆಗಿನಿಂದಲೂ ನನಗೆ ಇಬ್ಬರು ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎಂಬ ಕನಸಿತ್ತು. ಅವರಲ್ಲಿ ಒಬ್ಬರು ಸಂಜಯ್ ಲೀಲಾ ಬನ್ಸಾಲಿ ಹಾಗೂ ಇನ್ನೊಬ್ಬರು ಎಸ್‌.ಎಸ್. ರಾಜಮೌಳಿ. ಆರ್‌ಆರ್‌ಆರ್ ಸಿನಿಮಾದಲ್ಲಿ ನನ್ನ ಪಾತ್ರ ಎಷ್ಟು ಹೊತ್ತು ತೆರೆಮೇಲೆ ಕಾಣಿಸುತ್ತದೆ ಎಂಬುದು ನನಗೆ ಮುಖ್ಯವಲ್ಲ. ರಾಜಮೌಳಿ ಅವರ ಜೊತೆ ಕೆಲಸ ಮಾಡಿದ್ದೆ ನನ್ನ ಅದೃಷ್ಟ. ಅಷ್ಟು ಸಾಕು ನನಗೆ. ನಾನು ಇದನ್ನು ನನ್ನ ನಟನಾ ಜೀವನಕ್ಕೆ
ಪಾಠ ಎಂದುಕೊಳ್ಳುತ್ತೇನೆ. ನನಗೆ ಇಲ್ಲಿನ ಸ್ಥಳೀಯರಷ್ಟು ಚೆನ್ನಾಗಿ ತೆಲುಗು ಮಾತನಾಡಲು ಬರುವುದಿಲ್ಲ. ಆದರೆ ಖಂಡಿತ ಪ್ರಯತ್ನಿಸುತ್ತೇನೆ‘ ಎನ್ನುವ ಮೂಲಕ ತೆಲುಗು ಭಾಷಾ ಪ್ರೀತಿ ಹಾಗೂ ರಾಜಮೌಳಿ ಮೇಲಿನ ಅಭಿಮಾನವನ್ನು ಹೊರ ಹಾಕಿದ್ದಾರೆ.

ಪ್ರತಿಕ್ರಿಯಿಸಿ (+)