ಶುಕ್ರವಾರ, ನವೆಂಬರ್ 22, 2019
23 °C
ಯುವ ಬ್ಯಾಡ್ಮಿಂಟನ್‌ ಆಟಗಾರರಿಗೆ ಸುಸಜ್ಜಿತ ತರಬೇತಿ ಉದ್ದೇಶ

ಬ್ಯಾಡ್ಮಿಂಟನ್ ತರಬೇತಿ ಸೌಲಭ್ಯ ಇನ್ಫೊಸಿಸ್‌ ಒಡಂಬಡಿಕೆ

Published:
Updated:
Prajavani

ಬೆಂಗಳೂರು: ಯುವ ಬ್ಯಾಡ್ಮಿಂಟನ್‌ ಆಟಗಾರರಿಗೆ ಸುಸಜ್ಜಿತ ತರಬೇತಿ ಸೌಲಭ್ಯ ನೀಡುವ ಉದ್ದೇಶದೊಂದಿಗೆ ಇನ್ಫೊಸಿಸ್‌ ಪ್ರತಿಷ್ಠಾನವು ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯೊಂದಿಗೆ (ಪಿಪಿಬಿಎ) ಗುರುವಾರ ಒಡಂಬಡಿಕೆ ಮಾಡಿಕೊಂಡಿತು.

ಪಿಪಿಬಿಎ ಸಂಸ್ಥಾಪಕ ಪ್ರಕಾಶ್ ಪಡುಕೋಣೆ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಮೂರ್ತಿ, ‘ಈ ಒಪ್ಪಂದ ಐದು ವರ್ಷಗಳದ್ದಾಗಿದೆ. ಈ ಅವಧಿಯಲ್ಲಿ ಇನ್ಫೋಸಿಸ್‌ ಒಟ್ಟು ₹ 16 ಕೋಟಿ ಧನಸಹಾಯ ನೀಡಲಿದೆ. ಈ ಕಾರ್ಯಕ್ರಮವನ್ನು ಇನ್ಫೋಸಿಸ್‌ ಫೌಂಡೇಷನ್‌–ಪಿಪಿಬಿಎ ಚಾಂಪಿಯನ್‌ ನರ್ಚರಿಂಗ್‌ ಪ್ರೋಗ್ರಾಂ ಎಂದು ಹೆಸರಿಸಲಾಗಿದೆ. ರಾಜ್ಯದ ಪ್ರತಿಭಾನ್ವಿತ ಕ್ರೀಡಾಪಟುಗಳ ಬೆಳವಣಿಗೆಗೆ ಕೈಜೋಡಿಸುವ ಉದ್ದೇಶ ನಮ್ಮದು’ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್‌ ಪಡುಕೋಣೆ, ‘ಪ್ರತಿಭೆಗಳಿಗೆ ಸುಸಜ್ಜಿತ ತರಬೇತಿ ಸೌಲಭ್ಯ ನೀಡುವುದು ನಮ್ಮ ಉದ್ದೇಶವಾಗಿದೆ. ಪಿಪಿಬಿಎ ದೇಶಾದ್ಯಂತ ಸದ್ಯ 45 ಆಟಗಾರರಿಗೆ ತರಬೇತಿ ನೀಡುತ್ತಿದೆ. ಒಪ್ಪಂದದ ಪ್ರಕಾರ ಪ್ರತಿವರ್ಷ 65 ಆಟಗಾರರಿಗೆ ಅವಕಾಶ ಸಿಗಲಿದೆ. ಒಟ್ಟು ಐದು ವರ್ಷ ಈ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಸದ್ಯ ಬ್ಯಾಡ್ಮಿಂಟನ್‌ ಕ್ರೀಡೆಯು ವಿಶ್ವಮಟ್ಟದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡಿದೆ. ಇನ್ಫೋಸಿಸ್‌ ಪ್ರತಿಷ್ಠಾನದ ನೆರವಿನಿಂದ ನಮ್ಮ ಸಂಸ್ಥೆಯು ಇನ್ನಷ್ಟು ಉತ್ತಮ ಪ್ರತಿಭೆಗಳನ್ನು ಬೆಳಕಿಗೆ ತರಲಿದೆ’ ಪಿಪಿಬಿಎ ಸಹಸಂಸ್ಥಾಪಕ ವಿಮಲ್‌ಕುಮಾರ್ ಹೇಳಿದರು.

 

ಪ್ರತಿಕ್ರಿಯಿಸಿ (+)