ಮಂಗಳವಾರ, ನವೆಂಬರ್ 12, 2019
27 °C

ಆಟೊ ಚಾಲಕನಿಂದ ಮಹಿಳೆ ಕೊಲೆ

Published:
Updated:

ಬೆಂಗಳೂರು: ಮಚ್ಚಿನಿಂದ ಹಲ್ಲೆ ಮಾಡಿ ಪರಿಚಿತ ಮಹಿಳೆಯನ್ನು ಆಟೊ ಚಾಲಕ ಕೊಲೆ ಮಾಡಿದ ಘಟನೆ ಕಾಮಾಕ್ಷಿಪಾಳ್ಯದಲ್ಲಿ ಗುರುವಾರ ‌ನಡೆದಿದೆ.

ಲಗ್ಗೆರೆ ನಿವಾಸಿ ಗೀತಾ (35) ಕೊಲೆಯಾದವರು. ಆರೋಪಿ ಶೇಖರ್‌ ಎಂಬಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಬೆಳಿಗ್ಗೆ 10.15ರ ಸುಮಾರಿಗೆ ಶ್ರೀನಿವಾಸನಗರ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮಹಿಳೆಯೊಬ್ಬರು ಮಾರಣಾಂತಿಕ ಹಲ್ಲೆಗೊಳಗಾಗಿ ಬಿದ್ದಿದ್ದರು. ಸಮೀಪ ಮಚ್ಚು ಕೂಡ ಬಿದ್ದಿತ್ತು. ರಕ್ತದ ಮಡುವಿನಲ್ಲಿ ಮಹಿಳೆ ಒದ್ದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು, ಮಹಿಳೆ
ಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಬಳಿಕ ಆಕೆ‌ ಗೀತಾ ಎಂಬುದು ಗೊತ್ತಾಗಿದೆ.

‘ಮಚ್ಚಿನ ಏಟಿನಿಂದ ಗೀತಾ ಅವರ ಒಂದು ಮುಂಗೈ ತುಂಡಾಗಿತ್ತು. ತಲೆಗೆ ಬಲವಾದ ಹೊಡೆತ ಕೂಡಾ ಬಿದ್ದಿತ್ತು. ಚಿಕಿತ್ಸೆ ಫಲಿಸದೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಆಕೆ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದರು.

ಪತಿ ಮತ್ತು ಮೂವರು ಮಕ್ಕಳ ಜತೆ ಲಗ್ಗೆರೆಯಲ್ಲಿ ನೆಲೆಸಿದ್ದ ಗೀತಾ, ಮನೆ ಕೆಲಸ ಮಾಡಿಕೊಂಡಿದ್ದರು. ಆರೋಪಿ ಶೇಖರ್ ಕೂಡ ವಿವಾಹಿತ. ನಾಲೈದು ವರ್ಷಗಳಿಂದ ಗೀತಾ ಮತ್ತು ಶೇಖರ್‌ ಪರಿಚಿತರಾಗಿದ್ದರು ಎನ್ನಲಾಗಿದೆ.

‘ಇಬ್ಬರ ನಡುವೆ ಕ್ಷುಲ್ಲಕ ಕಾರಣಗಳಿಗೆ ಆಗಾಗ ಜಗಳ ನಡೆಯುತ್ತಿತ್ತು. ಗುರುವಾರ ಬೆಳಿಗ್ಗೆ ಗೀತಾ ಅವರ ಮನೆ ಬಳಿ ಹೋಗಿದ್ದ ಶೇಖರ್, ತನ್ನ ಆಟೊದಲ್ಲಿ ಆಕೆಯನ್ನು ಶ್ರೀನಿವಾಸ ನಗರದ ಹೊರವಲಯದ ಸುಮಾರು ಮುಕ್ಕಾಲು ಕಿ.ಲೋ ದೂರದ ಮಣ್ಣಿನ ರಸ್ತೆವರೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಆಟೊ ನಿಲ್ಲಿಸಿ, ಮಚ್ಚಿನಿಂದ ಹಲ್ಲೆ ನಡೆಸಿ ಆಟೊ ಸಹಿತ ಪರಾರಿಯಾಗಿದ್ದಾನೆ. ನಿರ್ಜನ ಪ್ರದೇಶದಲ್ಲಿ
ಕೃತ್ಯ ನಡೆದ ಕಾರಣ ತಕ್ಷಣಕ್ಕೆಯಾರೂ ಗಮನಿಸಿಲ್ಲ. ಕೃತ್ಯಕ್ಕೆ ಮಚ್ಚು ಬಳಸಿರುವುದನ್ನು ಗಮನಿಸಿದರೆ ಗೀತಾ ಅವರನ್ನು ಕೊಲ್ಲಲು ಶೇಖರ್‌ ಮೊದಲೇ ಸಂಚು ರೂಪಿಸಿದಂತೆ ಕಾಣಿಸುತ್ತಿದೆ’ ಎಂದೂ ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)