ಶನಿವಾರ, ನವೆಂಬರ್ 16, 2019
24 °C

ಪರಿಸರ ಕಾಳಜಿಗೆ 10 ಸೂತ್ರ

Published:
Updated:

ಜಗತ್ತಿನ ಅತಿದೊಡ್ಡ ಮಳೆಕಾಡು ಅಮೆಜಾನ್ ಬೆಂಕಿಯಲ್ಲಿ ಬೇಯುತ್ತಿದೆ. ಜಗತ್ತಿನಲ್ಲಿ ಆಮ್ಲಜನಕ ಉತ್ಪಾದನೆಗೆ ಶೇ 20ರಷ್ಟು ಕೊಡುಗೆ ನೀಡುತ್ತಿರುವ ಈ ಕಾಡು ಸುಟ್ಟು ಬೂದಿಯಾದರೆ, ಇಡೀ ಮಾನವಕುಲವೇ ಸಂಕಷ್ಟಕ್ಕೆ ಸಿಲುಕಬಹುದು. ವಾತಾವರಣಕ್ಕೆ ಇಂಗಾಲದ ಡೈ ಆಕ್ಸೈಡ್ ಸೇರ್ಪಡೆಯಾಗಿ, ವಾತಾವರಣವೇ ಏರುಪೇರಾಗುತ್ತದೆ. ಇಂತಹ ಪ್ರಾಕೃತಿಕ ವಿಕೋಪಗಳ ಜತೆ ಮಾನವ ನಿರ್ಮಿತ ಚಟುವಟಿಕೆಗಳಿಂದಲೂ ಇಂಗಾಲದ ಪ್ರಮಾಣ ಏರುತ್ತದೆ. ನಮ್ಮ ಕೈಗಾರಿಕೆ, ಸಾರಿಗೆ, ವಿದ್ಯುತ್ ಬಳಕೆಗಾಗಿ ಉದ್ದೇಶಪೂರ್ವಕವಾಗಿ ಪರಿಸರಕ್ಕೆ ಇಂಗಾಲದ ಡೈ ಆಕ್ಸೈಡ್‌ ಸೇರಿಸುತ್ತಿರುವ ಪ್ರವೃತ್ತಿಯನ್ನು ಮಾನವ ಸಂಪೂರ್ಣ ನಿಲ್ಲಿಸಬೇಕಿದೆ.

ಸಾರಿಗೆ, ವಿದ್ಯುತ್ ಕಾರಣಗಳಿಗೆ ಪಳೆಯುಳಿಕೆ ಇಂಧನವನ್ನು ಸುಟ್ಟಾಗ ಹಸಿರುಮನೆ ಅನಿಲ ವಾತಾವರಣ ಸೇರುತ್ತದೆ. ಇದಕ್ಕೆ ಪರ್ಯಾಯವೆಂದರೆ ನವೀಕರಿಸಬಹುದಾದ ಇಂಧನಗಳ ಮೊರೆ ಹೋಗುವುದು. ಬಹಳಷ್ಟು ದೇಶಗಳು ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆಯನ್ನೇ ನೆಚ್ಚಿಕೊಂಡಿವೆ.

ಸುಸ್ಥಿರ ಇಂಧನ ಮಾರ್ಗಗಳಿಗೆ ಬದಲಾಗುವುದು ಸದ್ಯದ ಅಗತ್ಯ. ಮನೆ, ಕಾರು, ಮೊಬೈಲ್‍ಗೆ ಬಳಸುವ ವಿದ್ಯುತ್‍ನ ಎಷ್ಟು ಭಾಗವನ್ನು ನೀವು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆಯುತ್ತೀರಿ ಎಂಬುದರ ಮೇಲೆ ಸುಸ್ಥಿರತೆ ಅವಲಂಬಿತವಾಗಿದೆ. ಈ ಮೂಲಕ ಜಾಗತಿಕ ಹವಾಮಾನ ವೈಪರೀತ್ಯಕ್ಕೆ ಪ್ರತಿಯೊಬ್ಬರು ತಮ್ಮ ಪುಟ್ಟ ಕಾಣಿಕೆ ನೀಡಬಹುದು. ಸುಲಭವೂ, ಪರಿಣಾಮಕಾರಿಯೂ ಆದ 10 ಸೂತ್ರಗಳನ್ನು ಇಲ್ಲಿ ಕೊಡಲಾಗಿದೆ.

1. ಜಾಗೃತಿ ಮೂಡಿಸಿ: ಸಂಬಂಧಿಕರು, ಸ್ನೇಹಿತರ ಜತೆ ಹವಾಮಾನ ವೈಪರೀತ್ಯದ ಪರಿಣಾಮಗಳ ಕುರಿತು ಮಾತನಾಡಿ. ಸಾಮಾಜಿಕ ಜಾಲತಾಣಗಳಲ್ಲಿ ದನಿ ಎತ್ತಿ. ನೀವು ಆರಿಸಿದ ಪ್ರತಿನಿಧಿಗಳ ಜತೆ ಕಳಕಳಿ ಹಂಚಿಕೊಳ್ಳಿ. ಇಂಗಾಲ ಉಗುಳುವಿಕೆ ಕಡಿತಗೊಳಿಸಲು ಹೊಸ ಕಾನೂನು ಜಾರಿಗೆ ಸರ್ಕಾರವನ್ನು ಪ್ರೋತ್ಸಾಹಿಸಿ.

2. ನವೀಕರಿಸಬಹುದಾದ ಇಂಧನಗಳಿಂದ ಮನೆ ಬೆಳಗಿಸಿ: ನಿಮ್ಮ ಮನೆಬಳಕೆ ವಿದ್ಯುತ್‌ಗಾಗಿ ಮನೆಯ ಚಾವಣಿಯಲ್ಲಿ ಸೌರ ಅಥವಾ ಗಾಳಿಯಂತ್ರದ ವಿದ್ಯುತ್ ಉತ್ಪಾದನೆ ಆರಂಭಿಸಿ ಸ್ವಾಲಂಬಿಗಳಾಗಿ. ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಿದ ವಿದ್ಯುತ್ತನ್ನೇ  ಪೂರೈಸುವಂತೆ ವಿದ್ಯುತ್ ಸರಬರಾಜು ಕಂಪನಿಗೆ ಒತ್ತಾಯಿಸಿ. ರೈತರ ಪಂಪ್‌ಸೆಟ್‌ಗೆ ಹಾಗೂ ಚಾವಣಿಯಲ್ಲಿ ಸೌರಶಕ್ತಿ ಉತ್ಪಾದನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಸಬ್ಸಿಡಿ ಬಗ್ಗೆ ತಿಳಿಸಿ.

3. ಎ.ಸಿ. ಉಪಕರಣ ಕೈಬಿಡಿ: ಕೋಣೆಯನ್ನು ಬೆಚ್ಚಗಾಗಿಸುವ ಹಾಗೂ ತಂಪಾಗಿಡುವ ಸೌಲಭ್ಯಗಳು ಹೆಚ್ಚು ಶಕ್ತಿಯನ್ನು ಬಳಸುತ್ತವೆ. ಮನೆ, ವಾಣಿಜ್ಯ, ಕೈಗಾರಿಕೆಗಳಲ್ಲಿ ಬಿಸಿಮಾಡುವ, ಹವಾನಿಯಂತ್ರಿತ ವ್ಯವಸ್ಥೆಗಳು ಅರ್ಧದಷ್ಟು ಇಂಧನ ಬೇಡುತ್ತವೆ.

4. ಇಂಧನಕ್ಷಮತೆಯ ಉಪಕರಣ ಖರೀದಿಸಿ: ಇಂಧನಕ್ಷಮತೆ ಇರುವ ಉಪಕರಣ ಹಾಗೂ ಯಂತ್ರಗಳನ್ನು ಬಳಸುವುದು ಮತ್ತೊಂದು ಮಾರ್ಗ. ಅನಿಲಗಳ ಹೊರಸೂಸುವಿಕೆ ತಗ್ಗಿಸುವಲ್ಲಿ ಇದು ಮಹತ್ವದ್ದು. ಫ್ರಿಡ್ಜ್‌, ವಾಷಿಂಗ್ ಮಷಿನ್ ಖರೀದಿಸುವಾಗ ಎನರ್ಜಿ ಸ್ಟಾರ್ ಲೇಬಲ್ ಗಮನಿಸುವುದು ಅಗತ್ಯ. ಯಾವುದು ಹೆಚ್ಚು ಇಂಧನ ಉಳಿಸುತ್ತದೆ ಎಂಬ ಮಾಹಿತಿ ಅಲ್ಲಿರುತ್ತದೆ. ಮನೆಯಿಂದ ಹೊರಗೆ ಹೋಗುವಾಗ ಪ್ಲಗ್ ತೆಗೆದು ವಿದ್ಯುತ್ ಉಳಿಸಿ.

5. ನೀರಿನ ಪೋಲು ತಗ್ಗಿಸಿ: ನೀರನ್ನು ಉಳಿತಾಯ ಮಾಡುವುದು ಒಂದರ್ಥದಲ್ಲಿ ಮಾಲಿನ್ಯವನ್ನು ತಗ್ಗಿಸಿದಂತೆಯೇ. ಪಂಪ್ ಬಳಸಿ ನೀರು ಮೇಲೆತ್ತಲು, ನೀರು ಕಾಯಿಸಲು, ನೀರು ಶುದ್ಧೀಕರಿಸಲು – ಹೀಗೆ ಎಲ್ಲ ಹಂತದಲ್ಲಿಯೂ ವಿದ್ಯುತ್ ಅನಿವಾರ್ಯ. ಶವರ್ ಸ್ನಾನದ ಅವಧಿ ಕಡಿತ ಮಾಡಿ. ಹಲ್ಲುಜ್ಜುವಾಗ ನಲ್ಲಿ ಬಂದ್ ಮಾಡುವುದರಿಂದಲೂ ನೀರು ಹಾಗೂ ಅದಕ್ಕೆ ಬೇಕಾದ ವಿದ್ಯುತ್ ಉಳಿಸಬಹುದು.

6. ಸಿದ್ಧ ಆಹಾರಕ್ಕೆ ಹೆಚ್ಚು ವಿದ್ಯುತ್: ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್‌ಗೆ ಶೇ 10ರಷ್ಟು ವಿದ್ಯುತ್ ಬಳಕೆಯಾಗುತ್ತದೆ. ಸಿದ್ಧ ಆಹಾರದಿಂದ ಪ್ಲಾಸ್ಟಿಕ್ ತ್ಯಾಜ್ಯವೂ ಹೆಚ್ಚುತ್ತದೆ. ನೀವು ಆಹಾರವನ್ನು ಹೆಚ್ಚು ಹಾಳುಮಾಡುವುದಿಲ್ಲ ಎಂದಾದರೆ ನೀವು ಇಂಧನ ಬಳಕೆಯನ್ನು ತಗ್ಗಿಸಿದಂತೆಯೇ ಸರಿ.

7. ಎಲ್‌ಇಡಿ ಬಲ್ಬ್‌ ಬಳಸಿ: ಎಲ್‌ಇಡಿ ಬಲ್ಬ್‌ಗಳು ಶೇ 80ರಷ್ಟು ವಿದ್ಯುತ್ ಉಳಿಸುವುದಲ್ಲದೇ ಪ್ರಕಾಶಮಾನವಾಗಿ ಬೆಳಗುತ್ತವೆ. ಹೆಚ್ಚು ದಿನ ಬಾಳಿಕೆ ಬರುವುದರಿಂದ ಹಣವೂ ಉಳಿತಾಯ.

8. ಬ್ಯಾಟರಿ ಚಾಲಿತ ವಾಹನಕ್ಕೆ ಬದಲಾಗಿ: ಹೈಬ್ರಿಡ್, ಬ್ಯಾಟರಿ ಚಾಲಿತ ವಾಹನಗಳನ್ನು ಬಳಸುವುದರಿಂದ ಇಂಧನದ ಜೊತೆ ಹಣವೂ ಉಳಿತಾಯ. ಬೆಂಗಳೂರಿನಲ್ಲಿ 85 ಲಕ್ಷ ವಾಹನಗಳಿವೆ. ಪಳೆಯುಳಿಕೆ ಇಂಧನಗಳನ್ನು ಬಳಸುವುದು ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ. ನಗರವನ್ನು ಇಂಗಾಲಮುಕ್ತಗೊಳಿಸಲು ಸೌರಶಕ್ತಿಯಿಂದ ಚಾರ್ಜ್ ಮಾಡಬಲ್ಲ ವಾಹನಗಳಿಗೆ ಹೊರಳಿಕೊಳ್ಳುವುದು ಈಗಿನ ತುರ್ತು.

9. ಸಾರಿಗೆ ಸಂಚಾರದ ಬಗ್ಗೆ ಯೋಚಿಸಿ: ಉತ್ತಮ ಸಾರ್ವಜನಿಕ ಸಾರಿಗೆ ಸೌಲಭ್ಯ ಇರುವ ನಗರಗಳಲ್ಲಿ ತೈಲೋತ್ಪನ್ನ ಬಳಕೆ, ವಾತಾವರಣದ ಮಾಲಿನ್ಯ ಕಡಿಮೆ. ವಾಯುಸಂಚಾರದ ಬದಲಾಗಿ ರೈಲು ಸಂಚಾರ ಆಯ್ದುಕೊಳ್ಳಿ.\

10. ಇಂಗಾಲ ಸರ್ಟಿಫಿಕೇಟ್: ಪಳೆಯುಳಿಕೆ ಇಂಧನ ಬಳಸಿ ವಿದ್ಯುತ್ ಉತ್ಪಾದಿಸುವ ಸಂಸ್ಥೆಗಳು ಇಂತಿಷ್ಟು ಪ್ರಮಾಣದ ಹಸಿರು ಇಂಧನ ಉತ್ಪಾದಿಸಲೇಬೇಕು ಎಂಬ ನಿಯಮವಿದೆ. ಆದರೆ, ಕೆಲವು ಕಂಪನಿಗಳಿಗೆ ಹಲವು ಕಾರಣಗಳಿಂದ ಅದು ಸಾಧ್ಯವಾಗುವುದಿಲ್ಲ. ಆಗ ಹಸಿರು ಇಂಧನ ಉತ್ಪಾದಕರಿಂದ ಇಂಧನವನ್ನು ಖರೀದಿ ಮಾಡುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದನ್ನು ರಿನೀವಬಲ್ ಎನರ್ಜಿ ಸರ್ಟಿಫಿಕೇಟ್ (ಆರ್‍ಇಸಿ) ಎಂದು ಕರೆಯುತ್ತಾರೆ. ನಿಮ್ಮಲ್ಲಿ ಹೆಚ್ಚುವರಿ ಹಸಿರು ಇಂಧನ ಉತ್ಪಾದನೆಯಾಗಿದ್ದರೆ, ಅದನ್ನು ಮಾರಾಟ ಮಾಡಬಹುದು. ಸೌರ, ಗಾಳಿಯಂತ್ರದ ವಿದ್ಯುತ್‍ಗೆ ಬೇರೆ ಬೇರೆ ದರ ನಿಗದಿ ಮಾಡಲಾಗಿದ್ದು, ಷೇರು ಪೇಟೆಯ ರೀತಿ ಪ್ರಮಾಣಪತ್ರಗಳ ವಹಿವಾಟು ನಡೆಯುತ್ತದೆ. ನವೀಕರಿಸಬಹುದಾದ ಇಂಧನ ಉತ್ಪಾದಿಸಿ, ಪರಿಸರಕ್ಕೆ ನಿಮ್ಮದೇ ಕೊಡುಗೆ ನೀಡಲು ಸಾಧ್ಯವಿದೆ.

ಭಾನುವಾರ ಪ್ರೈಡ್ ರನ್

ಇಂಗಾಲ ರಹಿತ ಕಾರಿಡಾರ್ ನಿರ್ಮಿಸುವುದು ಕ್ರಾನಿಕ್ ಫೌಂಡೇಷನ್ ಉದ್ದೇಶ. ಅತಿಹೆಚ್ಚು ವಿದ್ಯುತ್ ಬಳಕೆದಾರರು ಖಾಸಗಿ ರಂಗದವರು. ವಿದ್ಯುತ್ ಖರೀದಿಸುವವರ ದನಿ ಒಟ್ಟುಗೂಡಿದರೆ ಇದು ಸಾಧ್ಯ ಎನ್ನುತ್ತಾರೆ ರಮೇಶ್ ಶಿವಣ್ಣ. ಕರ್ನಾಟಕ ಸರ್ಕಾರ ಹಾಗೂ ರೋಟರಿ ಸಹಭಾಗಿತ್ವದಲ್ಲಿ ಗ್ರೀನ್ ಎನರ್ಜಿ ಅಭಿಯಾನವನ್ನು ಅವರು ಆರಂಭಿಸಿದ್ದಾರೆ. ವಿವಿಧ ಸಂಸ್ಥೆಗಳು, ಸಣ್ಣ ಹಾಗೂ ದೊಡ್ಡ ಕಂಪನಿಗಳು, ವ್ಯಾಪಾರ ಸಂಘಟನೆಗಳು ಮತ್ತು ಶಿಕ್ಷಣ ಸಂಸ್ಥೆಗಳೂ ಬೆಂಬಲ ಸೂಚಿಸಿವೆ. ಗ್ರೀನ್ ಎನರ್ಜಿ ಅಭಿಯಾನದ ಭಾಗವಾಗಿ ಸೆ.8 ರಂದು ಬೆಂಗಳೂರು ನಗರದಲ್ಲಿ ‘ಪ್ರೈಡ್ ರನ್’ ಏರ್ಪಡಿಸಲಾಗಿದೆ. ಸ್ಥಳ: ಸೇಂಟ್‌ ಜೋಸೆಫ್‌ ಹೈಸ್ಕೂಲ್‌ ಮೈದಾನ, ವಿಠಲ್‌ ಮಲ್ಯ ರಸ್ತೆ. ಸಮಯ: ಬೆಳಿಗ್ಗೆ 5.30, ಸಂಪರ್ಕಿಸಿ: 8095312222

ಕೋಟಿ ನಾಟಿ ಅಭಿಯಾನ

ಬೆಂಗಳೂರಿನ ರೋಟರಿ ಸಂಸ್ಥೆಯು ಕೋಟಿ ನಾಟಿ ಎಂಬ ಅಭಿಯಾನ ಹಮ್ಮಿಕೊಂಡಿದೆ. ಪ್ರತಿ ಜಿಲ್ಲೆಯಲ್ಲಿ ತಲಾ ಒಂದು ಕೋಟಿ ಗಿಡ ನೆಡಲಾಗುತ್ತಿದೆ.

'ಮರಗಳು ಇಂಗಾಲವನ್ನು ಹೀರಿಕೊಂಡು ವಾತಾವರಣದಲ್ಲಿ ಇಂಗಾಲದ ಅಂಶವನ್ನು ಕಡಿಮೆಗೊಳಿಸುತ್ತವೆ. ಹೆಚ್ಚೆಚ್ಚು ಗಿಡಗಳನ್ನು ನೆಡುವ ಅಗತ್ಯವಿದೆ '    

    ರಮೇಶ್ ಶಿವಣ್ಣ,
 ಕ್ರಾನಿಕ್ ಫೌಂಡೇಷನ್ ಮುಖ್ಯಸ್ಥ

ಪ್ರತಿಕ್ರಿಯಿಸಿ (+)