ಶನಿವಾರ, ನವೆಂಬರ್ 23, 2019
18 °C

ಕೋಟ್ಯಧಿಪತಿಯಲ್ಲಿ ಜಗ್ಗೇಶ್‌, ಯುವ ಸಂಸದರು!

Published:
Updated:
Prajavani

ಈ ವಾರಾಂತ್ಯಕ್ಕೆ ‘ಕಲರ್ಸ್‌ ಕನ್ನಡ’ದಲ್ಲಿ ಪ್ರಸಾರವಾಗುವ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ವಿಶೇಷ ಅತಿಥಿಗಳಾಗಿ ಶನಿವಾರ ‘ನವರಸ ನಾಯಕ’ ಜಗ್ಗೇಶ್ ಅವರು ಪುನೀತ್ ರಾಜ್‌ಕುಮಾರ್‌ ಜೊತೆ ಆಟ ಆಡಲಿದ್ದಾರೆ. ರವಿವಾರದಂದು ಯುವ ಸಂಸದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಕೂಡ ಇದೇ ಶೋನಲ್ಲಿ ಭಾಗವಹಿಸಲಿದ್ದಾರೆ.

‘ಕೋಟ್ಯಧಿಪತಿ’ ಪ್ರಶ್ನೋತ್ತರಗಳ ಆಟ. ಸಾಮಾನ್ಯ ಜನ ಈ ಶೋದಲ್ಲಿ ಭಾಗವಹಿಸಿದಾಗ ಇದು ಅವರ ಜೀವನವನ್ನೇ ಬದಲಾಯಿಸಬಹುದು. ಈ ರೀತಿ ತಮ್ಮ ಬದುಕನ್ನೇ ಈ ಶೋದಿಂದ ಬದಲಿಸಿಕೊಂಡವರ ದೊಡ್ಡ ಪಟ್ಟಿಯೇ ಇದೆ. ಸೆಲೆಬ್ರಿಟಿಗಳು ಈ ಶೋದಲ್ಲಿ ಭಾಗವಹಿಸಿದಾಗ ಅವರು ಗೆಲ್ಲುವ ದುಡ್ಡು ಒಂದು ಒಳ್ಳೆಯ ಕೆಲಸಕ್ಕೆ ಉಪಯೋಗವಾಗುತ್ತದೆ.

ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಈ ಶೋನಲ್ಲಿ ಹಂಚಿಕೊಂಡ ವಿಷಯಗಳು ಆಸಕ್ತಿಕರವಾಗಿವೆ. ತಮ್ಮ ಕ್ಷೇತ್ರಗಳ ಬಗ್ಗೆ ಪ್ರತಾಪ್, ತೇಜಸ್ವಿ ಸೂರ್ಯ ಮಾತನಾಡಿದ ರೀತಿಗೆ ಸ್ಟುಡಿಯೋದಲ್ಲಿದ್ದ ಜನ ಕುಣಿದಾಡಿದ್ದು ವಿಶೇಷ.

ಪ್ರತಾಪ್‌ ಸಿಂಹ ತಮ್ಮ ನೇರವಂತಿಕೆ ಮತ್ತು ಪ್ರಶ್ನೆಗಳಿಗೆ ಉತ್ತರಿಸಿದ ರೀತಿಯಿಂದ ಜನ ಮನ ಗೆದ್ದರೆ, ತೇಜಸ್ವಿ ಸೂರ್ಯ ತಾವು ನಂಬಿರುವ ಮೌಲ್ಯಗಳ ಕುರಿತು ಮಾತಾಡಿ ಜನರ ಮೆಚ್ಚುಗೆ ಗಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಜೊತೆಗಿನ ಮೊದಲನೇ ಭೇಟಿ, ನಾಮಿನೇಷನ್ ಸಲ್ಲಿಸುವ ಮೊದಲನೇ ದಿನದ ಎಕ್ಸೈಟ್‌ಮೆಂಟ್‌, ಮನೆಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಮಾಡುವ ಕೆಲಸಗಳು, ಇಷ್ಟಪಡುವ ಅಡುಗೆಗಳು, ಕೊಂಡುಕೊಳ್ಳುವ ತರಕಾರಿಗಳು, ನೋಡಿದ ಸಿನಿಮಾಗಳು ಇವುಗಳ ಬಗ್ಗೆ ಇಬ್ಬರೂ ಮುಕ್ತವಾಗಿ ವಿಷಯಗಳನ್ನು ಹಂಚಿಕೊಂಡರು.

ಕ್ರಿಕೆಟ್, ಟೆನಿಸ್, ಕನ್ನಡ ಸಾಹಿತ್ಯ, ದೇಶದ ಇತಿಹಾಸ, ಸಿನಿಮಾ ಬಗ್ಗೆ ಪ್ರತಾಪ್ ಮತ್ತು ತೇಜಸ್ವಿ ಸೂರ್ಯ ಅವರಿಗಿರುವ ಜಾಣ್ಮೆಗೆ ಜನ ನಿಬ್ಬೆರಗಾಗಿದ್ದು ವಿಶೇಷ. ಇತಿಹಾಸದ ಕುರಿತು ಬಂದಿದ್ದ ಅತಿ ಕಷ್ಟದ ಪ್ರಶ್ನೆಯನ್ನು ಪ್ರತಾಪ್ ಅನಲೈಸ್‌ ಮಾಡಿದ ರೀತಿ ಅದ್ಭುತವಾಗಿತ್ತು. ಜೊತೆಯಲ್ಲಿ ಇವರಿಬ್ಬರು ಕೊಟ್ಟಿದ್ದ ಫೋನ್‌ ಅ ಫ್ರೆಂಡ್ ಲಿಸ್ಟ್‌ನಲ್ಲಿ ಶತಾವಧಾನಿ ಗಣೇಶ್ ಮತ್ತು ಎಸ್.ಎಲ್. ಭೈರಪ್ಪ ಇದ್ದಿದ್ದು ವಿಶೇಷ.

‘ಪ್ರತಾಪ್ ಒಬ್ಬ ನೇರವಂತಿಕೆಯ ವ್ಯಕ್ತಿ. ಅವರು ಸಂಸದ ಆಗುವ ಮೊದಲು ಹೇಗಿದ್ದರೋ ಅದೇ ನೇರವಂತಿಕೆಯನ್ನು ಈಗಲೂ ಉಳಿಸಿಕೊಂಡಿದ್ದು ತುಂಬಾ ಖುಷಿಯಾಯಿತು. ಜೊತೆಯಲ್ಲಿ ಇಬ್ಬರೂ ಬೇರೆ ಬೇರೆ ವಿಷಯಗಳ ಬಗ್ಗೆ ತಿಳುವಳಿಕೆ ಇರುವ ಯಂಗ್ ಎಂಪಿಗಳು. ಒಂದು ಒಳ್ಳೆಯ ಉದ್ದೇಶಕ್ಕೆ ಆಡಿ ಹಣ ಗೆಲ್ಲುವುದು ಮಾತ್ರ ಇದರ ಉದ್ದೇಶವಲ್ಲ. ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಅವರು ಏನೆಲ್ಲಾ ತಿಳಿದುಕೊಂಡಿದ್ದಾರೆ ಎಂದು ಜನರಿಗೆ ತಿಳಿಸುವುದು ಮುಖ್ಯ. ಜೊತೆಯಲ್ಲಿ ಬೇರೆ ಬೇರೆ ವಿಷಯಗಳನ್ನು ಅವರು ಹೇಗೆ ಗ್ರಹಿಸುತ್ತಾರೆ ಎಂದು ಹೇಳುವುದೂ ಮುಖ್ಯ. ಟೀವಿ ಮತ್ತು ಸಿನಿಮಾ ಸೆಲೆಬ್ರಿಟಿಗಳ ಕಾರ್ಯಕ್ರಮದ ಮಧ್ಯೆ ಇದೊಂದು ಹಿತವಾದ ಬದಲಾವಣೆ’ ಎನ್ನುತ್ತಾರೆ ಕಲರ್ಸ್‌ ಕನ್ನಡದ ಕ್ಲಸ್ಟರ್‌ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್.

‘ಸ್ಪಷ್ಟ ಕನ್ನಡ, ವಿಷಯಗಳ ಬಗ್ಗೆ ಸ್ಪಷ್ಟತೆ ತೇಜಸ್ವಿ ಸೂರ್ಯ
ಪರ್ಸನಾಲಿಟಿಯ ಹೈಲೈಟ್. ಸಂಸದನಾದ ನಂತರದ ಕಷ್ಟಗಳ ಕುರಿತು ಅವರು ಮಾತನಾಡಿದ್ದು ಈ ಕಾರ್ಯಕ್ರಮದ ಹೈಲೈಟ್’ ಎನ್ನುತ್ತಾರೆ ಗುಂಡ್ಕಲ್‌.

ಶನಿವಾರದ ಎಪಿಸೋಡ್‌ನಲ್ಲಿ ಬೆಂಗಳೂರಿನಲ್ಲಿ ಹುಟ್ಟಿಕೊಳ್ಳಬಹುದಾದ ನೀರಿನ ಸಮಸ್ಯೆ ಕುರಿತು ಮಾತನಾಡಿದ್ದು ನವರಸ ನಾಯಕ ಜಗ್ಗೇಶ್. ಅವರಿದ್ದ ಒಂದೂವರೆ ಗಂಟೆ ಅವಧಿಯಲ್ಲಿ ಇಡೀ ಸ್ಟುಡಿಯೋ ನಗುವುದನ್ನು ನಿಲ್ಲಿಸಲೇ ಇಲ್ಲ. ಪುನೀತ್ ಅವರು ಕೇಳಿದ ಒಂದೊಂದು ಪ್ರಶ್ನೆ ಹಾಗೂ ಜಗ್ಗೇಶ್ ಕೂಡ ಪುನೀತ್‌ಗೆ ಹಾಕಿದ ಒಂದೊಂದು ಪ್ರಶ್ನೆಯ ರೀತಿ ಮಜವಾಗಿತ್ತು. ಪುನೀತ್ ಪ್ರಶ್ನೆಗೆ ಜಗ್ಗೇಶ್ ಉತ್ತರ ಕೊಟ್ಟಿದ್ದು, ಜಗ್ಗೇಶ್ ಪ್ರಶ್ನೆಗೆ ಪುನೀತ್ ಉತ್ತರ ನೀಡಿದ್ದು ಈ ಎಪಿಸೋಡ್‌ನ ಹೈಲೈಟ್.

‘ಜಗ್ಗೇಶ್‌ಗಿಂತ ಒಳ್ಳೆಯ ಮಾತುಗಾರ ನಮ್ಮ ನಡುವೆ ಇಲ್ಲ ಎಂದೇ ನನ್ನ ಅನಿಸಿಕೆ. ಅವರ ಮಾತಿನಲ್ಲಿ ಹಾಸ್ಯ ಇದೆ. ಅಸ್ಖಲಿತವಾದ ಕನ್ನಡ ಇದೆ. ಮುಖ್ಯವಾಗಿ ನಿತ್ಯದ ಜೀವನದಲ್ಲಿ ನಾವು ತಿಳಿದುಕೊಳ್ಳಲೇಬೇಕಾದ ಒಳನೋಟಗಳಿವೆ. ಇವರ ಎಪಿಸೋಡ್‌ ಅನ್ನು ಎಂಟರ್‌ಟೇನ್ಮೆಂಟ್‌ ಜೊತೆ ಒಳ್ಳೆಯ ವಿಷಯ ತಿಳಿದುಕೊಳ್ಳುವುದಕ್ಕೆ ನೀವು ನೋಡಲೇಬೇಕು’ ಎನ್ನುವುದು ಕಾರ್ಯಕ್ರಮದ ಹೋಸ್ಟ್ ಆಗಿರುವ ಪುನೀತ್ ರಾಜ್‌ಕುಮಾರ್ ಅವರ ಅಭಿಪ್ರಾಯ.

ಮಾಹಿತಿ ಮತ್ತು ಎಂಟರ್‌ಟೇನ್ಮೆಂಟ್ ಎರಡನ್ನೂ ಕೊಡುವ ಒಂದೇ ಒಂದು ಕಾರ್ಯಕ್ರಮ ಇದ್ದರೆ ಅದು ಕನ್ನಡದ ಕೋಟ್ಯಧಿಪತಿ. ಇದಕ್ಕಿಂತ ಪಾಸಿಟಿವ್ ಆಗಿರುವ ಶೋ ಟೀವಿಯಲ್ಲಿ ಇನ್ನೊಂದಿದೆ ಅನಿಸುವುದಿಲ್ಲ. ಇಲ್ಲಿ ಉತ್ತರ ಗೊತ್ತಿದ್ದರೆ ಹಣ ಸಿಗುತ್ತದೆ. ಇಲ್ಲದೇ ಇದ್ದರೆ ಪ್ರಶ್ನೆಗೆ ಉತ್ತರ ಸಿಗುತ್ತದೆ. ಈ ಕಾರ್ಯಕ್ರಮ ‘ಕಲರ್ಸ್‌ ಕನ್ನಡ’ದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುತ್ತಿದೆ. ಇದು ಈಗಾಗಲೇ ಕನ್ನಡಿಗರ ಜನ ಮನ ಗೆದ್ದಿದೆ

ಪ್ರತಿಕ್ರಿಯಿಸಿ (+)