ಶನಿವಾರ, ನವೆಂಬರ್ 23, 2019
23 °C
ತವರಿನ ಅಂಗಳದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಆಘಾತ

ಬಿಯಾಂಕ ಅಮೆರಿಕ ಓಪನ್ ಕಿರೀಟದ ಹೊಸ ಒಡತಿ

Published:
Updated:
Prajavani

ನ್ಯೂಯಾರ್ಕ್‌: ‘ಇಲ್ಲಿ ಸೆರೆನಾ ವಿಲಿಯಮ್ಸ್‌ ಅವರಂತಹ ದಿಗ್ಗಜ ಆಟಗಾರ್ತಿಯ ಎದುರು ಆಡುವ ಕನಸು ಇಂದು ನನಸಾಯಿತು. ಅದರಲ್ಲೂ ಅವರನ್ನು ಜಯಿಸಿದ್ದು ಅವಿಸ್ಮರಣೀಯ. ಈ ಕ್ಷಣಕ್ಕಾಗಿ ಹಲವು ವರ್ಷಗಳಿಂದ ಕಠಿಣ ಪರಿಶ್ರಮಪಟ್ಟಿದ್ದೇನೆ.ಏಕೆಂದರೆ ಈ  ಆಟದ ಮಹಾನ್ ಆಟಗಾರ್ತಿಯನ್ನು ಎದುರಿಸುವುದು ಸುಲಭವಲ್ಲ’–

ಭಾನುವಾರ ಬಿಲ್ಲಿ ಜೀನ್ ಕಿಂಗ್ ಟೆನಿಸ್ ಸೆಂಟರ್‌ ಕೋರ್ಟ್‌ನಲ್ಲಿ ಅಮೆರಿಕ ಓಪನ್ ಟೆನಿಸ್‌ ಟೂರ್ನಿಯ ಮಹಿಳೆಯ ಸಿಂಗಲ್ಸ್‌ ಕಿರೀಟ ಧರಿಸಿದ ಕೆನಡಾದ ಬಿಯಾಂಕಾ ಅಂಡ್ರೆಸ್ಕ್ಯೂ ಅವರ ಸಂತಸದ ನುಡಿಗಳಿವು. 19 ವರ್ಷದ ಹುಡುಗಿ ಬಿಯಾಂಕಾ ಫೈನಲ್‌ನಲ್ಲಿ 6–3, 7–5ರಿಂದ ತನ್ನ ‘ರೋಲ್‌ ಮಾಡೆಲ್‌’ ಸೆರೆನಾರನ್ನು ಸೋಲಿಸಿ ಗೆದ್ದ ಪ್ರಶಸ್ತಿ ಇದು. 37 ವರ್ಷದ ಸೆರೆನಾ ತಮ್ಮ ತವರಿನ ಅಂಗಳದಲ್ಲಿ ಮತ್ತೊಮ್ಮೆ ನಿರಾಶೆ ಅನುಭವಿಸಿದರು. 2009ರಲ್ಲಿ ಇಲ್ಲಿ ಅವರು ಪ್ರಶಸ್ತಿ ಗೆದ್ದಿದ್ದರು. ಅದರ ನಂತರ ಅವರಿಗೆ ಇಲ್ಲಿ ಕಿರೀಟ ಧರಿಸಲು ಸಾಧ್ಯವಾಗಿಲ್ಲ. 

2017ರಲ್ಲಿ ಸೆರೆನಾ  ಆಸ್ಟ್ರೇಲಿಯಾ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಅದು ಅವರ 23ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯಾಗಿತ್ತು. 22 ಗ್ರ್ಯಾನ್‌ಸ್ಲಾಮ್ ವಿಜೇತೆ ಸ್ಟೆಫಿ ಗ್ರಾಫ್‌ ದಾಖಲೆಯನ್ನು ಅವರು ಮೀರಿದ್ದರು. 24 ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾದ ಮಾರ್ಗರೇಟ್ ಕೋರ್ಟ್ ಅವರ ದಾಖಲೆಯನ್ನು ಸರಿಗಟ್ಟಲು ಸೆರೆನಾ ಇನ್ನೊಂದು ಗ್ರ್ಯಾನ್‌ಸ್ಲಾಮ್ ಗೆಲ್ಲಬೇಕಿದೆ.

ಹೋದ ವರ್ಷ ಇದೇ ಅಂಗಳದಲ್ಲಿ ಫೈನಲ್‌ನಲ್ಲಿ ಸೆರೆನಾ ಅವರು ಜಪಾನಿನ ನೊವೊಮಿ ಒಸಾಕಾ ಅವರ ಎದುರು ಸೋತಿದ್ದರು. ಸತತ ನಾಲ್ಕನೇ ಟೂರ್ನಿಯ ಫೈನಲ್‌ನಲ್ಲಿ ಅವರು ಪರಾಭವಗೊಂಡಿದ್ದಾರೆ. ಇದೀಗ ಬಿಯಾಂಕಾ ಎದುರು ಎಡವಿದ್ದಾರೆ.

ಕಿಕ್ಕಿರಿದು ಸೇರಿದ್ದ ಟೆನಿಸ್ ಅಭಿಮಾನಿಗಳ ಎದುರು ನಡೆದ ಫೈನಲ್‌ನ ಮೊದಲ ಸೆಟ್‌ನ  ಆರಂಭದಲ್ಲಿ ಬಿಯಾಂಕಾ ತುಸು ತಡಬಡಾಯಿಸಿದರು. ಆದರೆ, ಕೆಲವೇ ನಿಮಿಷಗಳ ನಂತರ ಆತ್ಮವಿಶ್ವಾಸದಿಂದ ಆಡಿದರು. ಸೆರೆನಾ ಅವರ  ಶರವೇಗದ ಸರ್ವ್‌ಗಳಿಗೆ ಉತ್ತರ ನೀಡಿದರು. ಚುರುಕಾದ ರಿಟರ್ನ್‌ಗಳು ಮತ್ತು ಉತ್ತಮ ಸರ್ವ್‌ಗಳಿಂದ ಅಂಕಗಳನ್ನು ತಮ್ ಖಾತೆಗೆ ಸೇರಿಸಿಕೊಂಡರು. ಅದೃಷ್ಟವೂ ಅವರೊಂದಿಗೆ ಇತ್ತು. ಅದರಿಂದಾಗಿ ಮೊದಲ ಸೆಟ್‌ ಗೆದ್ದರು.

ಆದರೆ ಟೈಬ್ರೇಕರ್‌ನಲ್ಲಿ ಮುಕ್ತಾಯವಾದ ಎರಡನೇ ಸೆಟ್‌ನಲ್ಲಿ ಗೆಲ್ಲಲು ಬಿಯಾಂಕಾ ಬಹಳಷ್ಟು ಬೆವರು ಹರಿಸಿದರು. ಸೆರೆನಾ ಅವರ ಶಕ್ತಿಯುತ ರ‍್ಯಾಲಿಗಳನ್ನು ಎದುರಿಸಿದರು. ಫೋರ್‌ಹ್ಯಾಂಡ್, ಬ್ಯಾಕ್‌ಹ್ಯಾಂಡ್ ಹೊಡೆತಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದರು. 

ಸೆರೆನಾ ಮೆಚ್ಚುಗೆ
‘ಬಿಯಾಂಕಾ ಅದ್ಭುತವಾಗಿ ಆಡಿದರು. ಅವರ ಬಗ್ಗೆ ಬಹಳ ಸಂತಸವಾಗುತ್ತಿದೆ. ಒಳ್ಳೆಯ ಟೆನಿಸ್ ಆಟ ಇವತ್ತಿನದು. ಯಾರೇ ಗೆಲ್ಲಲಿ, ಸೋಲಲಿ. ಆದರೆ ಉತ್ತಮವಾದ ಆಟ ನಡೆಯಿತು. ಬಿಯಾಂಕಾಗೆ ಅಭಿನಂದನೆಗಳು’ ಎಂದು ಸೆರೆನಾ ಪಂದ್ಯದ ನಂತರ ಹೇಳಿದರು.

ಹಿಂದಿನ ಎರಡು ವರ್ಷ ವೈಫಲ್ಯ
ಹೋದ ಎರಡು ವರ್ಷಗಳಲ್ಲಿ ಬಿಯಾಂಕಾ ಅವರು ಟೂರ್ನಿಯ ಮುಖ್ಯ ಸುತ್ತಿಗೆ  ಪ್ರವೇಶಿಸುವಲ್ಲಿಯೂ ವಿಫಲರಾಗಿದ್ದರು. ಆದರೆ ಈ ಬಾರಿ ಅವರು ಅಮೋಘ ಸಾಧನೆ ಮಾಡಿದರು.

ಎರಡನೇ ಸೆಟ್‌ನಲ್ಲಿ ಕಠಿಣ ಸ್ಪರ್ಧೆ
ಟೈಬ್ರೇಕರ್‌ನಲ್ಲಿ ಮುಕ್ತಾಯವಾದ ಎರಡನೇ ಸೆಟ್‌ನಲ್ಲಿ ಗೆಲ್ಲಲು ಬಿಯಾಂಕಾ ಬಹಳಷ್ಟು ಬೆವರು ಹರಿಸಿದರು. ಸೆರೆನಾ ಅವರ ಶಕ್ತಿಯುತ ರ‍್ಯಾಲಿಗಳನ್ನು ಎದುರಿಸಿದರು.  ಫೋರ್‌ಹ್ಯಾಂಡ್, ಬ್ಯಾಕ್‌ಹ್ಯಾಂಡ್ ಹೊಡೆತಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದರು. 

*ಪಂದ್ಯ ವೀಕ್ಷಿಸಿದ ಇಂಗ್ಲೆಂಡ್ ರಾಜಮನೆತನ ಮೇಘನ್ ಮಾರ್ಕೆಲ್

*ಸೆರೆನಾ ಪತಿ ಅಲೆಕ್ಸಿಸ್ ಒಹಾನಿಯನ್, ಸಹೋದರಿ ವೀನಸ್ ಹಾಜರಿದ್ದರು

*ಫೈನಲ್‌ ಪಂದ್ಯ ನೋಡಿದ 24 ಸಾವಿರ ಪ್ರೇಕ್ಷಕರು

ಪ್ರತಿಕ್ರಿಯಿಸಿ (+)