ಶನಿವಾರ, ನವೆಂಬರ್ 16, 2019
24 °C

ಬೆಂಗಳೂರಿನಲ್ಲಿ ಸಿಗ್ನಲ್‌ ರಹಿತ ಯಾನದ ಅಭಿಯಾನ

Published:
Updated:

ಲಕ್ಕಸಂದ್ರದಿಂದ ಕಾರ್ಪೊರೇಷನ್‌ ವೃತ್ತದವರೆಗೆ ಸಿಗ್ನಲ್‌ ರಹಿತ ಪ್ರಯಾಣದ ಕಲ್ಪನೆಯೊಂದನ್ನು ನಗರದ ಬ್ಯಾಂಕ್ ಉದ್ಯೋಗಿಯೊಬ್ಬರು ನೀಡಿದ್ದಾರೆ.

ಅಲ್ಲಲ್ಲಿ ಪುಟ್ಟ ಎತ್ತರಿಸಲ್ಪಟ್ಟ ಮಾರ್ಗಗಳನ್ನು ನಿರ್ಮಿಸಿ, ಈಗಿರುವ ಜಂಕ್ಷನ್‌ಗಳನ್ನು ನಿವಾರಿಸಿಕೊಂಡು ನೇರ ಪ್ರಯಾಣ ಸಾಧ್ಯತೆ ಬಗ್ಗೆ ಒಂದು ನಕಾಶೆ ರೂಪಿಸಿದ್ದಾರೆ. ಅದನ್ನು ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳಿಗೂ ಸಲ್ಲಿಸಿದ್ದಾರೆ. 

ನಗರದ ಕೆನರಾ ಬ್ಯಾಂಕ್ ಉದ್ಯೋಗಿ ಎ.ವಿ. ಮಂಜುನಾಥ್‌ ಈ ನಕ್ಷೆ ರೂಪಿಸಿದವರು. ಅವರ ಸಹೋದ್ಯೋಗಿ ಮೋಹನ್ ಎಸ್‌. ಈ ನಕ್ಷೆ ಬಿಡಿಸಲು ಕೈ ಜೋಡಿಸಿದ್ದಾರೆ. ಕಲಾವಿದ ಫಣೀಶ್‌ ಅವರೂ ನೆರವಾಗಿದ್ದಾರೆ. ಮಂಜುನಾಥ್‌ ಅವರ ಯೋಜನೆ ಪ್ರಕಾರ ಹೊಸ ಫ್ಲೈಓವರ್‌ಗಳು ನಿರ್ಮಾಣವಾದಲ್ಲಿ ಅವು ಹಾಲಿ ಇರುವ ಫ್ಲೈಓವರ್‌ಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಹೀಗಾಗಿ ಲಕ್ಕಸಂದ್ರದಿಂದ ಮೆಜೆಸ್ಟಿಕ್‌ ಕಡೆಗೆ (ಡಬಲ್‌ರೋಡ್‌ ಮೂಲಕ) ಹೋಗುವವರು ನೇರ ಯಾನ ಮಾಡಬಹುದು ಎಂಬುದು ಅವರ ಪರಿಕಲ್ಪನೆ. 

ಇದೇ ಯೋಜನೆಯ ಪರಿಕಲ್ಪನೆಯನ್ನು ಮಂಜುನಾಥ್‌ ಅವರು 2012ರಲ್ಲಿ ಬಿಬಿಎಂಪಿಯ ನಗರ ಯೋಜನೆ (ದಕ್ಷಿಣ) ವಿಭಾಗದ ಜಂಟಿ ನಿರ್ದೇಶಕರಿಗೆ ನೀಡಿದ್ದರು. ಅವರು ಈ ಸಲಹೆಯನ್ನು ತಾಂತ್ರಿಕ ತಜ್ಞರೊಂದಿಗೆ ಚರ್ಚಿಸಿ ಪರಿಶೀಲಿಸಬಹುದು ಎಂದು ಶಿಫಾರಸು ಮಾಡಿ ಮೇಲಧಿಕಾರಿಗಳಿಗೆ ಪತ್ರ ಬರೆದರು. ‘ಆ ಬಳಿಕ ಯಾವುದೇ ಬೆಳವಣಿಗೆ ಆಗಲಿಲ್ಲ. ಕೊನೇ ಪಕ್ಷ ಸಮೀಕ್ಷೆಯಾದರೂ ಮಾಡಬಹುದಿತ್ತು. ಅದೂ ಆಗಲಿಲ್ಲ’ ಎನ್ನುವುದು ಮಂಜುನಾಥ್‌ ಅವರ ಬೇಸರ.

ಹೇಗೆ ಸಾಧ್ಯ?

ನಿಮ್ಹಾನ್ಸ್‌ ಜಂಕ್ಷನ್‌ನಿಂದ ಲಕ್ಕಸಂದ್ರ ಮುಖ್ಯರಸ್ತೆ, ಸಿದ್ದಾಪುರ ಜಂಕ್ಷನ್‌ ಮೂಲಕ ಹಾದು ಹೋಗುವಂತೆ ಎರಡು ಪಥಗಳ ಎತ್ತರಿಸಲ್ಪಟ್ಟ ಮಾರ್ಗ ನಿರ್ಮಿಸಬೇಕು. ಈ ಫ್ಲೈ ಓವರ್‌ ವಿಲ್ಸನ್‌ ಗಾರ್ಡನ್‌ ಸ್ಮಶಾನದ ಬಳಿ ಕೊನೆಗೊಳ್ಳುತ್ತದೆ. ಸಿದ್ದಾಪುರ ಜಂಕ್ಷನ್‌ ಬಳಿ ವಾಹನಗಳು ಇಳಿದು ಹೋಗುವಂತೆ ಮಲ್ಲಿಗೆ ಆಸ್ಪತ್ರೆ ಬಳಿ ರ‍್ಯಾಂಪ್‌ ನಿರ್ಮಿಸಬೇಕು. 

ಲಾಲ್‌ಬಾಗ್‌ ಉತ್ತರ ದ್ವಾರದ ಬಳಿ ಅಂಡರ್‌ಪಾಸ್‌ ನಿರ್ಮಿಸಬೇಕು. ಇದೇ ಭಾಗದಲ್ಲಿ ಇನ್ನೊಂದು ಫ್ಲೈ ಓವರ್‌ ನಿರ್ಮಿಸಬೇಕು. ಇದು ಶಾಂತಿನಗರ ಬಿಎಂಟಿಸಿ ನಿಲ್ದಾಣದ ಮುಂಭಾಗ ಹಾದುಹೋಗುತ್ತದೆ. ಈ ಫ್ಲೈಓವರ್‌ ಬಳಸಲು ಅನುಕೂಲವಾಗುವಂತೆ ಶಾಂತಿನಗರ ಬಸ್‌ ನಿಲ್ದಾಣದ ಮುಂಭಾಗ ರ‍್ಯಾಂಪ್‌ ನಿರ್ಮಿಸಬೇಕು. ಹಾಲಿ ಇರುವ ಡಬಲ್‌ ರೋಡ್‌ನ ಫ್ಲೈಓವರ್‌ಗೆ ಸಂಪರ್ಕ ಕಲ್ಪಿಸುತ್ತದೆ. ಮುಂದೆ ರಿಚ್‌ಮಂಡ್‌ ವೃತ್ತದ ಫ್ಲೈ ಓವರ್‌ ಬಳಿ ಒಂದು ಇಳಿದಾರಿಯನ್ನು (ವುಡ್‌ಲ್ಯಾಂಡ್‌ ಹೋಟೆಲ್‌ ಬಳಿ) ನಿರ್ಮಿಸಬೇಕು. ಇದೀಗ ಕಾರ್ಪೊರೇಷನ್‌ ಕಡೆಗೆ ತೆರಳುವ ದಾರಿ ಸುಗಮವಾಗುತ್ತದೆ. ಇದೇ ಮಾದರಿಯ ಫ್ಲೈ ಓವರ್‌ ಅನ್ನು ನಗರದ ಮದರ್‌ ಥೆರೇಸಾ ವೃತ್ತದ ಸಮೀಪ (ಲೈಫ್‌ಸ್ಟೈಲ್‌ ಬಳಿ) ರಿಚ್‌ಮಂಡ್‌ ರಸ್ತೆಯ ಕೆಲವು ಅಡ್ಡ ರಸ್ತೆಗಳನ್ನು ನಿವಾರಿಸುವ ರೀತಿ ನಿರ್ಮಿಸಬೇಕು.

ಶೂಲೇ ವೃತ್ತದ ಬಳಿಯೂ ಪುಟ್ಟ ಅಂಡರ್‌ಪಾಸ್‌ ನಿರ್ಮಿಸುವ ಮೂಲಕ ಇಲ್ಲಿ ಉಂಟಾಗುವ ವಾಹನ ದಟ್ಟಣೆಯನ್ನು ನಿವಾರಿಸಬಹುದು ಎನ್ನುತ್ತಾರೆ ಮಂಜುನಾಥ್‌.

ಪ್ರತಿಕ್ರಿಯಿಸಿ (+)