ಗುರುವಾರ , ನವೆಂಬರ್ 21, 2019
20 °C
ಜಿಲ್ಲೆಯ ಚರ್ಚ್‌ಗಳಲ್ಲಿ ಏಸು ತಾಯಿಯ ಸ್ಮರಣೆ– ಹೊಸಕ್ಕಿ ಊಟ ಸೇವಿಸಿ ಸಂಭ್ರಮ, ತೆನೆ ವಿತರಣೆ

ಮಾತೆ ಮರಿಯಮ್ಮನ ಆದರ್ಶ ಪಾಲಿಸಲು ಸಲಹೆ

Published:
Updated:
Prajavani

ಕೊಟ್ಟಿಗೆಹಾರ: ಮಾನವನು ಏಕತೆಯಿಂದ ಬದುಕಿ ಉತ್ತಮ ಸಹಬಾಳ್ವೆ ನಡೆಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಜನರಲ್ಲಿ ಹಿಂದಿನ ಕಾಲದ ಮಾನವ ಸಂಬಂಧಗಳ ಸರಪಳಿಗಳು ಕಳಚಿಕೊಳ್ಳುತ್ತಿವೆ. ಆಧುನಿಕತೆಯಿಂದ ಸಮಾಜದಲ್ಲಿ ಏಕತೆಗೆ ಧಕ್ಕೆಯಾಗಿದೆ ಎಂದು ಮೂಡುಬೆಳ್ಳೆ ಕಪುಚಿನ್ ಗುರುಕೇಂದ್ರದ ಗುರು ಜೇಸನ್ ಅಭಿಪ್ರಾಯಪಟ್ಟರು.

ಅವರು ಬಣಕಲ್ ಬಾಲಿಕಾ ಮರಿಯ ಚರ್ಚ್‍ನಲ್ಲಿ ಮಾತೆ ಮರಿಯಮ್ಮನವರ ಹಬ್ಬದ ಪೂಜೆ ಅರ್ಪಿಸಿ ಮಾತನಾಡಿದರು.

‘ಪ್ರಕೃತಿ ತಾಯಿಯನ್ನು ನಾವು ಪ್ರೀತಿಸಬೇಕು. ಆಗ ಮಾತ್ರ ಪ್ರಕೃತಿಯು ಉತ್ತಮ ಫಲವನ್ನು ನೀಡಬಲ್ಲದು. ಹಾಗೆಯೇ ಕುಟುಂಬದಲ್ಲಿ ನಮ್ಮ ಮಾತೆಗೆ ನಾವು ಗೌರವಿಸಿದದರೆ ನಮ್ಮ ಕುಟುಂಬವೂ ಏಕತೆಯಿಂದ ಬಾಳುತ್ತದೆ. ಇಂದಿನ ಸ್ಥಿತಿಯಲ್ಲಿ ಮಕ್ಕಳಿಗೂ ಕುಟುಂಬದಲ್ಲಿ ಒಂದೊಂದು ಕೋಣೆಗಳಿದ್ದು, ಪೋಷಕರು ಕೋಣೆಯ ಒಳಗೆ ಹೋಗಬೇಕಾದರೆ ಮಕ್ಕಳಲ್ಲಿ ಅನುಮತಿ ಕೇಳಿಯೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಸ್ಕೃತಿ ದೂರವಾಗಬೇಕು’ ಎಂದರು.

ಬಣಕಲ್, ಜಾವಳಿ, ಬಾಳೂರು, ಕೊಟ್ಟಿಗೆಹಾರ, ಕುಂದೂರು ಮತ್ತಿತರ ಗ್ರಾಮಗಳ ಕ್ರೈಸ್ತರು ಬಣಕಲ್ ಚರ್ಚ್‌ ನಲ್ಲೇ ಸಮಾವೇಶಗೊಂಡು ಹೊಸಕ್ಕಿ ಊಟ ಸೇವಿಸುವ ಮೂಲಕ ಮಾತೆ ಮರಿಯಮ್ಮನವರ ಜಯಂತಿಯನ್ನು ವಿಶೇಷವಾಗಿ ಆಚರಿಸಿದರು. ವಿವಿಧ ಮನರಂಜನಾ ಸ್ಪರ್ಧೆಗಳು ನಡೆದವು. ಕಬ್ಬು ಮತ್ತು ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಬಣಕಲ್ ಧರ್ಮಗುರು ಆಲ್ಬರ್ಟ್ ಡಿಸಿಲ್ವ, ಅಂತೋನಿ ಡಿಸೋಜ, ರೊನಾಲ್ಡ್ ಫೆರ್ನಾಂಡಿಸ್ ಇದ್ದರು.

ಕೆಳಗೂರು ಚರ್ಚ್‍ನಲ್ಲಿ ರೆ.ಪಾ.ಜಾರ್ಜ್ ಅಂದ್ರಾದೆ ಹಬ್ಬದ ಪೂಜೆ ನೆರವೇರಿಸಿ ಮಾತನಾಡಿ, ‘ಕುಟುಂಬದಲ್ಲಿ ತಾಯಿಗೆ (ಮಾತೆ)ಮುಖ್ಯ ಸ್ಥಾನ ನೀಡುತ್ತೇವೆ. ಹಾಗೆಯೇ ಏಸುವಿನ ತಾಯಿ ನಮಗೆ ಉತ್ತಮ ದಾರಿಯಲ್ಲಿ ಸಾಗಲು ಪ್ರೇರೇಪಕರಾಗಿದ್ದಾರೆ. ಅವರ ಆದರ್ಶ ಪಾಲಿಸಿ ಸಮಾಜದಲ್ಲಿ ಉತ್ತಮರಾಗಿ ನಡೆಯಿರಿ’ ಎಂದರು.

ಹೊಸಕ್ಕಿ ಆಶೀರ್ವಚನ ಮಾಡುವ ಮೂಲಕ ಜನರಿಗೆ ಹೊಸ ಭತ್ತದ ಪೈರಿನ ತೆನೆಗಳನ್ನು ಹಂಚಲಾಯಿತು.

ಕೂವೆ ಚರ್ಚ್‌ನಲ್ಲಿ ರೆ.ಫಾ.ಸ್ಟ್ಯಾನಿ ಕಾರ್ಡೋಜಾ ಮರಿಯ ಜಯಂತಿ ಹಬ್ಬದ ಸಂದೇಶ ನೀಡಿದರು. ಚರ್ಚ್‍ನಲ್ಲಿ ಹೊಸ ತೆನೆ ಆಶೀರ್ವದಿಸಿ ಜನರಿಗೆ ಹಂಚಲಾಯಿತು. ಚರ್ಚ್‍ನಲ್ಲಿ ಸಾಮೂಹಿಕವಾಗಿ ಆಹಾರ ಸೇವಿಸುವ ಮೂಲಕ ಕುಟುಂಬದ ಏಕತೆಯ ಸಂದೇಶವನ್ನು ಭಕ್ತರಿಗೆ ಸಾರಲಾಯಿತು.

ಪಾಲನಾ ಸಮಿತಿಯ 18 ಪದಾಧಿಕಾರಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಯಿತು. ಭಕ್ತಾದಿಗಳಿಗೆ ಚರ್ಚ್‍ನಲ್ಲಿ ವಿವಿಧ ಹೂವಿನ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಕೂವೆ ತಂಡ ಪ್ರಥಮ, ನಿಡುವಾಳೆ ತಂಡ ದ್ವಿತೀಯ ಸ್ಥಾನ ಪಡೆದವು. ನಂತರ ಕಬ್ಬು ಸಿಹಿ ಹಂಚಲಾಯಿತು. ಕೂವೆ ಗ್ರಾಮದ ಬಸ್ ನಿಲ್ದಾಣದಿಂದ ಚರ್ಚ್‍ವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. 

ಜಯಂತಿ ಆಚರಣೆ

ಬಾಳೆಹೊನ್ನೂರು: ಇಲ್ಲಿನ ವಿಜಯಮಾತೆ ದೇವಾಲಯದಲ್ಲಿ ಭಾನುವಾರ ಕ್ರೈಸ್ತರು ಮರಿಯಾ ಮಾತೆ ಜಯಂತಿ ಹಾಗೂ ಹೊಸಕ್ಕಿ ಹಬ್ಬವನ್ನು ಆಚರಿಸಿದರು.

ಹಬ್ಬದ ಅಂಗವಾಗಿ ಮರಿಯಾ ಮಾತೆಗೆ ಭಕ್ತರು ಹೂವನ್ನು ಅರ್ಪಿಸಿದರು. ದೇವಾಲಯದ ಧರ್ಮಗುರು ಲ್ಯಾನ್ಸಿ ಪಿಂಟೊ ಹಾಗೂ ವಿನ್ಸೆಂಟ್ ಭಕ್ತರಿಗೆ ಹಬ್ಬದ ಶುಭಾಶಯ ಕೋರಿ ಆಶೀರ್ವಚನ ಮಾಡಿ ಸಿಹಿ ಹಂಚಿದರು.

ಸಂಜೆ ವೇಳೆ ಸಾಂಸ್ಕೃತಿಕ ಸಂಘ ದಿಂದ ವಿವಿಧ ಮನರಂಜನಾ ಕಾರ್ಯ ಕ್ರಮ ಆಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರತಿಕ್ರಿಯಿಸಿ (+)