ಸೋಮವಾರ, ನವೆಂಬರ್ 18, 2019
23 °C
ಐಎಎಸ್ ಅಧಿಕಾರಿ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ

ಸೆಂಥಿಲ್‌ ಪ್ರಸ್ತಾಪಿಸಿರುವ ವಿಷಯದಿಂದ ಸಂಸತ್‌ಗೆ ಅವಮಾನ: ಸಿ.ಟಿ.ರವಿ

Published:
Updated:
Prajavani

ಮಂಡ್ಯ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಕಾರಣ ನೀಡಿ ಸಸಿಕಾಂತ್‌ ಸೆಂಥಿಲ್‌ ಐಎಎಸ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರೆ ಅದು ಸಂಸತ್‌ ವ್ಯವಸ್ಥೆಗೆ ಅವಮಾನಿಸಿದಂತೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸೋಮವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸೆಂಥಿಲ್‌ ಐಎಎಸ್‌ ಹುದ್ದೆಗೆ ಸೇರಬೇಕು ಅಥವಾ ರಾಜೀನಾಮೆ ನೀಡಬೇಕು ಎಂಬುದು ಅವರದ್ದೇ ಆಯ್ಕೆಯಾಗಿದೆ. ಕಾಶ್ಮೀರ ಸಮಸ್ಯೆ, ಪ್ರಜಾಪ್ರಭುತ್ವದ ವಿಚಾರ ಪ್ರಸ್ತಾಪಿಸಿ ರಾಜೀನಾಮೆ ನೀಡುವುದು ಸರಿಯಲ್ಲ. ಕಾಶ್ಮೀರ ವಿಚಾರದಲ್ಲಿ ಸಂಸತ್‌ ನಿರ್ಣಯ ಕೈಗೊಂಡಿದ್ದು ಅದಕ್ಕೆ ಎಲ್ಲಾ ಸದಸ್ಯರೂ ಸಮ್ಮತಿಸಿದ್ದಾರೆ. ಸೆಂಥಿಲ್‌ ಪಾರ್ಲಿಮೆಂಟ್‌ಗಿಂತಲೂ ದೊಡ್ಡವರಲ್ಲ. ಎಲ್ಲರಿಗೂ ತಮ್ಮ ಭಾವನೆ ವ್ಯಕ್ತಪಡಿಸುವ ಅವಕಾಶವಿದೆ. ಆದರೆ, ಹೀಗೆಯೇ ನಡೆಯಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ’ ಎಂದರು.

ಇದನ್ನೂ ಓದಿ: ಸೆಂಥಿಲ್‌ಗೆ ದೇಶದ್ರೋಹಿ ಪಟ್ಟ ಕಟ್ಟುವ ಸಂಚು: ರಮಾನಾಥ ರೈ

ಕನ್ನಡ ಧ್ವಜ ಇರುತ್ತದೆ: ‘ಇಂದಿನ ನಮ್ಮ ಕನ್ನಡ ಧ್ವಜವನ್ನು 1956ರಲ್ಲಿ ಮೈಸೂರಿನಲ್ಲಿ ರಾಮಮೂರ್ತಿ ಅವರು ಒಂದು ಪಕ್ಷದ ಧ್ವಜವಾಗಿ ಉಪಯೋಗಿಸಿದ್ದರು. ಈಗ ಅದು ಕನ್ನಡ ನಾಡಿನ ಧ್ವಜವಾಗಿದೆ. ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಆದರೆ, ದೇಶಕ್ಕೆ ಒಂದು ಧ್ವಜ ಇರಬೇಕು ಎಂದು ಅಂಬೇಡ್ಕರ್‌ ಅವರೇ ಹೇಳಿದ್ದಾರೆ. ಈ ಸಂಗತಿಗೆ ವಿರುದ್ಧವಾಗಿ ಮಾತನಾಡಿದರೆ ನಾನು ಅಂಬೇಡ್ಕರ್‌ ವಿರೋಧಿ ಆಗುತ್ತೇನೆ. ನಾನು ಅಂಬೇಡ್ಕರ್‌, ಸಂವಿಧಾನದ ವಿರೋಧಿ ಅಲ್ಲ. ಸಂವಿಧಾನದಲ್ಲಿ ಉಲ್ಲೇಖ ಮಾಡಿರುವುದನ್ನೇ ನಾನು ಹೇಳಿದ್ದೇನೆ’ ಎಂದರು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ 

ಸಿ.ಟಿ.ರವಿ–ಪುಟ್ಟರಾಜು ನುಸುವೆ ಮಾತಿನ ಚಕಮಕಿ: ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಸಿ.ಟಿ.ರವಿ ಹಾಗೂ ಶಾಸಕ ಸಿ.ಎಸ್‌.ಪುಟ್ಟರಾಜು ನಡುವೆ ಮಾತಿನ ಚಕಮಕಿ ನಡೆಯಿತು.

ಅಭಿವೃದ್ಧಿ ಕಾರ್ಯಗಳ ಕುಂಠಿತ ಕುರಿತು ಮಾತನಾಡಿದ ಶಾಸಕ ಪುಟ್ಟರಾಜು ‘14 ತಿಂಗಳು ಕೆಲಸ ಮಾಡಲು ನೀವು ಎಲ್ಲಿ ಬಿಟ್ಟಿರಿ ಸ್ವಾಮಿ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿ.ಟಿ.ರವಿ ‘ಕುಣಿಯಲಾರದವಳು ನೆಲ ಡೊಂಕು ಎಂದಂತಾಯಿತು. ಇದು ರಾಜಕೀಯ ವೇದಿಕೆ ಅಲ್ಲ, ರಾಜಕಾರಣ ಮಾಡಬೇಕು ಎಂದರೆ ಮಾಡೋಣ, ಅಂಜಿಕೊಂಡು ಹೋಗುವ ವ್ಯಕ್ತಿ ನಾನಲ್ಲ’ ಎಂದರು. ‘ಅದು ಗೊತ್ತಿದ್ದೇ ಹೇಳಿದ್ದು’ ಎಂದು ಪುಟ್ಟರಾಜು ನಗುತ್ತಾ ಹೇಳಿದರು.

ಇದನ್ನೂ ಓದಿ: ಮರಳು ಮಾಫಿಯಾಕ್ಕೆ ಮೂಗುದಾರ ಹಾಕಿದ್ದ ಸೆಂಥಿಲ್‌

ಪ್ರತಿಕ್ರಿಯಿಸಿ (+)