ಗುರುವಾರ , ನವೆಂಬರ್ 21, 2019
20 °C

ಹಗಲು ಕನಸಿನ ಸುಖದಲ್ಲಿ ಮಾಸ್ಟರ್‌ ಆನಂದ್‌!

Published:
Updated:
Prajavani

2018ರಲ್ಲಿ ‘ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಚಿತ್ರವನ್ನು ತೆರೆಯ ಮೇಲೆ ತಂದಿದ್ದ ನಿರ್ದೇಶಕ ದಿನೇಶ್ ಬಾಬು ಅವರ ಹೊಸ ಸಿನಿಮಾ ‘ಹಗಲು ಕನಸು’. ಇದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಬಗ್ಗೆ ಮಾಹಿತಿ ನೀಡಲು ದಿನೇಶ್ ಅವರು ಚಿಕ್ಕ ಕಾರ್ಯಕ್ರಮ ಆಯೋಜಿಸಿದ್ದರು. ಅವರ ಜೊತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಹಾಜರಿತ್ತು.

ಚಿತ್ರದ ನಾಯಕ ನಟ ಮಾಸ್ಟರ್ ಆನಂದ್. ‘ವೀಕ್ಷಕರು ಈ ಸಿನಿಮಾ ಏಕೆ ನೋಡಬೇಕು’ ಎಂಬ ಪ್ರಶ್ನೆಯನ್ನು ಆನಂದ್‌ ಅವರು ತಮಗೆ ತಾವೇ ಕೇಳಿಕೊಂಡು, ‘ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಇದು. ಒಂದಿಷ್ಟು ಪ್ರಯೋಗಾತ್ಮಕ ಅಂಶಗಳೂ ಇದರಲ್ಲಿ ಇವೆ. ಹಾಗಾಗಿ ಇದನ್ನು ವೀಕ್ಷಿಸಬೇಕು’ ಎನ್ನುತ್ತಾರೆ.

‘ದಿನೇಶ್ ಬಾಬು ಅವರು ತಮ್ಮ ಒಂದು ಸಿನಿಮಾ ಹಿಟ್ ಆದ ತಕ್ಷಣ, ಅದೇ ಮಾದರಿಯ ಇನ್ನೊಂದು ಸಿನಿಮಾ ಮಾಡುವುದಿಲ್ಲ. ಸಂಪೂರ್ಣ ಹೊಸ ಧಾಟಿಯ ಇನ್ನೊಂದು ಸಿನಿಮಾ ಮಾಡುತ್ತಾರೆ. ಅಷ್ಟೇ ಅಲ್ಲ, ನಿರ್ಮಾಪಕರ ಕಿಸೆಗೆ ಹಗುರವಾಗಿರುವ ಸಿನಿಮಾಗಳನ್ನೂ ಮಾಡುತ್ತಾರೆ’ ಎಂಬುದು ಆನಂದ್ ಅವರ ಹೇಳಿಕೆ.

ಈ ಚಿತ್ರದಲ್ಲಿ ಆನಂದ್ ಅವರದ್ದು ವಿಕ್ರಿ ಎನ್ನುವ ಪಾತ್ರ. ವಿಕ್ರಿಗೆ ಆಗಾಗ ಕನಸುಗಳು ಬೀಳುತ್ತಿರುತ್ತವೆ. ಆ ಕನಸಿನಲ್ಲಿ ಆತನಿಗೆ, ಕತ್ತಿನ ಮೇಲೆ ಮಚ್ಚೆ ಇರುವ ಹುಡುಗಿಯೊಬ್ಬಳು ಕಾಣಿಸುತ್ತಿರುತ್ತಾಳೆ. ಒಂದು ದಿನ ಅವನ ಮನೆಗೆ ಒಬ್ಬಳು ಹುಡುಗಿ ಬರುತ್ತಾಳೆ. ಆಕೆಯ ಕತ್ತಿನ ಮೇಲೆ ಕೂಡ ಮಚ್ಚೆ ಇರುತ್ತದೆ. ಇದನ್ನು ಗಮನಿಸಿ ವಿಕ್ರಿ, ಈ ಹುಡುಗಿಯೇ ‘ತನ್ನವಳು’ ಎಂದು ಭಾವಿಸುತ್ತಾನೆ. ‘ಚಿತ್ರವು ಹಾಸ್ಯದಿಂದ ಹಾರರ್‌ ಕಡೆ ಹೊರಳಿಕೊಳ್ಳುವುದೂ ಇದೆ’ ಎನ್ನುತ್ತಾರೆ ಆನಂದ್‌.

ದಿನೇಶ್ ಅವರಂತಹ ಹಿರಿಯ ನಿರ್ದೇಶಕರ ಸಿನಿಮಾ ಇದಾಗಿರುವ ಕಾರಣ, ಯಾವ ತಲೆಬಿಸಿಯೂ ಇಲ್ಲದೆ ಆನಂದ್ ಅವರು ಇದರಲ್ಲಿ ಅಭಿನಯಿಸಿದರು. ‘ನಾಯಕ ನಟ ಹೀರೊಯಿಸಂ ಪ್ರದರ್ಶಿಸಲು ಇದರಲ್ಲಿ ನಾಯಕಿಯರನ್ನು ಬಳಸಿಕೊಂಡಿಲ್ಲ. ನಾಯಕಿ ಕೂಡ ಕಥೆಯ ಹರಿವಿನ ಜೊತೆ ಸಾಗುತ್ತಾಳೆ’ ಎಂದರು ಆನಂದ್.

‘ನನ್ನ ಪಾತ್ರ ಈ ಚಿತ್ರದಲ್ಲಿ ಏನು ಎಂಬುದನ್ನು ಹೇಳಿದರೆ ನಿಮಗೆ ಗೊತ್ತಾಗುವುದಿಲ್ಲ. ಸಿನಿಮಾ ನೋಡಿ. ನಾನು ಜೀವನದಲ್ಲಿ ಇದುವರೆಗೆ ಇಂತಹ ಪಾತ್ರ ಮಾಡಿಲ್ಲ’ ಎಂದರು ನಟ ಮನದೀಪ್‌ ರಾಯ್. ದಿನೇಶ್ ಬಾಬು ಅವರು ಎಂದಿನ ಶೈಲಿನಲ್ಲಿ, ‘ನಾನು ಏನೂ ಮಾತನಾಡುವುದಿಲ್ಲ, ಮಾತನಾಡಲು ಏನೂ ಇಲ್ಲ’ ಎಂದು ಮೈಕ್‌ ಕೆಳಗಿಟ್ಟರು! ಕಾರ್ತಿಕ್ ವೆಂಕಟೇಶ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)