ಶನಿವಾರ, ನವೆಂಬರ್ 23, 2019
17 °C
ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯ ವಿನ್ಯಾಸ

ಕಾರ್ಡಿಫ್‌ ವಿ.ವಿ. ಅಧ್ಯಯನ ವರದಿಗಳ ಪ್ರದರ್ಶನ

Published:
Updated:

ಮಂಗಳೂರು: ಬ್ರಿಟನ್‌ನ ಕಾರ್ಡಿಫ್‌ ವಿಶ್ವವಿದ್ಯಾಲಯದ ವೆಲ್ಷ್‌ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ನ (ಡಬ್ಲ್ಯುಎಸ್‌ಎ) ತಜ್ಞರು ದೆಹಲಿಯ ಸ್ಕೂಲ್‌ ಆಫ್‌ ಪ್ಲಾನಿಂಗ್‌ ಅಂಡ್‌ ಆರ್ಕಿಟೆಕ್ಚರ್‌ನ ಸಹಯೋಗದೊಂದಿಗೆ ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ ತಯಾರಿ ಕುರಿತು ಅಧ್ಯಯನ ನಡೆಸಿದ್ದಾರೆ. ಅಧ್ಯಯನದ ವರದಿಗಳ ಪ್ರದರ್ಶನ ಮಂಗಳವಾರ ಮತ್ತು ಬುಧವಾರ ನಡೆಯಲಿದೆ.

ನಗರದ ಪುರಭವನದ ಮಿನಿ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಪ್ರದರ್ಶನ ಉದ್ಘಾಟನೆಯಾಗಲಿದೆ. ಬುಧವಾರ ಬೆಳಿಗ್ಗೆ 10ರಿಂದ ಸಂಜೆ 6ರವರೆಗೂ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶವಿರುತ್ತದೆ.

ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಬ್ಲ್ಯುಎಸ್‌ಎ ಪ್ರಾಧ್ಯಾಪಕ ಡಾ.ಶಿಬು ರಾಮನ್‌, ‘ಮಂಗಳೂರು ನಗರದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಸುಗಮ ಸಂಚಾರ ವ್ಯವಸ್ಥೆ ರೂಪಿಸುವ ಕುರಿತು ನಾವು ಅಧ್ಯಯನ ನಡೆಸಿದ್ದೇವೆ. ವಾಹನ ಸಂಚಾರ ಕೇಂದ್ರಿತ ಅಭಿವೃದ್ಧಿಗಿಂತಲೂ ಮನುಷ್ಯ ಕೇಂದ್ರಿತ ಅಭಿವೃದ್ಧಿಯ ಕಾರ್ಯತಂತ್ರವನ್ನು ಸಿದ್ಧಪಡಿಸಿದ್ದೇವೆ’ ಎಂದರು.

‘ಸ್ಮಾರ್ಟ್‌ ಸಿಟಿ ಯೋಜನೆಗೆ ಸಲಹೆಗಾರರನ್ನು ಕಳುಹಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಕಾರ್ಡಿಫ್‌ ನಗರ ಆಡಳಿತ ಸಂಸ್ಥೆಯನ್ನು ಕೋರಿತ್ತು. ಅಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ ನೀಡಿದ ಸೂಚನೆಯಂತೆ ನಾನು ಇಲ್ಲಿಗೆ ಸಲಹೆಗಾರನಾಗಿ ಬಂದಿದ್ದೆ. ನಂತರ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳೂ ಇಲ್ಲಿಗೆ ಬಂದರು. ಒಟ್ಟಾಗಿ ಅಧ್ಯಯನ ನಡೆಸಿದ್ದೇವೆ’ ಎಂದು ತಿಳಿಸಿದರು.

ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ, ಪ್ರವಾಹ ನಿಯಂತ್ರಣ, ಕುಡಿಯುವ ನೀರು ಪೂರೈಕೆಯಲ್ಲಿ ಸುಧಾರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಅಧ್ಯಯನ ನಡೆಸಲಾಗಿದೆ. ಕಡಿಮೆ ಜನಸಂಖ್ಯೆ ಹೊಂದಿರುವ ಮಂಗಳೂರು ನಗರವನ್ನು ಒಂದು ಅತ್ಯುತ್ತಮ ನಗರವನ್ನಾಗಿ ಅಭಿವೃದ್ಧಿಪಡಿಸಲು ಎಲ್ಲ ಅವಕಾಶಗಳೂ ಇವೆ ಎಂದರು.

ಈ ನಗರದ ಸುತ್ತ ಹೆಚ್ಚು ಉದ್ದನೆಯ ಜಲಪ್ರದೇಶ ಇದೆ. ಅದಕ್ಕೆ ಸರಿಯಾದ ಸಂಪರ್ಕಗಳಿಲ್ಲ. ಈ ವಿಷಯದಲ್ಲಿ ಕೆಲವು ಮಹತ್ವದ ತೀರ್ಮಾನಗಳ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರ ಪ್ರವೇಶಕ್ಕೆ ಇರುವ ಮಿತಿಗಳನ್ನು ಸಡಿಲಗೊಳಿಸುವ ಅಗತ್ಯವೂ ಇದೆ. ನಗರದ ಆರ್ಥಿಕತೆಯನ್ನು ಬಹು ಆಯಾಮಗಳಲ್ಲಿ ಅಭಿವೃದ್ಧಿಪಡಿಸಬೇಕಿದೆ ಎಂದು ಹೇಳಿದರು.

ದೆಹಲಿಯ ಸ್ಕೂಲ್‌ ಆಫ್‌ ಪ್ಲಾನಿಂಗ್‌ ಅಂಡ್‌ ಆರ್ಕಿಟೆಕ್ಚರ್‌ನ ಪ್ರಾಧ್ಯಾಪಕ ಪ್ರೊ.ಅರುಣಾವ ದಾಸ್‌ಗುಪ್ತ ಮಾತನಾಡಿ, ‘ನಗರದ ಒಳಗಿನ ಪ್ರದೇಶಗಳು ಮತ್ತು ಹೊರವಲಯದ ಪ್ರದೇಶಗಳ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಬೇಕಿದೆ. ಜನರ ಜೀವನಮಟ್ಟ ಸುಧಾರಣೆ ಕಡೆಗೂ ಆದ್ಯತೆ ನೀಡಬೇಕಿದೆ’ ಎಂದು ಸಲಹೆ ನೀಡಿದರು.

ಈಗಾಗಲೇ ಮೊದಲ ಹಂತದ ಅಧ್ಯಯನ ಪೂರ್ಣಗೊಂಡಿದೆ. ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್‌ ಮಾತನಾಡಿ, ‘ಅಧ್ಯಯನ ವರದಿಗಳ ಪ್ರದರ್ಶನ ನಡೆಯಲಿದೆ. ಕಾರ್ಡಿಫ್‌ ತಜ್ಞರು ಮತ್ತು ದೆಹಲಿಯ ನಗರ ಯೋಜನಾ ತಜ್ಞರ ಸೇವೆ ಪಡೆಯುವ ಕುರಿತು ಸ್ಮಾರ್ಟ್‌ ಸಿಟಿ ಆಡಳಿತ ಮಂಡಳಿ ತೀರ್ಮಾನಕ್ಕೆ ಬರಲಿದೆ’ ಎಂದು ತಿಳಿಸಿದರು.

ಸ್ಮಾರ್ಟ್‌ ಸಿಟಿ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕ ಡಿ.ಬಿ.ಮೆಹ್ತಾ, ಕ್ರೆಡಾಯ್‌ ಕಾರ್ಯದರ್ಶಿ ವಿನೋದ್‌ ಪಿಂಟೊ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)