ಬುಧವಾರ, ನವೆಂಬರ್ 13, 2019
23 °C
ಗಮನ ಸೆಳೆದ ನಾಗ್ಪುರ ಪೊಲೀಸರ ಟ್ವೀಟ್‌

ಸಿಗ್ನಲ್‌ ಬ್ರೇಕ್‌ ಮಾಡಿದ್ದಕ್ಕೆ ದಂಡ ವಿಧಿಸಲ್ಲ, ಪ್ರತಿಕ್ರಿಯಿಸು ‘ವಿಕ್ರಮ್‘

Published:
Updated:

ಬೆಂಗಳೂರು: ಚಂದ್ರನ ನೆಲಕ್ಕೆ ರಭಸದಿಂದ ಕುಸಿದ ಚಂದ್ರಯಾನ–2ರ ಲ್ಯಾಂಡರ್‌ ‘ವಿಕ್ರಮ್‌’ ಜತೆಗೆ ಇನ್ನೆಂದಿಗೂ ಸಂಪರ್ಕ ಸಾಧ್ಯವಾಗದು ಎಂದು ಇಸ್ರೊ ಹೇಳಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಜನ ‘ಲ್ಯಾಂಡರ್‌ ಸಿಗ್ನಲ್‌ ಕಳುಹಿಸು‘ ಎಂದು ಮನವಿ ಮಾಡಿದ್ದಾರೆ.

ISROSpirit ಎಂಬ ಹ್ಯಾಷ್‌ಟ್ಯಾಗ್‌ ಸದ್ಯ ಟ್ವಿಟ್ಟರ್‌ ಟ್ರೆಂಡಿಂಗ್‌ನಲ್ಲಿದೆ. ಇಸ್ರೊಗೆ ಬೆಂಬಲ ಸೂಚಿಸಿ, ಹೆಮ್ಮೆಯ ಮಾತುಗಳನ್ನಾಡಿ ಈ ಟ್ಯಾಗ್‌ನಲ್ಲಿ ಅನೇಕರು ಟ್ವೀಟ್‌ ಮಾಡಿದ್ದಾರೆ. ಇದರಲ್ಲಿ ನಾಗ್ಪುರ ಸಿಟಿ ಪೊಲೀಸರು ಮಾಡಿರುವ ಟ್ವೀಟ್‌ ಎಲ್ಲರ ಗಮನ ಸೆಳೆದಿದೆ.

ಇದನ್ನು ಓದಿ:  ಲೋಪ ಏನೆಂದು ತಿಳಿದಿಲ್ಲ, ‘ವಿಕ್ರಮ್‌’ ಚೇತರಿಕೆ ಅಸಾಧ್ಯ

‘ಡಿಯರ್ ವಿಕ್ರಮ್ ದಯವಿಟ್ಟು ಪ್ರತಿಕ್ರಿಯಿಸು. ಸಿಗ್ನಲ್ ಉಲ್ಲಂಘನೆ ಮಾಡಿರುವುದಕ್ಕೆ ನಾವೇನು ನಿನಗೆ ದಂಡ ವಿಧಿಸುವುದಿಲ್ಲ!’ ಎಂಬ ಟ್ವೀಟ್‌ ಅದಾಗಿದೆ. ನಾಗ್ಪುರ ಸಿಟಿ ಪೊಲೀಸರ ಟ್ವಿಟ್ಟರ್‌ ಖಾತೆಯಲ್ಲಿರುವ ಈ ಟ್ವೀಟ್‌ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು, ಅನೇಕರು ಪೊಲೀಸ್‌ ಕೆಲಸ ಮಾಡುವುದನ್ನು ಬಿಟ್ಟು ಮಹತ್ವದ ಯೋಜನೆ ಬಗ್ಗೆ ಲಘುವಾಗಿ ಮಾತನಾಡಿರುವುದಕ್ಕೆ ಕಟುವಾಗಿ ಟೀಕಿಸಿದ್ದಾರೆ. 

ಮೋಟಾರ್‌ ವಾಹನ ಕಾಯ್ದೆ ತಿದ್ದುಪಡಿ ನಂತರ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ಭಾರಿ ದಂಡ ವಿಧಿಸುವ ಪ್ರಕ್ರಿಯೆ ಈಗ ಎಲ್ಲೆಡೆ ಸದ್ದು ಮಾಡುತ್ತಿರುವುದರಿಂದ ಈ ಟ್ವೀಟ್‌ ಗಮನ ಸೆಳೆದಿದೆ. 

‘ಚಂದ್ರಯಾನ 2 ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ನೀವು ದಂಡ ವಿಧಿಸುವ ಪ್ರಮೇಯ ಬರುವುದಿಲ್ಲ. ಇದನ್ನು ಪುಸ್ತಕ ಇಟ್ಟುಕೊಂಡಿದ್ದಕ್ಕೆ ಜನರನ್ನು ಬಂಧಿಸಿದಂತೆ ಎಂದು ತಿಳಿದಿದ್ದೀರಾ, ನಿಮ್ಮ ಜವಾಬ್ದಾರಿಯನ್ನು ಅರಿತು ಮಾತನಾಡಿ’ ಎಂದು ವ್ಯಕ್ತಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

‘ಇದು ಬೆಂಗಳೂರು ಪೊಲೀಸರಿಗೆ ಸಂಬಂಧಿಸಿದ ಪ್ರಕರಣ’ ಎಂದು ಸಾಗರ್‌ ಎನ್ನುವವರು ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಈ ಟ್ವೀಟ್‌ ಅನ್ನು 16 ಸಾವಿರ ಮಂದಿ ಮರುಟ್ವೀಟ್‌ ಮಾಡಿಕೊಂಡಿದ್ದು, 57 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ. 

 

ಪ್ರತಿಕ್ರಿಯಿಸಿ (+)