ಮಂಗಳವಾರ, ನವೆಂಬರ್ 12, 2019
28 °C

ಅಜಯ್‌ ರಾವ್: ಕೃಷ್ಣ ಈಗ ಶೋಕಿವಾಲ

Published:
Updated:
Prajavani

ನಟ ಅಜಯ್‌ ರಾವ್‌ ಮತ್ತು ಸಂಜನಾ ಆನಂದ್‌ ಮುಖ್ಯ ಭೂಮಿಕೆಯಲ್ಲಿರುವ ಹೊಸ ಸಿನಿಮಾದ ಟೈಟಲ್ 'ಶೋಕಿವಾಲ'.

‘ತಾಯಿಗೆ ತಕ್ಕ ಮಗ’  ಸಿನಿಮಾ ನಂತರ ನಟನೆಯಿಂದ ಬಿಡುವು ಪಡೆದಿದ್ದ ಅಜಯ್‌ ರಾವ್‌, ‘ಕೃಷ್ಣ ಟಾಕೀಸ್‌’ ಬಹುತೇಕ ಮುಗಿಸಿದ್ದಾರೆ. ಸದ್ಯ ಶೋಕಿವಾಲದಲ್ಲಿ ಅವರು ಪಕ್ಕಾ ಹಳ್ಳಿ ಹೈದನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ಸಂಜನಾ ಆನಂದ್‌ ಅವರದ್ದೂ ಹಳ್ಳಿ ಹುಡುಗಿಯ ಪಾತ್ರ.

ಪ್ರೇಮಿಸಿ ಮದುವೆಯಾಗುವ ಆಸೆ ಇಟ್ಟುಕೊಂಡು ಕಂಡಕಂಡ ಹುಡುಗಿಯರಿಗೆ ಕಾಳುಹಾಕುವ ಹೈದ ಈ ಶೋಕಿವಾಲ. ಈ ಹೈದನ ಆಸೆ ಈಡೇರುತ್ತದೆಯೇ, ನಾಯಕಿ ಈ ಶೋಕಿವಾಲನ ಕಾಳಿಗೆ ಮರುಳಾಗುತ್ತಾಳಾ ಎನ್ನುವುದು ಚಿತ್ರದ ಕುತೂಹಲವಂತೆ.

ಲಕ್ಕಿ, ಸಂತು ಸ್ಟ್ರೈಟ್‌ ಫಾರ್ವರ್ಡ್‌, ಕೆಜಿಎಫ್‌ ಸಿನಿಮಾಗಳಿಗೆ ಸಹ
ನಿರ್ದೇಶಕನಾಗಿದ್ದ ಜಾಕಿ ತಿಮ್ಮೇಗೌಡ 'ಶೋಕಿವಾಲ'ನಿಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಈಗಾಗಲೇ ಶೇ 75ರಷ್ಟು ಚಿತ್ರೀಕರಣ ಮುಗಿಸಲಾಗಿದೆ. ಒಂದು ಹಾಡು, ಒಂದು ಫೈಟ್ ದೃಶ್ಯ ಹಾಗೂ ಸಂಭಾಷಣೆಯ ಭಾಗ ಬಾಕಿ ಇದೆ. ಈಗಾಗಲೇ 35 ದಿನ ಚಿತ್ರೀಕರಣ ನಡೆದಿದ್ದು, ಇನ್ನೂ ಅಷ್ಟೇ ದಿನಗಳ ಚಿತ್ರೀಕರಣ ಬಾಕಿ ಇದೆ. ಕಡಿತ ಮಾಡಲು ಯೋಚಿಸುತ್ತಿದ್ದೇವೆ ಎನ್ನುತ್ತಾರೆ ಜಾಕಿ.

ಅಯೋಗ್ಯ, ಕಿರಾತಕ , ಅಧ್ಯಕ್ಷ ಸಿನಿಮಾಗಳಂತೇ ಇದು ಕೂಡ ಪಕ್ಕಾ ಕೌಟುಂಬಿಕ ಮನರಂಜನೆಯ ಚಿತ್ರವಾಗಲಿದೆ. ಅಜಯ್ ರಾವ್ ಮೊದಲ ಬಾರಿಗೆ ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ಅವರ ವೃತ್ತಿ ಬದುಕಿನಲ್ಲಿ ಒಂದು ಮೈಲುಗಲ್ಲಾಗಲಿದೆ. ಚಿತ್ರದಲ್ಲಿ ಐದು ಹಾಡು, ನಾಲ್ಕು ಫೈಟು ಒಂದಿಷ್ಟು ಕಾಮಿಡಿ ಇರಲಿದ್ದು, ಫುಲ್ ಪ್ಯಾಕ್ ಮನರಂಜನೆ ನೀಡಲಿದೆ ಎನ್ನುವುದು ನಿರ್ದೇಶಕ ಜಾಕಿ ಅವರ ವಿಶ್ವಾಸದ ಮಾತು.

ಈ ಚಿತ್ರಕ್ಕೆ ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಡಿ ಟಿ.ಆರ್‌.ಚಂದ್ರಶೇಖರ್‌ ಬಂಡವಾಳ ಹಾಕಿದ್ದಾರೆ.

ಪ್ರಶಾಂತ್‌ ರಾಜಪ್ಪ ಸಂಭಾಷಣೆ, ಶ್ರೀಧರ್ ವಿ.ಸಂಭ್ರಮ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಎಸ್. ಛಾಯಾಗ್ರಹಣ ಅವರದ್ದು. ‘ಭರ್ಜರಿ’ ಸಿನಿಮಾದ ಚೇತನ್‌ ಮತ್ತು ಜಯಂತ್‌ ಕಾಯ್ಕಿಣಿ, ಗೌಸ್‌ ಪೀರ್ ಅವರ ಸಾಹಿತ್ಯ ಈ ಚಿತ್ರಕ್ಕೆ ಇದೆ. ಸಂಕಲನ ಕೆ.ಎಂ.ಪ್ರಕಾಶ್‌, ನೃತ್ಯ ಸಂಯೋಜನೆ ಮೋಹನ್‌, ಸಾಹಸ ವಿಕ್ರಮ್‌ ಮೋರ್‌ ಅವರದ್ದು.

ತಾರಾಗಣದಲ್ಲಿ ಮುನಿರಾಜ್, ತಬಲ ನಾಣಿ, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಗಿರಿ, ಅರುಣ ಬಾಲರಾಜ್, ಕಾಮಿಡಿ ಕಿಲಾಡಿಯ ವಾಣಿ ಇದ್ದಾರೆ.

ಎಸ್.ಅಭಿ ಹಾಗೂ ಅರುಣ್ ಕುಮಾರ್ ಸಹ ನಿರ್ದೇಶನದ ಹೊಣೆ ಹೊತ್ತಿದ್ದಾರೆ. 

ಪ್ರತಿಕ್ರಿಯಿಸಿ (+)