ಬುಧವಾರ, ನವೆಂಬರ್ 13, 2019
17 °C

ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶ: ಸಿ.ಟಿ.ರವಿ ಪ್ರಶ್ನೆ

Published:
Updated:

ಮೈಸೂರು: ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶ ಆಗಬೇಕು ಎಂಬುದನ್ನು ಈ ಸಮುದಾಯದವರೇ ತೀರ್ಮಾನ ಮಾಡಿಕೊಳ್ಳಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಬುಧವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಂತವೇರಿ ಗೋಪಾಲಗೌಡ, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂಥ ಮಹನೀಯರು ಆದರ್ಶರಾಗಬೇಕೋ ಅಥವಾ ಇನ್ಯಾರೋ ಆದರ್ಶರಾಗಬೇಕಾ ಎಂಬುದನ್ನು ಒಕ್ಕಲಿಗ ಸಮುದಾಯದವರು ಯೋಚನೆ ಮಾಡಲಿ’ ಎಂದು ಡಿ.ಕೆ.ಶಿವಕುಮಾರ್‌ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿರುವವರಿಗೆ ಮಾರ್ಮಿಕವಾಗಿ ತಿರುಗೇಟು ನೀಡಿದರು.

‘ಸತ್ಯವಂತರಿಗೆ ಇದು ಕಾಲವಲ್ಲ. ಕೆಲ ಸಂದರ್ಭಗಳಲ್ಲಿ ಸತ್ಯ ಹೇಳಿದರೆ ಅದು ಅಪಥ್ಯವಾಗುತ್ತದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು, ಉಪ್ಪು ತಿಂದವರು ನೀರು ಕುಡಿಯಬೇಕು. ಅದರಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಎಂಬುದು ಇಲ್ಲ’ ಎಂದು ತಿಳಿಸಿದರು.

‘ಜಾರಿ ನಿರ್ದೇಶನಾಲಯಕ್ಕೆ ಯಾವ ಜಾತಿ ಇದೆ, ಯಾವ ಪಕ್ಷಕ್ಕೆ ಸೇರಿದೆ. ಈ ಸಂಸ್ಥೆಯನ್ನು ಹುಟ್ಟುಹಾಕಿದವರು ಯಾರು, ತನಿಖೆ ಮಾಡುವುದು ತಪ್ಪು ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

ಹೊಸ ನಿಯಮದಿಂದಾಗಿ ಸಂಚಾರ ಪೊಲೀಸರು ಭಾರಿ ದಂಡ ವಸೂಲಿ ಮಾಡುತ್ತಿರುವ ಕುರಿತು, ‘ತಪ್ಪು ಮಾಡದವರಿಗೆ ದಂಡದ ಪ್ರಶ್ನೆಯೇ ಬರುವುದಿಲ್ಲ. ನಾನೂ ಈ ಮೊದಲು ಸೀಟ್ ಬೆಲ್ಟ್ ಹಾಕಿಕೊಳ್ಳುತ್ತಿರಲಿಲ್ಲ. ದಂಡ ಹೆಚ್ಚಾದ ಮೇಲೆ ಕಡ್ಡಾಯವಾಗಿ ಹಾಕುತ್ತಿದ್ದೇನೆ. ತಪ್ಪು ಮಾಡಿದರೆ ಮೊದಲು ನನ್ನಂಥವರಿಗೆ ದಂಡ ಹಾಕಬೇಕು. ಅದು ಮಂತ್ರಿ ಆಗಿರಬಹುದು, ಮುಖ್ಯಮಂತ್ರಿ ಇರಬಹುದು’ ಎಂದರು.

‘ಖಂಡಿತ ರಸ್ತೆ ದುರಸ್ತಿ ಮಾಡಬೇಕು. ಆದರೆ, ಈ ಬಗ್ಗೆ ದನಿ ಎತ್ತಿರುವವರು ಮೊದಲು ದೇಶದಲ್ಲಿ ಎಷ್ಟು ಜನ ತೆರಿಗೆ ಪಾವತಿಸುತ್ತಿದ್ದಾರೆ ಎಂಬುದರತ್ತ ಗಮನಹರಿಸಲಿ. ಅಮೆರಿಕದಲ್ಲಿ ಶೇ 97ರಷ್ಟು ಮಂದಿ ತೆರಿಗೆ ಪಾವತಿಸುತ್ತಾರೆ. ನಮ್ಮಲ್ಲಿ ತೆರಿಗೆ ಕದಿಯುವುದು ಹೇಗೆ ಎಂದು ಮಾರ್ಗ ಹುಡುಕುತ್ತಾರೆ. ಆದರೂ ಅಮೆರಿಕದಂತಹ ರಸ್ತೆಗಳನ್ನು ಬಯಸುತ್ತಾರೆ. ಮನಸ್ಥಿತಿ ಬದಲಾಗದ ಹೊರತು ಪರಿಸ್ಥಿತಿ ಬದಲಾಗದು’ ಎಂದು ನುಡಿದರು.

ಪ್ರತಿಕ್ರಿಯಿಸಿ (+)