ಶುಕ್ರವಾರ, ನವೆಂಬರ್ 22, 2019
26 °C
ಆ್ಯಷಸ್ ಟೆ‌ಸ್ಟ್: ಆತಿಥೇಯರಿಗೆ ಸ್ಟೀವ್ ಸ್ಮಿತ್ ಭಯ 18 ವರ್ಷಗಳ ನಂತರ ಇಂಗ್ಲೆಂಡ್‌ ನೆಲದಲ್ಲಿ ಜಯಿಸುವ ಅವಕಾಶ

ಸರಣಿ ಗೆಲುವಿನ ಮೇಲೆ ಆಸ್ಟ್ರೇಲಿಯಾ ಒಲವು

Published:
Updated:
Prajavani

ಲಂಡನ್ : ಹದಿನೆಂಟು ವರ್ಷಗಳ ನಂತರ ಇಂಗ್ಲೆಂಡ್‌ ನೆಲದಲ್ಲಿ ಆ್ಯಷಸ್ ಟೆಸ್ಟ್ ಸರಣಿ ಜಯಿಸುವ ಕನಸು ಕೈಗೂಡುವ ವಿಶ್ವಾಸದಲ್ಲಿ ಆಸ್ಟ್ರೇಲಿಯಾ ಇದೆ. ಅದಕ್ಕಾಗಿಯೇ ಟಿಮ್ ಪೇನ್ ನಾಯಕತ್ವದ ತಂಡವು ಒವಲ್ ಕ್ರೀಡಾಂಗಣಕ್ಕೆ ಬಂದಿಳಿದಿದೆ.

ಗುರುವಾರ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಆ್ಯಷಸ್ ಸರಣಿಯ ಐದನೇ ಪಂದ್ಯದಲ್ಲಿ ಗೆದ್ದರೆ ಆಸ್ಟ್ರೇಲಿಯಾ ಕನಸು ನನಸಾಗಲಿದೆ. ಸ್ಟೀವನ್ ಸ್ಮಿತ್ ಅಬ್ಬರದ ಬ್ಯಾಟಿಂಗ್ ಬಲದಿಂದಾಗಿ ತಂಡವು ಈಗಾಗಲೇ ಸರಣಿಯಲ್ಲಿ 2–1ರಿಂದ ಮುನ್ನಡೆ ಸಾಧಿಸಿದೆ. ಟಿಮ್ ಪೇನ್ ಬಳಗವು ಮೊದಲ ಮತ್ತು ನಾಲ್ಕನೇ ಟೆಸ್ಟ್ ಗೆದ್ದಿತ್ತು.  ಎರಡನೇ ಟೆಸ್ಟ್‌ ಡ್ರಾ ಆಗಿತ್ತು. ಮೂರನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್‌ ‘ಅದ್ಭುತ’ ಆಟದಿಂದಾಗಿ ಇಂಗ್ಲೆಂಡ್‌ ಗೆದ್ದಿತ್ತು.

ಆದರೆ, ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಆಟ ನಡೆಯಲಿಲ್ಲ. ಸ್ಮಿತ್ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದರು. ವೇಗಿ ಪ್ಯಾಟ್ ಕಮಿನ್ಸ್‌ ಎಸೆತಗಳಿಗೆ ಜೂ ರೂಟ್ ಬಳಗವು ಸೋಲಿನ ಹಾದಿ ಹಿಡಿದಿತ್ತು. ಅದರಿಂದಾಗಿ ಸರಣಿ ಗೆಲುವಿನ ಅವಕಾಶ ಕಳೆದುಕೊಂಡಿತು. ಈಗ ಈ ಪಂದ್ಯ ಜಯಿಸಿ ಸರಣಿ ಸಮ ಮಾಡಿಕೊಳ್ಳಲು ಪ್ರಯತ್ನಿಸುವುದೊಂದೇ ಆತಿಥೇಯರಿಗೆ ಇರುವ ದಾರಿ.

2001ರಲ್ಲಿ ಆಸ್ಟ್ರೇಲಿಯಾ ತಂಡವು ಇಲ್ಲಿ ಆ್ಯಷಸ್ ಟ್ರೋಫಿ ಜಯಿಸಿತ್ತು. ಅದರ ನಂತರ ಇಲ್ಲಿಯವರೆಗೆ ಜಯಿಸಿಲ್ಲ. ಆದ್ದರಿಂದ ಈಗ ದಾಖಲೆ ನಿರ್ಮಿಸುವ ಅವಕಾಶ ‘ಆಕಸ್ಮಿಕ ನಾಯಕ’ ಎಂದೇ ಬಣ್ಣಿಸಲಾಗಿರುವ ಟಿಮ್‌ ಪೇನ್ ಅವರಿಗೆ ಲಭಿಸಿದೆ.

ಹೋದ ವರ್ಷ; ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿಕೊಂಡು ನಿಷೇಧ ಶಿಕ್ಷೆ ಅನುಭವಿಸಿದ್ದ ಸ್ಟೀವನ್ ಸ್ಮಿತ್ ಅವರು ತಂಡದಿಂದ ಹೊರಗುಳಿದಿದ್ದರು. ಆಗ ತೆರವಾದ ನಾಯಕನ ಸ್ಥಾನಕ್ಕೆ ಪೇನ್ ಆಯ್ಕೆಯಾಗಿದ್ದರು.

ಆದರೆ ಈ ಸಲ ಒಂದೊಮ್ಮೆ ಆಸ್ಟ್ರೇಲಿಯಾ ಕಪ್ ಗೆದ್ದರೆ ಅದರ ಸಂಪೂರ್ಣ ಶ್ರೇಯ ಸ್ಮಿತ್‌ ಅವರಿಗೆ ಸೇರುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಮೊದಲ ಪಂದ್ಯದಲ್ಲಿ ಅವರು ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಹೊಡೆದು ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು. ಮೂರನೇ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರಿಂದ ಆಡಿರಲಿಲ್ಲ. ಈ ಸರಣಿಯಲ್ಲಿ ಅವರು ಆರನೂರಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ.

ಬೇರೆ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ಬೌಲರ್‌ಗಳನ್ನು ಎದುರಿಸುವಲ್ಲಿ ತಡಬಡಾಯಿಸುತ್ತಿದ್ದಾರೆ. ಆದರೆ ಸ್ಮಿತ್ ಅವರ ಆತ್ಮವಿಶ್ವಾಸದ ಆಟಕ್ಕೆ ಕಡಿವಾಣ ಹಾಕಲು ಆತಿಥೇಯ ವೇಗಿಗಳು ಪರದಾಡುತ್ತಿದ್ದಾರೆ. ಆದ್ದರಿಂದ ಕೊನೆಯ ಪಂದ್ಯದಲ್ಲಿ ಸ್ಮಿತ್ ಅವರನ್ನು ಕಟ್ಟಿಹಾಕಲು ರೂಟ್ ಬಳಗವು ವಿಶೇಷ ಯೋಜನೆ ರೂಪಿಸುವುದು ಅನಿವಾರ್ಯ. ಬ್ಯಾಟಿಂಗ್‌ನಲ್ಲಿಯೂ ದೊಡ್ಡ ಇನಿಂಗ್ಸ್‌ ಆಡುವತ್ತ ಆತಿಥೇಯ ಆರಂಭಿಕ ಜೋಡಿ ಸಫಲವಾಗುತ್ತಿಲ್ಲ. ನಾಯಕ ರೂಡ್, ಜೇಸನ್ ರಾಯ್, ಬಟ್ಲರ್  ಮತ್ತು ಬೆನ್ ಸ್ಟೋಕ್ಸ್‌ ಉತ್ತಮ ಲಯದಲ್ಲಿದ್ದಾರೆ.

ಆಸ್ಟ್ರೇಲಿಯಾ ತಂಡದಲ್ಲಿಯೂ ಡೇವಿಡ್ ವಾರ್ನರ್ ಸತತ ವೈಫಲ್ಯ ಅನುಭವಿಸಿದ್ದಾರೆ. ಉಸ್ಮಾನ್ ಖ್ವಾಜಾ, ಪೇನ್, ಟ್ರಾವಿಸ್ ಹೆಡ್ ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ. ಬೌಲಿಂಗ್‌ನಲ್ಲಿ ಪ್ಯಾಟ್ ಕಮಿನ್ಸ್‌, ನೇತನ್ ಲಯನ್, ಜೋಷ್ ಹೇಜಲ್‌ವುಡ್ ಉತ್ತಮ ಲಯದಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ತಂಡಗಳು

ಇಂಗ್ಲೆಂಡ್: ಜೋ ರೂಟ್ (ನಾಯಕ), ಜೇಸನ್ ರಾಯ್, ಬೆನ್ ಸ್ಟೋಕ್ಸ್‌, ಸ್ಯಾಮ್ ಕರನ್, ಕ್ರಿಸ್ ವೋಕ್ಸ್‌, ರೋರಿ ಬರ್ನ್ಸ್‌, ಜ್ಯಾಕ್ ಲೀಚ್, ಜೋ ಡೆನ್ಲಿ, ಜೋಫ್ರಾ ಆರ್ಚರ್, ಕ್ರೇಗ್ ಓವರ್ಟನ್, ಜಾನಿ ಬೆಸ್ಟೊ, ಜೋಸ್ ಬಟ್ಲರ್, ಸ್ಟುವರ್ಟ್ ಬ್ರಾಡ್,

ಆಸ್ಟ್ರೇಲಿಯಾ: ಟಿಮ್ ಪೇನ್ (ನಾಯಕ), ಮ್ಯಾಥ್ಯೂ ವೇಡ್ (ವಿಕೆಟ್‌ಕೀಪರ್), ಮಾರ್ಕಸ್ ಹ್ಯಾರಿಸ್, ಸ್ಟೀವನ್ ಸ್ಮಿತ್, ಉಸ್ಮಾನ್ ಖ್ವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲಾಬುಷೇನ್, ಮೈಕೆಲ್ ನೆಸೆರ್, ಕೆಮರೂನ್ ಬ್ಯಾಂಕ್ರಾಫ್ಟ್‌, ಟ್ರಾವಿಸ್ ಹೆಡ್, ಪ್ಯಾಟ್ ಕಮಿನ್ಸ್‌, ನೇಥನ್ ಲಯನ್, ಪೀಟರ್ ಸಿಡ್ಲ್, ಜೋಷ್ ಹೇಜಲ್‌ವುಡ್, ಜೇಮ್ಸ್ ಪ್ಯಾಟಿನ್ಸನ್, ಮಿಷೆಲ್ ಸ್ಟಾರ್ಕ್.

ಪಂದ್ಯ ಆರಂಭ: ಮಧ್ಯಾಹ್ನ 3.30

 

ಪ್ರತಿಕ್ರಿಯಿಸಿ (+)