ಮಂಗಳವಾರ, ನವೆಂಬರ್ 19, 2019
27 °C
ನೂತನ ಕಚೇರಿಗೆ ಚಾಲನೆ; ಅಂಬರೀಷ್‌ ಅವರಿಗೆ ಸಿಕ್ಕಿದ ಕೊಠಡಿಯಲ್ಲೇ ಕಾರ್ಯ

ರಾಜಕೀಯ ತೋಜೋವಧೆಗೆ ಸಂಚು: ಸುಮಲತಾ

Published:
Updated:
Prajavani

ಮಂಡ್ಯ: ‘ರಾಜಕೀಯವಾಗಿ ತೇಜೋವಧೆ ಮಾಡಲು ಕೆಲವರು ಸಂಚು ರೂಪಿಸುತ್ತಿದ್ದಾರೆ. ನನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಹೆಸರಿಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ’ ಎಂದು ಸಂಸದೆ ಎ.ಸುಮಲತಾ ಆರೋಪಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಸದಸ್ಯರ ಕೊಠಡಿ ಉದ್ಘಾಟನೆ ಮಾಡಿದರು.

‘ನನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಜನರ ಮನಸ್ಸಿನಲ್ಲಿ ವಿರೋಧಿ ಭಾವನೆ ಹುಟ್ಟು ಹಾಕುವ ಕೆಲಸ ಮಾಡಲಾಗುತ್ತಿದೆ. ಮೊದಲು ಎಚ್ಚರಿಕೆ ನೀಡಿದ್ದೆ. ನಂತರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದೇನೆ. ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿದ್ದೇನೆ. ಕಿಡಿಗೇಡಿಗಳು ಹರಡುವ ಸುದ್ದಿಗಳನ್ನು ಜನರು ನಂಬಬಾರದು’ ಎಂದು ಮನಚಿ ಮಾಡಿದರು.

‘ಕೆಆರ್‌ಎಸ್‌ ಅಣೆಕಟ್ಟೆಗೆ ತೊಂದರೆಯಾಗುವುದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯಬಾರದು. ಅದರ ಸುರಕ್ಷತೆ ಬಗ್ಗೆ ಗಮನ ಹರಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು, ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಅಕ್ರಮ ಗಣಿಗಾರಿಕೆಯಿಂದ ಈಗಾಗಲೇ ಹಲವಾರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರು ಯಾವ ಕಾರಣಕ್ಕೂ ಗಣಿಗಾರಿಕೆಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ’ ಎಂದು ಹೇಳಿದರು.

‘ಅಂಬರೀಷ್ ಅವರು ಕಾರ್ಯನಿರ್ವಹಿಸುತ್ತಿದ್ದ ಕಚೇರಿಯಲ್ಲೇ, ನನಗೂ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕದ್ದು ನನ್ನ ಭಾಗ್ಯ. ಜನ ಸಾಮಾನ್ಯರ ಸಮಸ್ಯೆಗಳು ಹಾಗೂ ತಾಲ್ಲೂಕುವಾರು ಯಾವ ಯಾವ ಕೆಲಸಗಳು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಪ್ರತಿ ವಾರ ಕಚೇರಿಯಲ್ಲಿ ಸಭೆ ನಡೆಸುತ್ತೇನೆ. ಇದಲ್ಲದೇ ವಾರದಲ್ಲಿ ಒಂದು ‌ಅಥವಾ ಎರಡು ದಿನ ಕಚೇರಿಯಲ್ಲಿ ಇದ್ದು, ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸುತ್ತೇನೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿರುವ ಕೆರೆ- ಕಟ್ಟೆಗಳಿಗೆ ಒಂದೇ ಬಾರಿ ನೀರು ತುಂಬಿಸಲು ಸಾಧ್ಯವಿಲ್ಲ. ಒಂದರ ನಂತರ ಇನ್ನೊಂದು ಕೆರೆಯನ್ನು ಭರ್ತಿ ಮಾಡಲಾಗುತ್ತದೆ. ಕೆಆರ್‌ಎಸ್‌ ಅಣೆಕಟ್ಟೆ ತುಂಬಿದ್ದು, ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು’ ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಕಿಸಾನ್‌ ಮಾನ್‌ಧನ್‌ ಯೋಜನೆ ಭಿತ್ತಿಪತ್ರ ಬಿಡುಗಡೆ ಮಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ, ಉಪವಿಭಾಗಾಧಿಕಾರಿ ಹೋಟೆಲ್‌ ಶಿವಪ್ಪ ಇದ್ದರು.

ಪ್ರತಿಕ್ರಿಯಿಸಿ (+)