ಮಂಗಳವಾರ, ನವೆಂಬರ್ 19, 2019
23 °C
25 ಮಂದಿ ನಾಗರಿಕ ಸಂಘಟನೆಗಳ ಪ್ರತಿನಿಧಿಗಳ ಜಂಟಿ ಹೇಳಿಕೆ

ಸೆಂಥಿಲ್‌ ಮೇಲಿನ ದಾಳಿ ಫ್ಯಾಸಿಸ್ಟ್‌ ಷಡ್ಯಂತ್ರ

Published:
Updated:

ಮಂಗಳೂರು: ‘ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂಬ ಆತಂಕದೊಂದಿಗೆ ಐಎಎಸ್‌ ಅಧಿಕಾರಿಯ ಹುದ್ದೆಗೆ ರಾಜೀನಾಮೆ ನೀಡಿರುವ ಸಸಿಕಾಂತ್‌ ಸೆಂತಿಲ್‌ ವಿರುದ್ಧ ಬಿಜೆಪಿಯ ಸಂಸದರು, ಶಾಸಕರು ಮತ್ತು ಸಂಘ ಪರಿವಾರದ ಸಂಘಟನೆಗಳು ಸಂಘಟಿತವಾಗಿ ನಡೆಸುತ್ತಿರುವ ದಾಳಿಯು ಫ್ಯಾಸಿಸ್ಟ್‌ ಷಡ್ಯಂತ್ರದ ಭಾಗವೇ ಆಗಿದೆ ಎಂದು ಜಿಲ್ಲೆಯ 25 ಮಂದಿ ವಿವಿಧ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಹೇಳಿದ್ದಾರೆ.

ಅಖಿಲ ಭಾರತ ವಿಚಾರವಾದಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್‌ ನೇತೃತ್ವದಲ್ಲಿ ಬುಧವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬರಹಗಾರ್ತಿ ಚಂದ್ರಕಲಾ ನಂದಾವರ, ಹಿರಿಯ ದಲಿತ ಮುಖಂಡ ಎಂ.ದೇವದಾಸ್‌, ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ಹಿರಿಯ ವಕೀಲ ದಯಾನಾಥ್‌ ಕೋಟ್ಯಾನ್‌, ಅಖಿಲ ಭಾರತ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತ ಮರೋಳಿ, ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಸಂಯೋಜಕಿ ವಿದ್ಯಾ ದಿನಕರ್‌ ಸೇರಿದಂತೆ 25 ಮಂದಿ ಹೇಳಿಕೆಗೆ ಸಹಿ ಮಾಡಿದ್ದಾರೆ.

‘ಸಸಿಕಾಂತ್‌ ಸೆಂತಿಲ್‌ ಈ ದೇಶದ ಪ್ರಜೆಯಾಗಿ ಎತ್ತಿರುವ ಪ್ರಶ್ನೆಗಳು ಸರಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಂಸತ್ತಿನ ಪರಮಾಧಿಕಾರವನ್ನು ಏಕಪಕ್ಷೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದನ್ನು ಪ್ರಶ್ನಿಸುವವರನ್ನು ‘ದೇಶದ್ರೋಹಿ’ ಎಂದು ಕರೆದು ಏಕಾಂಗಿಯಾಗಿ ಮಾಡಲಾಗುತ್ತಿದೆ. ಸೆಂತಿಲ್ ಅವರ ದನಿಯನ್ನೂ ಹತ್ತಿಕ್ಕಲು ಫ್ಯಾಸಿಸ್ಟ್‌ ಷಡ್ಯಂತ್ರ ಬಳಕೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ದಕ್ಷ, ಪ್ರಾಮಾಣಿಕ ಮತ್ತು ಕಳಂಕವಿಲ್ಲದ ಐಎಎಸ್‌ ಅಧಿಕಾರಿಯಾಗಿದ್ದ ಸೆಂತಿಲ್‌ ಎತ್ತಿರುವ ಪ್ರಶ್ನೆಗಳು, ಮಾಡಿರುವ ಆರೋಪಗಳು ಹೇಗೆ ತಪ್ಪು ಎನ್ನುವುದನ್ನು ಅವರ ವಿರೋಧಿಗಳು ಆಧಾರಸಹಿತವಾಗಿ ವಿವರಿಸುವ ಕೆಲಸ ಮಾಡಬೇಕು. ಹುಸಿ ಆರೋಪಗಳ ಮೂಲಕ ತೇಜೋವಧೆಗೆ ಯತ್ನಿಸುವುದು ಸಲ್ಲ. ಕಾರ್ಕಳ ಶಾಸಕ ವಿ.ಸುನೀಲ್‌ ಕುಮಾರ್‌ ‘ಆತ್ಮಹತ್ಯೆಯ ಸ್ಥಿತಿ ನಿರ್ಮಿಸುತ್ತೇವೆ’ ಎಂಬುದಾಗಿ ಬೆದರಿಕೆಯೊಡ್ಡಿರುವುದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರದ ಜನವಿರೋಧಿ ದೋರಣೆಗಳನ್ನು ಪ್ರಶ್ನಿಸಿದ ಬರಹಗಾರರು, ಕಲಾವಿದರು, ಹೋರಾಟಗಾರರನ್ನು ಒಬ್ಬಂಟಿಯನ್ನಾಗಿ ಮಾಡಿ, ಅವರ ದನಿಯನ್ನು ಮೌನವಾಗಿಸುವ ಫ್ಯಾಸಿಸ್ಟ್‌ ಕಾರ್ಯತಂತ್ರ ಬಳಕೆಯಲ್ಲಿದೆ. ಸೆಂತಿಲ್‌ ಅವರ ಧ್ವನಿಯನ್ನೂ ಅದೇ ಮಾದರಿಯಲ್ಲಿ ಹತ್ತಿಕ್ಕುವ ಪ್ರಯತ್ನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕ ಸಮಾಜ ಖಂಡಿಸುತ್ತದೆ. ಸೆಂತಿಲ್‌ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಅವರ ಜೊತೆ ನಿಲ್ಲುತ್ತೇವೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)