ಭಾನುವಾರ, ನವೆಂಬರ್ 17, 2019
28 °C

ಸ್ಮಿತ್ ಶೈಲಿ ಹಾಸ್ಯಾಸ್ಪದವಾಗಿತ್ತು; ಗಿಲ್‌ಕ್ರಿಸ್ಟ್

Published:
Updated:
Prajavani

ಬೆಂಗಳೂರು: ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಅವರ ಬ್ಯಾಟಿಂಗ್ ಶೈಲಿಯು ಆರಂಭದಲ್ಲಿ ಹಾಸ್ಯಾಸ್ಪದವಾಗಿತ್ತು. ಅವರು ಕ್ರೀಸ್‌ನಲ್ಲಿ ಬ್ಯಾಟಿಂಗ್‌ಗೆ ನಿಂತಾಗ ಜನರು ಗೇಲಿ ಮಾಡುತ್ತಿದ್ದರು. ಆದರೆ ಇವತ್ತು ಅವರನ್ನು ಮೆಚ್ಚಿಕೊಂಡಿರುವವರ ಸಂಖ್ಯೆ ಅ‍ಪಾರವಾಗಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆ್ಯಡಂ ಗಿಲ್‌ಕ್ರಿಸ್ಟ್ ಹೇಳಿದರು.

ಬುಧವಾರ ಅವರು ನಗರದ ಐಎಫ್‌ಐಎಂ ಬಿಸಿನೆಸ್ ಸ್ಕೂಲ್‌ಗೆ ಆಗಮಿಸಿದ್ದರು. ವೊಲೊಗಾಂಗ್ ವಿಶ್ವವಿದ್ಯಾಲಯದ ಪ್ರಚಾರ ರಾಯಭಾರಿಯಾಗಿರುವ ಅವರು ಐಎಫ್‌ಎಐಂನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಆ್ಯಷಸ್ ಸರಣಿಯಲ್ಲಿ ರನ್‌ಗಳ ಹೊಳೆ ಹರಿಸುತ್ತಿರುವ ಸ್ಟೀವ್ ಸ್ಮಿತ್ ಅವರನ್ನು ಶ್ಲಾಘಿಸಿದರು.

‘ಸ್ಮಿತ್ ಬ್ಯಾಟಿಂಗ್ ಶೈಲಿಯು ಅವರ ಬೆಳವಣಿಗೆಗೆ ಆತಂಕ ಒಡ್ಡಿತ್ತು. ಅವರು ಕ್ರಿಕೆಟ್‌ಗೆ ಕಾಲಿಟ್ಟಿದ್ದು ಬೌಲಿಂಗ್ ಆಲ್‌ರೌಂಡರ್ ಆಗಿ. ಆದರೆ ಬ್ಯಾಟಿಂಗ್ ಮಾಡುವಾಗ ಅವರ ಶೈಲಿಯು ವಿಚಿತ್ರವಾಗಿತ್ತು. ಅಸಾಂಪ್ರದಾಯಿಕ ಶೈಲಿಯ ಆಟ ಅವರದ್ದಾಗಿತ್ತು. ಆದರೆ ಅವರು ತಮ್ಮ ಸಾಮರ್ಥ್ಯವನ್ನು ಸರಿಯಾಗಿ ಮನಗಂಡಿದ್ದರು. ಅದಕ್ಕೆ ಅಂಟಿಕೊಂಡರು. ಯಶಸ್ವಿಯಾದರು. ಇವತ್ತು ಅವರನ್ನು ಸರ್‌ ಡಾನ್ ಬ್ರಾಡ್ಮನ್ ಅವರಿಗೆ ಹೋಲಿಕೆ ಮಾಡಲಾಗುತ್ತಿದೆ’ ಎಂದು ಗಿಲ್‌ಕ್ರಿಸ್ಟ್ ಹೇಳಿದರು. 

‘ಸ್ಮಿತ್ ಬಹಳ ಅಮೋಘವಾಗಿ ಆಡುತ್ತಿದ್ದಾರೆ. ಒಂದೊಂದು ಸಲವಂತೂ ಅವರನ್ನು ಔಟ್ ಮಾಡಲು ಬೌಲರ್‌ಗಳಿಗೆ ಸಾಧ್ಯವೇ ಇಲ್ಲ ಎನಿಸಿಬಿಡುತ್ತದೆ. ವಿಶ್ವ ಕ್ರಿಕೆಟ್‌ನಲ್ಲಿ ಇಂದು ಸ್ಟೀವ್, ವಿರಾಟ್ (ಕೊಹ್ಲಿ) ಮತ್ತು ಕೇನ್ (ವಿಲಿಯಮ್ಸನ್) ಅವರಲ್ಲಿ ಯಾರು ಶ್ರೇಷ್ಠ ಎಂದು ಹೇಳುವುದು ಕಷ್ಟ. ಮೂವರು ಅಗಾಧ ಪ್ರತಿಭಾವಂತರು. ಇಂಗ್ಲೆಂಡ್‌ನ ಜೋ ರೂಟ್ ಕೂಡ ಅವರಿಗೆ ಹತ್ತಿರ ಇದ್ದಾರೆ. ಇವರೆಲ್ಲರೂ ತಮ್ಮ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. ಅದರೆ, ತಮ್ಮ ಶ್ರೇಷ್ಠ ಗುಣಗಳನ್ನು ಮತ್ತು ಸಾಮರ್ಥ್ಯವನ್ನು ಯಾವತ್ತೂ ಬಿಟ್ಟಿಲ್ಲ’ ಎಂದು ಶ್ಲಾಘಿಸಿದರು.
 

ಪ್ರತಿಕ್ರಿಯಿಸಿ (+)