ಶುಕ್ರವಾರ, ನವೆಂಬರ್ 22, 2019
26 °C
ಭಾರತ ತಂಡ ಪ್ರಕಟ

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ: ರಾಹುಲ್‌ಗೆ ಕೊಕ್, ಶುಭಮನ್‌ಗೆ ಬುಲಾವ್

Published:
Updated:

ನವದೆಹಲಿ: ಸತತ ವೈಫಲ್ಯ ಅನುಭವಿಸುತ್ತಿರುವ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಪಂಜಾಬ್ ಆಟಗಾರ ಶುಭಮನ್ ಗಿಲ್ಗೆ ಬುಲಾವ್ ಬಂದಿದೆ.

ಅವರ ಬದಲಿಗೆ ‘ಏಕದಿನ ಕ್ರಿಕೆಟ್ ಪರಿಣತ’ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮತ್ತು ಕನ್ನಡಿಗ ಮಯಂಕ್ ಅಗರವಾಲ್ ಅವರು ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ಈಚೆಗೆ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ರೋಹಿತ್ ತಂಡದಲ್ಲಿದ್ದರು. ಆದರೆ, ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿರಲಿಲ್ಲ. ರಾಹುಲ್ ಮತ್ತು ಮಯಂಕ್ ಇನಿಂಗ್ಸ್‌ ಆರಂಭಿಸಿದ್ದರು.  ಆದರೆ, ಕಳೆದ  ಒಂದು ವರ್ಷದ ಅವಧಿಯಲ್ಲಿ ರಾಹುಲ್ ತಮಗೆ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ರನ್‌ ಗಳಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಆದ್ದರಿಂದ ಆಯ್ಕೆ ಸಮಿತಿಯು ಈ ಬಾರಿ ಅವರನ್ನು ಪರಿಗಣಿಸಲಿಲ್ಲ.

‘ರೋಹಿತ್ ಅವರಿಗೆ ಕ್ರಮಾಂಕದಲ್ಲಿ ಬಡ್ತಿ ನೀಡಿ ಅವಕಾಶ ಕೊಡಲಾಗಿದೆ. ಆಯ್ಕೆ ಸಮಿತಿ ಮತ್ತು ತಂಡದ  ಮ್ಯಾನೇಜ್‌ಮೆಂಟ್‌ಗೆ ಶರ್ಮಾ ಅವರಿಂದ ಅಪಾರ ನಿರೀಕ್ಷೆಗಳು ಇವೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್. ಕೆ ಪ್ರಸಾದ್ ಹೇಳಿದರು.

ಯುವ ವಿಕೆಟ್‌ ಕೀಪರ್ ರಿಷಭ್ ಪಂತ್ ತಂಡದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ವೃದ್ದಿಮಾನ್ ಸಹಾ ಕೂಡ ಇದ್ದಾರೆ.

‘ಕೆ.ಎಲ್. ರಾಹುಲ್ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಆದರೆ ಅವರು ಲಯಕ್ಕೆ ಮರಳುವಲ್ಲಿ ವಿಫಲರಾಗಿದ್ದಾರೆ. ಮುಂದೆ ಮತ್ತೆ ಅವರು ಮರಳಬಹುದು. ಹಿಂದೊಮ್ಮೆ ವಿವಿಎಸ್ ಲಕ್ಷ್ಮಣ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಅವರು ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ 1400 ರನ್‌ ಗಳಿಸಿ ಭಾರತ ತಂಡಕ್ಕೆ ಮರಳಿದ್ದರು. ರಾಹುಲ್ ಅವರೂ ಅದೇ ರೀತಿ ಮಾಡಲಿ’ ಎಂದು  ಪ್ರಸಾದ್ ಹೇಳಿದರು.

‘ಯುವ ಆಟಗಾರ ಶುಭಮನ್ ಗಿಲ್‌ ತಂಡದಲ್ಲಿದ್ದಾರೆ. ಪ್ರಿಯಾಂಕ್ ಪಾಂಚಾಲ್ ಮತ್ತು ಅಭಿಮನ್ಯು ಈಶ್ವರನ್ ಕೂಡ ದೇಶಿ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಅವರಿಗೂ ಅಭ್ಯಾಸ ಪಂದ್ಯದಲ್ಲಿ ಅವಕಾಶ ಸಿಕ್ಕಿದೆ. ಇದು ಅವರಿಗೆ ಬೆಳೆಯಲು ಅವಕಾಶ ಸಿಕ್ಕಂತಾಗಿದೆ’ ಎಂದು ಹೇಳಿದರು.

ಕರ್ನಾಟಕದ ಕರುಣ್ ನಾಯರ್ ಕೂಡ ಮಂಡಳಿ ಇಲೆವನ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಅಕ್ಟೋಬರ್ 2ರಿಂದ ಟೆಸ್ಟ್ ಸರಣಿಯು ಆರಂಭವಾಗಲಿದೆ.

ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಮಯಂಕ್ ಅಗರವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಶುಭಮನ್ ಗಿಲ್.

ಮಂಡಳಿ ಅಧ್ಯಕ್ಷರ ಇಲೆವನ್: ರೋಹಿತ್ ಶರ್ಮಾ (ನಾಯಕ), ಮಯಂಕ್ ಅಗರವಾಲ್, ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ಸಿದ್ಧೇಶ್ ಲಾಡ್, ಕೆ.ಎಸ್. ಭರತ್ (ವಿಕೆಟ್‌ಕೀಪರ್), ಜಲಜ್ ಸಕ್ಸೆನಾ, ಧರ್ಮೇಂದ್ರಸಿಂಹ ಜಡೇಜ, ಆವೇಶ್ ಖಾನ್, ಇಶಾನ್ ಪೊರೆಲ್, ಶಾರ್ದೂಲ್ ಠಾಕೂರ್,  ಉಮೇಶ್ ಯಾದವ್.

ಇದು ಹೊಸ ಆರಂಭ: ಪಂತ್
ಕೋಲ್ಕತ್ತ (ಪಿಟಿಐ):
ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಯ‌ಲ್ಲಿ ವೃತ್ತಿಜೀವನದ ‘ಹೊಸ ಆರಂಭ’ ಮಾಡುತ್ತೇನೆ ಎಂದು ವಿಕೆಟ್‌ಕೀಪರ್ ರಿಷಭ್ ಪಂತ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಅವರು ನಿರೀಕ್ಷಿತ ಮಟ್ಟದ ಆಟವಾಡಿರಲಿಲ್ಲ. ಆದ್ದರಿಂದ ಬಹಳಷ್ಟು ಟೀಕೆಗೊಳಗಾಗಿದ್ದರು.

ಇದೇ 15ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿರುವ ಟ್ವೆಂಟಿ–20 ಸರಣಿಯಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.

‘ಈ ಸರಣಿಗಾಗಿ ನಾನು ಬಹಳಷ್ಟು ಶ್ರಮಪಟ್ಟು ಅಭ್ಯಾಸ ಮಾಡಿದ್ದೇನೆ. ಸಕಾರಾತ್ಮಕ ಮನೋಭಾವದಿಂದ ಕಣಕ್ಕಿಳಿಯಲಿದ್ದೇನೆ. ಹಿಂದಿನ ವೈಫಲ್ಯಗಳನ್ನು ಮರೆತಿದ್ದೇನೆ’ ಎಂದು ರಿಷಭ್ ಹೇಳಿದ್ದಾರೆ.

*
ಕೆ.ಎಲ್. ರಾಹುಲ್ ಪ್ರತಿಭಾ ವಂತ. ಆದರೆ ಅವರು ಉತ್ತಮ ಫಾರ್ಮ್‌ನಲ್ಲಿ ಇಲ್ಲ. ಅವರೊಂದಿಗೆ ಚರ್ಚಿಸಿದ್ದೇವೆ.
–ಪ್ರಸಾದ್ ಆಯ್ಕೆ ಸಮಿತಿ ಮುಖ್ಯಸ್ಥ

ಪ್ರತಿಕ್ರಿಯಿಸಿ (+)