ಶುಕ್ರವಾರ, ನವೆಂಬರ್ 15, 2019
23 °C

ಮುಂದಿನ ನಿಲ್ದಾಣದ ಹುಡುಗಿ

Published:
Updated:
Prajavani

ವಿನಯ್ ಭಾರದ್ವಾಜ್ ನಿರ್ದೇಶನದ ‘ಮುಂದಿನ ನಿಲ್ದಾಣ’ ಚಿತ್ರದ ಪೋಸ್ಟರ್‌ ಗಮನಿಸಿದವರು, ನಟಿ ರಾಧಿಕಾ ನಾರಾಯಣ್, ನಾಯಕ ನಟ ಪ್ರವೀಣ್ ತೇಜ್ ಜೊತೆ ಇನ್ನೊಬ್ಬಳು ಮುದ್ದು ಮುಖದ ಹುಡುಗಿ ಇರುವುದನ್ನು ಗುರುತಿಸದೆ ಇರಲು ಸಾಧ್ಯವಿಲ್ಲ.

ಇವರು ‘ನೀರ್‌ದೋಸೆ’, ‘ಸಿದ್ಲಿಂಗು’ ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಅನನ್ಯಾ ಕಶ್ಯಪ್. ‘ಮುಂದಿನ ನಿಲ್ದಾಣ’ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ ಅನನ್ಯಾ. ಇವರು ಇದರಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ನೀರು ತಂದವರು’ ಎಂಬ ಕಲಾತ್ಮಕ ಸಿನಿಮಾದಲ್ಲಿ ಕೂಡ ಇವರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ‘ಆದರೆ, ಕಮರ್ಷಿಯಲ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿರುವುದು ಇದೇ ಮೊದಲು’ ಎನ್ನುತ್ತಾರೆ ಅನನ್ಯಾ.

ಅನನ್ಯಾ ಅವರಿಗೂ ನಿರ್ದೇಶಕ ವಿನಯ್ ಅವರಿಗೂ ಸ್ನೇಹಿತರಾಗಿರುವ ವ್ಯಕ್ತಿಯೊಬ್ಬರು ಈ ಚಿತ್ರದ ಬಗ್ಗೆ ಹೇಳಿದ್ದರು. ಅದರ ಅನುಸಾರ ಅನನ್ಯಾ ಅವರು ತಮ್ಮ ಅಭಿನಯವನ್ನು ತೋರಿಸುವ ದೃಶ್ಯಗಳನ್ನು ಆಡಿಷನ್‌ಗೆ ಕಳುಹಿಸಿಕೊಟ್ಟಿದ್ದರು. ಆ ಮೂಲಕ ಈ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡರು.

ಅಂದಹಾಗೆ, ಅನನ್ಯಾ ಅವರಿಗೆ ನಟನೆಯ ಜೊತೆಗಿನ ನಂಟು ಆರಂಭವಾಗಿದ್ದು ವಯಸ್ಸು ಹತ್ತು ವರ್ಷ ಆಗಿದ್ದಾಗಿಂದಲೇ. ‘ಆಗ ನಟನ ಸಂಸ್ಥೆಯ ಮೂಲಕ ಅಭಿನಯ ಆರಂಭಿಸಿದೆ. ಅಂದಾಜು ಹತ್ತು ವರ್ಷ ರಂಗಭೂಮಿಯಲ್ಲಿ ಅಭಿನಯದ ಅನುಭವ ಸಂಪಾದಿಸಿದೆ. ನಟನ ಸಂಸ್ಥೆಗೆ ಚಿತ್ರ ನಿರ್ದೇಶಕರೂ ಭೇಟಿ ನೀಡುತ್ತಿದ್ದ ಕಾರಣ, ಬಾಲನಟಿಯಾಗಿ ಅಭಿನಯಿಸುವ ಅವಕಾಶ ಸಿಕ್ಕಿತು’ ಎಂದರು ಅನನ್ಯಾ.

ಪಾತ್ರಗಳ ನಿರೀಕ್ಷೆ: ‘ಮುಂದಿನ ನಿಲ್ದಾಣ’ ಚಿತ್ರ ಬಿಡುಗಡೆ ಆದ ನಂತರ ಹೊಸ ಅವಕಾಶಗಳು ತಮ್ಮತ್ತ ಬರಬಹುದು ಎಂಬ ನಿರೀಕ್ಷೆ ಅನನ್ಯಾ ಅವರದ್ದು. ಆದರೆ, ಸಿನಿಮಾ ಒಪ್ಪಿಕೊಳ್ಳಲು ಕಥೆ ಮತ್ತು ಚಿತ್ರದ ಥೀಮ್ ಬಹಳ ಮುಖ್ಯ ಎನ್ನುತ್ತಾರೆ. ‘ನನ್ನ ಪಾತ್ರ ಇದೇ ರೀತಿ ಇರಬೇಕು ಎಂದು ತಾಕೀತು ಮಾಡುವುದಿಲ್ಲ ನಾನು. ಯಾವುದೇ ಪಾತ್ರ ನನಗೆ ಸವಾಲು, ಆಸಕ್ತಿಕರ ಅನಿಸಿದರೆ ಅಭಿನಯಿಸುವೆ’ ಎಂದು ಹೇಳಿದರು.

‘ಬಹುತೇಕ ಸಿನಿಮಾಗಳಲ್ಲಿ ಹೆಣ್ಣಿನ ಪಾತ್ರವು, ನಾಯಕ ನಟನನ್ನು ಪ್ರೀತಿಸುವುದಕ್ಕೇ ಸೀಮಿತ ಆಗಿರುತ್ತದೆ. ನಾಯಕನನ್ನು ಹೊರತುಪಡಿಸಿದ ವ್ಯಕ್ತಿತ್ವವನ್ನು ಆಕೆಗಾಗಿ ಸೃಷ್ಟಿಸಿರುವುದಿಲ್ಲ, ಅಲ್ಲವೇ’ ಎಂಬ ಪ್ರಶ್ನೆಯನ್ನು ಎತ್ತಿದಾಗ, ‘ಹೌದು, ಹೆಣ್ಣಿನ ಪಾತ್ರ ಲವ್ ಮಾಡುವುದಕ್ಕೇ ಸೀಮಿತ ಆಗಿರುತ್ತದೆ ಎಂದು ಅನಿಸಿದ್ದಿದೆ. ನನಗೆ ಅಂತಹ ಪಾತ್ರಗಳು ಬಂದರೆ, ಅವುಗಳನ್ನು ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುವೆ’ ಎಂದು ಉತ್ತರಿಸಿದರು.

ಆದರೆ, ಅಂತಹ ಪಾತ್ರಗಳನ್ನು ನಿರಾಕರಿಸುವುದರಿಂದ ಅವಕಾಶಗಳು ಕಳೆದುಹೋಗಬಹುದಲ್ಲವೇ ಎಂಬ ಆತಂಕ ಅನನ್ಯಾ ಅವರಲ್ಲಿ ಇಲ್ಲ. ‘ಒಂದಿಷ್ಟು ಅವಕಾಶಗಳು ಕಳೆದುಹೋಗಬಹುದು. ಆದರೆ ನನಗೆ ನನ್ನ ವೃತ್ತಿ ಜೀವನ ಹೆಚ್ಚು ಮುಖ್ಯ. ನನಗೆ ಬೇಕಾದಂತಹ ಪಾತ್ರಗಳನ್ನೇ ನಿಭಾಯಿಸಿ ನಾನು ಒಳ್ಳೆಯ ಹೆಸರು ಸಂಪಾದಿಸಬಹುದು. ಈಗ ಹೊಸ ಬಗೆಯ ಸಿನಿಮಾಗಳು ಬರುತ್ತಿವೆ. ಅವುಗಳಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತವೆ’ ಎಂಬ ಭರವಸೆಯ ಮಾತು ಹೇಳಿದರು. ತಕ್ಷಣ ಇನ್ನೊಂದು ಮಾತು ಸೇರಿಸಿ, ‘ರಿಷಬ್ ಶೆಟ್ಟಿ ಅವರು ನಿರ್ದೇಶಿಸುವ ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳಿಗೂ ಪ್ರಾಧಾನ್ಯ ಇರುತ್ತದೆ. ಅವರ ಸಿನಿಮಾಗಳು ಗಳಿಕೆಯ ದೃಷ್ಟಿಯಿಂದಲೂ ಒಳ್ಳೆಯ ಸಾಧನೆ ತೋರುತ್ತವೆ. ಹಾಗಾಗಿ, ಅಂತಹ ಪಾತ್ರಗಳನ್ನು ನಿರಾಕರಿಸುವ ಮೂಲಕ ನಾನು ಕೆಲವು ಅವಕಾಶಗಳನ್ನು ಕಳೆದುಕೊಳ್ಳುವೆ ಎಂದು ನನಗಂತೂ ಅನ್ನಿಸುತ್ತಿಲ್ಲ’ ಎಂದರು.

ಕನ್ನಡದಲ್ಲಿ ಹೊಸಬರು ಸಿನಿಮಾ ಮಾಡುತ್ತಿರುವುದು, ಹೊಸ ಬಗೆಯ ಸಿನಿಮಾಗಳು ಬರುತ್ತಿರುವುದು, ಹೊಸಬರಿಗೆ ಅವಕಾಶ ಪಡೆದುಕೊಳ್ಳುವ ಒಳ್ಳೆಯ ವಾತಾವರಣ ಸೃಷ್ಟಿಸಿವೆ ಎಂಬ ಅಭಿಪ್ರಾಯ ಅನನ್ಯಾ ಅವರದ್ದು. ‘ಸಿನಿಮಾ ಮಾಡಲು ಬರುತ್ತಿರುವ ಹೊಸಬರು ಹೊಸ ಪ್ರತಿಭೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರು ಆಡಿಷನ್ ಮೂಲಕ ನಟ–ನಟಿಯರನ್ನು ಆಯ್ಕೆ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಅವಕಾಶಗಳು ಲಭ್ಯವಾಗುವಂತಹ ಸನ್ನಿವೇಶ ಸೃಷ್ಟಿಸಿದೆ’ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.

ಪಾತ್ರ ಸಿದ್ಧತೆ: ತಾವು ಪಾತ್ರಗಳಿಗಾಗಿ ನಡೆಸುವ ಸಿದ್ಧತೆಯ ಬಗ್ಗೆಯೂ ಅನನ್ಯಾ ಮಾತಿನ ನಡುವೆ ಒಂದಿಷ್ಟು ಹೇಳಿದರು. ‘ಮೊದಲು ಚಿತ್ರದ ಸ್ಕ್ರಿಪ್ಟ್ ಪಡೆದುಕೊಳ್ಳುವೆ. ಅದನ್ನು 10ರಿಂದ 12 ಬಾರಿ ಓದಿಕೊಳ್ಳುವೆ. ಚಿತ್ರದ ರಿಹರ್ಸಲ್‌ಗೆ ಕೂಡ ಮಹತ್ವ ನೀಡುತ್ತೇನೆ. ಹಾಗೆಯೇ, ಸಿನಿಮಾ ತಂಡದ ಜೊತೆ ಬೆರೆಯುವ ಕೆಲಸಕ್ಕೆ ಮಹತ್ವ ನೀಡುವೆ. ಏಕೆಂದರೆ, ಒಂದು ತಂಡವಾಗಿ ಕೆಲಸ ಮಾಡುವುದು ನನಗೆ ಬಹಳ ಮುಖ್ಯ’ ಎಂದರು.

ಪ್ರತಿಕ್ರಿಯಿಸಿ (+)