ಶುಕ್ರವಾರ, ನವೆಂಬರ್ 15, 2019
27 °C

ಮೈಸೂರು ಮಲ್ಲಿಗೆ; ಒಲವೇ ನಮ್ಮ ಬದುಕು 15ರಂದು

Published:
Updated:
Prajavani

ಮಂಡ್ಯ: ತಾಲ್ಲೂಕಿನ ಮಂಗಲ ಗ್ರಾಮದ ನೆಲದನಿ ಬಳಗದ ವತಿಯಿಂದ ಸೆ.15ರಂದು ನಗರದ ವಿವೇಕಾನಂದ ರಂಗಮಂದಿರದಲ್ಲಿ ‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನದ ಅಂಗವಾಗಿ ‘ಒಲವೇ ನಮ್ಮ ಬದುಕು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರೇಮಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರ ಕವನಗಳು ಹಾಗೂ ಅವರ ಜೀವನ ಆಧರಿಸಿ ಮೈಸೂರು ಮಲ್ಲಿಗೆ ನಾಟಕ ಕಟ್ಟಲಾಗಿದೆ. ಬೆಂಗಳೂರಿನ ಕಲಾಗಂಗೋತ್ರಿ ತಂಡದ ಕಲಾವಿದರು ಅಭಿನಯಿಸಲಿದ್ದಾರೆ. ರಾಜೇಂದ್ರ ಕಾರಂತ್‌ ರಚನೆ ಹಾಗೂ ಬಿ.ವಿ.ರಾಜಾರಾಂ ನಿರ್ದೇಶನವಿದೆ. ನಾಟಕದ ಆಶಯಕ್ಕೆ ಅನುಗುಣವಾಗಿ ‘ಒಲವೇ ನಮ್ಮ ಬದುಕು’ ಕಾರ್ಯಕ್ರಮ ಆಯೋಜಿಸಲಾಗಿದ್ದು ನಾಟಕದ ಆರಂಭಕ್ಕೂ ಮೊದಲು 13 ಆದರ್ಶ ದಂಪತಿಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಈ ದಂಪತಿಯಲ್ಲಿ ಪತಿ ತನ್ನ ಪತ್ನಿ ಮುಡಿಗೆ ಮೈಸೂರು ಮಲ್ಲಿಗೆ ಹೂ ಮುಡಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮಾದರಿಯಾಗಿರುವ ದಂಪತಿಯನ್ನು ಈ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ಸಾಹಿತಿಗಳು, ಕಲಾವಿದರು, ವೈದ್ಯರು, ಸೈನಿಕರು, ಚಿತ್ರ ನಟ–ನಟಿಯರು, ನಿರ್ದೇಶಕರು ತಮ್ಮ ಪತ್ನಿಯರ ಮುಡಿಗೆ ಹೂ ಮುಡಿಸಿ ‘ಒಲವೇ ನಮ್ಮ ಬದುಕು’ ಎಂದು ಸಂದೇಶ ನೀಡಲಿದ್ದಾರೆ.

ಮೈಸೂರು ಮಲ್ಲಿಗೆ ಹೂವಿನ ಅಲಂಕಾರ ಕಾರ್ಯಕ್ರಮದಲ್ಲಿ ಎದ್ದು ಕಾಣಲಿದೆ. ನಾಟಕ ನೋಡಲು ಬರುವ ಪ್ರೇಕ್ಷಕರಿಗೆ ಮೈಸೂರು ಮಲ್ಲಿಗೆ ಪುಸ್ತಕವನ್ನುಉಡುಗೊರೆಯಾಗಿ ನೀಡಲಾಗುತ್ತಿದೆ. ಉಚಿತ ಪ್ರವೇಶವಿದೆ.  ವೇದಿಕೆ ಕರ್ಯಕ್ರಮದಲ್ಲಿ ನೆಲದನಿ ಬಳಗದ ನಿರ್ದೇಶಕಿ ರುಕ್ಮಿಣಿ ಶಂಕರೇಗೌಡ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)