ಮಂಗಳವಾರ, ನವೆಂಬರ್ 12, 2019
28 °C

ನೀಳ ಬಾಲದ ಬಣ್ಣದ ಅಳಿಲು

Published:
Updated:
Prajavani

ಗಾತ್ರ ಮತ್ತು ದೇಹರಚನೆಗೆ ಅನುಗುಣವಾಗಿ ವಿಶ್ವದಾದ್ಯಂತ ಹಲವು ಅಳಿಲು ಪ್ರಭೇದಗಳನ್ನು ಗುರುತಿಸಲಾಗಿದೆ. ಎರಡು ಅಥವಾ ಮೂರು ಸೆಂಟಿ ಮೀಟರ್ ಗಾತ್ರದಿಂದ ಹಿಡಿದು, ಅಡಿಗಿಂತಲೂ ಉದ್ದ ಬೆಳೆಯುವ ಅಳಿಲುಗಳು ಇವೆ. ವಿಶ್ವದಾದ್ಯಂತ ಹಲವರು ಹೆಚ್ಚು ಇಷ್ಟಪಡುವ ಪ್ರಾಣಿಗಳಲ್ಲಿ ಒಂದಾಗಿ ಭಾರತದ ದೊಡ್ಡ ಅಳಿಲು (Indian Giant Squirrel) ಗುರುತಿಸಿಕೊಂಡಿದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಈ ವಿಶೇಷ ಅಳಿಲಿನ ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ರಟುಫಾ ಇಂಡಿಕಾ (Ratufa indica). ಇದು ದಂಶಕಗಳ ರೊಡೆಂಟಿಯಾ (Rodentia) ಗುಂಪಿಗೆ ಸೇರಿದ್ದು, ಅಳಿಲುಗಳ ಸ್ಕ್ಯುರಿಡೇ (Sciuridae) ಕುಟುಂಬಕ್ಕೆ ಸೇರಿದ ಸಸ್ತನಿ.

ಹೇಗಿರುತ್ತದೆ?

ಕಂದು, ಕೆಂಪು ಮತ್ತು ಕಪ್ಪು ಬಣ್ಣದ ನಯವಾದ ಕೂದಲಿನಿಂದ ಕೂಡಿದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಎದೆ, ಉದರ, ಮುಂಗಾಲುಗಳು, ಹಿಂಗಾಲುಗಳ ಒಳಭಾಗ ತಿಳಿ ಕಂದು ಬಣ್ಣದಲ್ಲಿದ್ದರೆ, ಮೂತಿ ಕಂದು ಬಣ್ಣದಲ್ಲಿರುತ್ತದೆ. ಮೂತಿಯ ಮೇಲೆ ಅಲ್ಲಲ್ಲಿ ಕೆಂಪು ಮತ್ತು ಕಂದು ಬಣ್ಣದ ಕೂದಲು ಬೆಳೆದಿರುತ್ತವೆ. ವೃತ್ತಾಕಾರದ ದೊಡ್ಡ ಕಿವಿಗಳು ಗಾಢ ಕಂದು ಬಣ್ಣದಲ್ಲಿರುತ್ತವೆ. ಮುಂಗಾಲುಗಳ ಮೇಲ್ಭಾಗ ಮತ್ತು ಬೆನ್ನು ಕಪ್ಪು ಬಣ್ಣದಲ್ಲಿದ್ದರೆ, ಸೊಂಟ ಮತ್ತು ಬೆನ್ನಿನ ಮಧ್ಯಭಾಗ ಕೆಂಪು ಬಣ್ಣದಲ್ಲಿರುತ್ತದೆ. ಬೆನ್ನಿನ ಕೆಳಭಾಗ, ಹಿಂಗಾಲುಗಳು ಮತ್ತು ಬಾಲದ ಆರಂಭ ಕಪ್ಪು ಬಣ್ಣದಲ್ಲಿರುತ್ತದೆ. ಬಾಲದ ತುದಿ ಭಾಗ ಕಂದು ಬಣ್ಣದಲ್ಲಿರುತ್ತದೆ. ಬಾಲ ದೇಹಕ್ಕಿಂತ ಉದ್ದವಾಗಿದ್ದು, ದಟ್ಟವಾದ ಕೂದಲನ್ನು ಹೊಂದಿರುವುದರಿಂದ ಆಕರ್ಷಕವಾಗಿ ಕಾಣುತ್ತದೆ. ಕಾಲುಗಳಲ್ಲಿ ನಾಲ್ಕು ಪುಟ್ಟ ಬೆರಳುಗಳಿದ್ದು, ನೀಳವಾದ ಉಗುರುಗಳು ಕಪ್ಪು ಬಣ್ಣದಲ್ಲಿರುತ್ತವೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ.

ವಾಸಸ್ಥಾನ

ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹರಡಿರುವ ಸತ್ಪುರ ಪರ್ವತ ಕಾಡುಗಳಲ್ಲಿ ಇದರ ಸಂತತಿ ಹೆಚ್ಚಾಗಿದೆ. ಪಶ್ಚಿಮ ಘಟ್ಟಗಳು, ತಮಿಳುನಾಡಿನ ಕಾಡು ಪ್ರದೇಶ, ತಿರುಪತಿ ಪರ್ವತ ಶ್ರೇಣಿ ಪ್ರದೇಶದಲ್ಲಿ ಇದರ ಸಂತತಿ ವಿಸ್ತರಿಸಿದೆ. ದಟ್ಟ ಮರಗಳಿಂದ ಕೂಡಿದ ಕಾಡು ಪ್ರದೇಶ ಇದರ ನೆಚ್ಚಿನ ವಾಸಸ್ಥಾನ.

ಜೀವನಕ್ರಮ ಮತ್ತು ವರ್ತನೆ

ಇದು ಸದಾ ಒಂಟಿಯಾಗಿರಲು ಇಷ್ಟಪಡುತ್ತದೆ. ಅಪರೂಪಕ್ಕೊಮ್ಮೆ ಅಥವಾ ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಸಂಗಾತಿಯೊಂದಿಗೆ ಸುತ್ತುತ್ತದೆ. ಇತರೆ ಪ್ರಾಣಿಗಳ ಕಣ್ಣಿಗೆ ಕಾಣಿಸಿಕೊಳ್ಳುವುದಕ್ಕೆ ಹೆಚ್ಚು ಇಷ್ಟಪಡುವುದಿಲ್ಲ. ಮುಂಜಾನೆ ಮತ್ತು ಸಂಜೆ ಹೆಚ್ಚು ಚುರುಕಾಗಿರುತ್ತದೆ. ತಾಪಮಾನ ಹೆಚ್ಚಾದ ಅವಧಿಯಲ್ಲಿ ಸುರಕ್ಷಿತ ಪ್ರದೇಶಗಳಲ್ಲಿ ವಿರಮಿಸುತ್ತದೆ. ಮರದ ಪೊಟರೆಗಳು, ವಿಶಾಲವಾದ ಮರದ ರೆಂಬೆಗಳಲ್ಲಿ ವಾಸಿಸುತ್ತದೆ. ಸುರಕ್ಷಿತವಾದ ಮರದ ರೆಂಬೆಗಳಲ್ಲಿದ್ದರೆ, ಕಡ್ಡಿಗಳು ಮತ್ತು ಹುಲ್ಲು ಬಳಸಿ ವೃತ್ತಕಾರದ ಗೂಡು ನಿರ್ಮಿಸುತ್ತದೆ. ಪ್ರತಿ ಅಳಿಲು ಸೀಮಿತ ಪ್ರದೇಶದಲ್ಲಿ ಗಡಿ ಗುರುತಿಸಿಕೊಂಡಿದ್ದು, 2ರಿಂದ 5 ಗೂಡುಗಳನ್ನು ರಚಿಸಿಕೊಂಡಿರುತ್ತದೆ. ಚುರುಕು ಬುದ್ಧಿಯ ಪ್ರಾಣಿಯಾಗಿದ್ದು, ಆಹಾರಕ್ಕಾಗಿ ಇತರೆ ಸಸ್ಯಹಾರಿ ಪ್ರಾಣಿಗಳೊಂದಿಗೆ ಜಗಳ ಕೂಡ ಮಾಡುತ್ತದೆ. ಸದಾ ಮರದ ರೆಂಬೆಗಳ ಮೇಲೆ ಅಲೆಯುತ್ತಿರುತ್ತದೆ. ನೀರು ಕುಡಿಯಬೇಕೆನಿಸಿದಾಗ ಮತ್ರ ನೆಲದ ಮೇಲೆ ಕಾಲಿಡುತ್ತದೆ. ವಿಶಿಷ್ಟ ಶಬ್ದಗಳು ಮತ್ತು ದೇಹದ ಭಂಗಿಗಳ ಮೂಲಕ ಸಂಗಾತಿಯೊಂದಿಗೆ ಸಂವಹನ ನಡೆಸುತ್ತದೆ.

ಪರಭಕ್ಷ ಪ್ರಾಣಿಗಳು ಎದುರಾದಾಗ ಒಂದಿಂಚೂ ಅಲುಗಾಡದಂತೆ ಸ್ತಬ್ದವಾಗುತ್ತದೆ. ನೆಲದ ಮೇಲಿದ್ದ ಅಪಾಯ ಎದುರಾದರೆ ಕ್ಷಣಾರ್ಧದಲ್ಲಿ ಮರಗಳನ್ನು ಏರಿ ತಪ್ಪಿಸಿಕೊಳ್ಳುತ್ತದೆ. ಮರಗಳ ಮೇಲೆ ಅಪಾಯ ಎದುರಾದರೆ ಮರದ ಕಾಂಡವನ್ನು ಬಿಡಿಸಲಾಗದಂತೆ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಅಂಕುಡೊಂಕಾಗಿ ಓಡುತ್ತಾ ಇತರೆ ಪ್ರಾಣಿಗಳನ್ನು ಗೊಂದಲಕ್ಕೆ ಗುರಿ ಮಾಡುತ್ತದೆ.

ಆಹಾರ

ಇದು ಸರ್ವಭಕ್ಷಕ ಅಳಿಲು. ಮುಂಜಾನೆಯಿಂದ ಸಂಜೆ ವರೆಗೆ ವಿವಿಧ ಬಗೆಯ ಆಹಾರ ಸೇವಿಸುತ್ತದೆ. ವಿವಿಧ ಬಗೆಯ ಹಣ್ಣುಗಳು ಇದರ ನೆಚ್ಚಿನ ಆಹಾರ. ಹೂಗಳು, ಒಣಹಣ್ಣುಗಳು, ಹಕ್ಕಿಗಳ ಮೊಟ್ಟೆಗಳು, ವಿವಿಧ ಬಗೆಯ ಕೀಟಗಳನ್ನೂ ಭಕ್ಷಿಸುತ್ತದೆ.

ಸಂತಾನೋತ್ಪತ್ತಿ

ಆಹಾರ ದೊರೆಯುವ ಪ್ರಮಾಣಕ್ಕೆ ಅನುಗುಣವಾಗಿ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಹೆಣ್ಣು ಅಳಿಲುಗಳ ಮೇಲೆ ಹಕ್ಕು ಸಾಧಿಸಲು ಗಂಡು ಅಳಿಲುಗಳು ಕಾಳಗಕ್ಕೆ ಇಳಿಯುತ್ತವೆ. ಪ್ರಬಲ ಗಂಡು ತನ್ನ ಗಡಿಯೊಳಗಿನ ಹೆಣ್ಣು ಅಳಿಲುಗಳ ಮೇಲೆ ಹಕ್ಕು ಸಾಧಿಸುತ್ತದೆ. ಒಂದೇ ಅಳಿಲಿನೊಂದಿಗೆ ಹಲವು ವರ್ಷಗಳ ಕಾಲ ಜೊತೆಯಾಗಿರುತ್ತದೆ.

ಹೆಣ್ಣು ಅಳಿಲು 28ರಿಂದ 35 ದಿನಗಳ ವರೆಗೆ ಗರ್ಭ ಧರಿಸಿ ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತದೆ. ಅಪರೂಪಕ್ಕೊಮ್ಮೆ ಮೂರು ಮರಿಗಳು ಜನಿಸುತ್ತವೆ. ನಿರ್ಮಿಸಿಕೊಂಡಿರುವ ಗೂಡಿನಲ್ಲೇ ಮರಿಗಳನ್ನು ಬಚ್ಚಿಟ್ಟು ತಾಯಿ ಆಳಿಲು ಆರೈಕೆ ಮಾಡುತ್ತದೆ. ಮರಿಗಳು ಗೂಡು ಬಿಟ್ಟು ಹೊರಗೆ ಬಂದು ಸಂಚರಿಸುವುದನ್ನು ಕಲಿತ ಕೆಲವು ದಿನಗಳ ನಂತರ ತಾಯಿ ಅಳಿಲಿನಿಂದ ಬೇರ್ಪಟ್ಟು, ಸ್ವತಂತ್ರವಾಗಿ ಜೀವಿಸಲು ಆರಂಭಿಸುತ್ತದೆ.

ಸ್ವಾರಸ್ಯಕರ ಸಂಗತಿಗಳು

ಮರಗಳ ವೇಗವಾಗಿ ಸಂಚರಿಸುವಾಗ ದೇಹದ ಸಮತೋಲನ ಕಾಪಾಡಿಕೊಳ್ಳಲು ನೀಳ ಬಾಲ ನೆರವಾಗುತ್ತದೆ.  ಇದರ ಗೂಡು ಹದ್ದಿನ ಗೂಡಿನಷ್ಟೇ ವಿಶಾಲವಾಗಿರುತ್ತದೆ.  ಗಂಡು ಅಳಿಲನ್ನು ಬಕ್ ಎಂದು ಹೆಣ್ಣು ಅಳಿಲನ್ನು ಡೊ ಎಂದೂ ಕರೆಯುತ್ತಾರೆ. ಮೊಲಗಳನ್ನೂ ಇದೇ ಹೆಸರಿನಿಂದ ಕರೆಯುತ್ತಾರೆ. ಮರಿಗಳನ್ನು ಪಪ್, ಕಿಟ್, ಕಿಟೆನ್ ಎಂದು ಕರೆಯುತ್ತಾರೆ. ಮನುಷ್ಯರೊಂದಿಗೆ ಉತ್ತಮವಾಗಿ ಬೆರೆಯುತ್ತದೆ. ಆಹಾರ ನೀಡುತ್ತಾ ಕೈಚಾಚಿದರೆ ಓಡಿ ಬರುತ್ತದೆ. ದೇಹದ ಗ್ರಂಥಿಗಳಿಂದ ಕೆಲವು ಬಗೆಯ ರಾಸಾಯನಿಕಗಳನ್ನು ಸ್ರವಿಸಿ ಪ್ರತಿ ಅಳಿಲು ಗಡಿ ಗುರುತಿಸಿಕೊಂಡಿರುತ್ತದೆ.

ಪ್ರತಿಕ್ರಿಯಿಸಿ (+)