ಮಂಗಳವಾರ, ನವೆಂಬರ್ 19, 2019
23 °C

ಐಎಎಸ್‌ ಅಧಿಕಾರಿಗಳ ರಾಜೀನಾಮೆ ಮತ್ತು ನೈತಿಕತೆಯ ಪ್ರಶ್ನೆಗಳು

Published:
Updated:
Prajavani

ಎರಡು ವಾರಗಳ ಅಂತರದಲ್ಲಿ ಇಬ್ಬರು ಐಎಎಸ್‌ ಅಧಿಕಾರಿಗಳು, ದೇಶದಲ್ಲಿ ನಡೆದಿರುವ ಕೆಲವು ವಿದ್ಯಮಾನಗಳಿಂದ ಬೇಸರ ಹೊಂದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಜನರ ಗಮನ ಸೆಳೆದಿದೆ. ತಾವು ನಂಬಿದ ತತ್ವ, ಸಿದ್ಧಾಂತಗಳಿಗೆ ಧಕ್ಕೆಯುಂಟಾಗಿದೆ ಎಂದು ಅವರು ತಮ್ಮ ರಾಜೀನಾಮೆಗೆ ಕಾರಣ ನೀಡಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಅಧಿಕಾರಿಗಳು ಹೀಗೆ ರಾಜೀನಾಮೆ ನೀಡಿದ್ದರೆ, ಅವರ ಮಾತುಗಳ ಹಿಂದೆ ಬೇರೆ ಕಾರಣಗಳನ್ನು ಊಹಿಸಬಹುದಿತ್ತು. ಆದರೆ, ಅಧಿಕಾರ ತ್ಯಜಿಸಿರುವ ಇಬ್ಬರೂ ಅಧಿಕಾರಿಗಳು ಯುವಕರು ಹಾಗೂ ಕಾರ್ಯನಿರ್ವಹಣೆಯಲ್ಲಿ ದಕ್ಷರೆಂದು ಹೆಸರಾಗಿದ್ದವರು. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್‌ ಸೆಂಥಿಲ್‌, ‘ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳೊಂದಿಗೆ ರಾಜಿ ಮಾಡಿಕೊಳ್ಳಲು ನಾನು ಸಿದ್ಧನಿಲ್ಲ. ನಾನು ನಂಬಿದ ತತ್ವ–ಸಿದ್ಧಾಂತಗಳ ವಿಚಾರವಾಗಿ ರಾಜಿ ಮಾಡಿಕೊಳ್ಳಲು ಸಿದ್ಧನಿಲ್ಲದ ಕಾರಣಕ್ಕಾಗಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಮತ್ತೊಬ್ಬ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್‌ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬೆಳವಣಿಗೆಯ ಹಿನ್ನೆಲೆಯಲ್ಲಿ ಅಲ್ಲಿನ ಜನರಿಗೆ ತಮ್ಮ ಅನಿಸಿಕೆ ಹೇಳಿಕೊಳ್ಳಲು ಅವಕಾಶ ನಿರಾಕರಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ. ತಮ್ಮ ಅಧಿಕಾರಕ್ಕಿಂತಲೂ ಅಭಿವ್ಯಕ್ತಿ ಸ್ವಾತಂತ್ರ್ಯವು ಅವರಿಗೆ ಮುಖ್ಯವಾಗಿ ಕಾಣಿಸಿದೆ. ಕಾಶ್ಮೀರದ ಐಎಎಸ್ ಅಧಿಕಾರಿ ಶಾ ಫೈಸಲ್ ಅವರು, ಕಾಶ್ಮೀರದಲ್ಲಿ ನಿಲ್ಲದ ಹಿಂಸಾಚಾರದ ಕಾರಣ ನೀಡಿ ಈ ವರ್ಷದ ಆರಂಭದಲ್ಲಿ ತಮ್ಮ ಸ್ಥಾನ ತ್ಯಜಿಸಿದ್ದರು. ಈ ಅಧಿಕಾರಿಗಳ ರಾಜೀನಾಮೆ, ಅಧಿಕಾರಸ್ಥರ ನೈತಿಕತೆಗೆ ಒಡ್ಡಿರುವ ಸವಾಲಿನ ರೂಪದಲ್ಲಿ ಇದೆ.

ದೇಶದ ಬಹುತ್ವ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯುಂಟಾಗಿರುವ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಈಗ ಐಎಎಸ್‌ ಹುದ್ದೆ ತ್ಯಜಿಸಿರುವ ಅಧಿಕಾರಿಗಳ ಧ್ವನಿಯೂ ಸೇರಿಕೊಂಡಿದೆ. ಉಜ್ವಲ ಭವಿಷ್ಯವಿದ್ದ ಯುವ ಅಧಿಕಾರಿಗಳು, ಅಧಿಕಾರ ತ್ಯಜಿಸಿ ಜನರ ಪ್ರತಿರೋಧದ ಕೂಗಿಗೆ ತಮ್ಮ ಧ್ವನಿಯನ್ನೂ ಸೇರಿಸಿದ್ದಾರೆ. ಇಂಥ ಸಂದರ್ಭ ಎದುರಾದಾಗ, ಅವರ ಮನವೊಲಿಸುವ ಪ್ರಯತ್ನ ಅಥವಾ ಅವರು ತಮ್ಮ ರಾಜೀನಾಮೆಗೆ ನೀಡಿರುವ ಕಾರಣಗಳ ಪರಾಮರ್ಶೆ ನಡೆಯಬೇಕಾಗಿತ್ತು. ದುರದೃಷ್ಟವಶಾತ್‌ ಅಂತಹ ಯಾವ ಪ್ರಯತ್ನವೂ ಕೇಂದ್ರ ಸರ್ಕಾರದ ವತಿಯಿಂದ ನಡೆದಂತಿಲ್ಲ. ಅದಕ್ಕೆ ಪ್ರತಿಯಾಗಿ, ಭಿನ್ನಮತ ಹೊಂದಿರುವ ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳಿಸಲು ಟೀಕಾಕಾರರು ಉತ್ಸುಕರಾಗಿದ್ದಾರೆ. ಐಎಎಸ್‌ ಅಧಿಕಾರಿಗಳ ರಾಜೀನಾಮೆಯು ಅವರಲ್ಲಿನ ಅಸಹಿಷ್ಣುತೆ ಹಾಗೂ ಎಡ ಮತ್ತು ಪ್ರಗತಿಪರರೊಂದಿಗೆ ಅವರು ಹೊಂದಿರುವ ಸಂಬಂಧಕ್ಕೆ ನಿದರ್ಶನವಾಗಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್‌ ಅವರಿಗೆ ಕಾಣಿಸಿದೆ. ಕರ್ನಾಟಕದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಅವರಿಗಂತೂ ಸೆಂಥಿಲ್‌ರ ನಡೆ ‘ರಾಜದ್ರೋಹ’ ಹಾಗೂ ಸ್ವೇಚ್ಛಾಚಾರ ಎನ್ನಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಾತ್ಮಕವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಜನಪ್ರತಿನಿಧಿಗಳ ನಿರ್ಧಾರವನ್ನು ಪ್ರಶ್ನಿಸುವುದು ‘ರಾಜದ್ರೋಹ’ ಎನ್ನುವುದು ಅವರ ವ್ಯಾಖ್ಯಾನ. ಈ ಪ್ರತಿಕ್ರಿಯೆಗಳು, ಯಾವ ಕಾರಣಗಳನ್ನು ನೀಡಿ ಸೆಂಥಿಲ್‌ ಹಾಗೂ ಕಣ್ಣನ್‌ ರಾಜೀನಾಮೆ ನೀಡಿರುವರೋ ಆ ಕಾರಣಗಳಿಗೆ ಪೂರಕವಾಗಿ ಇರುವಂತಿವೆ. ಕೇಂದ್ರದಲ್ಲಿ ಸಚಿವರೂ ಆಗಿದ್ದ ಹೆಗಡೆ ಅವರು, ತಾವು ಆಡಿರುವ ಅವೆಷ್ಟು ಮಾತುಗಳು ಸಂವಿಧಾನ ಪ್ರತಿಪಾದಿಸುವ ‘ಬಹುತ್ವ’ದ ಆಶಯಗಳಿಗೆ ಪೂರಕವಾಗಿವೆ ಎಂದು ಪರಿಶೀಲಿಸಿಕೊಳ್ಳುವ ಅಗತ್ಯವಿದೆ.

ಭಿನ್ನಮತಕ್ಕೆ ಅವಕಾಶ ಕೊಡದ ಸರ್ಕಾರದ ನೀತಿ ಕೂಡ ಪ್ರಜಾಸತ್ತಾತ್ಮಕವಾದುದೇನಲ್ಲ. ಸರ್ಕಾರದ ನೀತಿಪಾಲಕರಾದ ಅಧಿಕಾರಿಗಳೇ ತಮಗೆ ಉಸಿರುಗಟ್ಟಿಸುವ ಪರಿಸ್ಥಿತಿ ಇದೆ ಎಂದು ಹೇಳುವ ಸನ್ನಿವೇಶವು ದೇಶದ ಕಾರ್ಯಾಂಗ, ಆರ್ಥಿಕತೆ ಹಾಗೂ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಉನ್ನತ ಅಧಿಕಾರಿಗಳ ರಾಜೀನಾಮೆಯು ಪರ್ವವಾಗಿ ಬೆಳೆಯದಂತೆ ಸರ್ಕಾರ ಎಚ್ಚರ ವಹಿಸಬೇಕಾಗಿದೆ. ಆಡಳಿತದ ಚುಕ್ಕಾಣಿ ಹಿಡಿದವರು ವಿನಯ, ವಿಮರ್ಶೆಯ ಮಾರ್ಗ ಅನುಸರಿಸಬೇಕು. ತನ್ನ ನೀತಿಗೆ ಸಹಮತ ವ್ಯಕ್ತಪಡಿಸದವರನ್ನೆಲ್ಲ ನಿರಾಕರಿಸುವ ಇಲ್ಲವೇ ಹತ್ತಿಕ್ಕುವ ಧೋರಣೆ ಸರಿಯಲ್ಲ.   

ಪ್ರತಿಕ್ರಿಯಿಸಿ (+)