ಬುಧವಾರ, ನವೆಂಬರ್ 20, 2019
22 °C
ಪ‍ಠ್ಯದ ಯಾವುದೇ ವಿಷಯ ಅರಿಯಲು ಭಾಷೆಯ ತಳಪಾಯ ಬೇಕೇ ಬೇಕು

ಮಕ್ಕಳ ಪ್ರತಿಭೆ ಮತ್ತು ಭಾಷಾ ಕೌಶಲ

Published:
Updated:
Prajavani

‘ಇಂದಿನ ಮಕ್ಕಳು ಮಹಾಬುದ್ಧಿವಂತರು, ನಮಗೆ ಬರುತ್ತಿದ್ದ ಅಂಕಗಳ ಎರಡು– ಮೂರು ಪಟ್ಟು ಅಂಕಗಳನ್ನು ಗಳಿಸುತ್ತಾರೆ!’ ಎಂಬ ಹಿರಿಯರ ಉದ್ಗಾರಗಳನ್ನು ಕೇಳಿದರೆ, ಪಾಠ ಮಾಡುವ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡಿರುವ ನಮ್ಮಂತಹವರಿಗೆ ವಾಸ್ತವ ಬೇರೆಯದೇ ಇರುವುದು ತಿಳಿಯುತ್ತದೆ. ಮಕ್ಕಳು ಜಾಣರೆಂಬುದರಲ್ಲಿ ಸಂಶಯವಿಲ್ಲ. ಯಾಕೆಂದರೆ, ಅವರ ಕೈಗೆ ಯಾವ ಆಧುನಿಕ ಉಪಕರಣ ಕೊಟ್ಟರೂ ಕ್ಷಣಮಾತ್ರದಲ್ಲಿ ಅದನ್ನು ಬಳಸುವ ಎಲ್ಲಾ ವಿಧಾನಗಳನ್ನು ಅರಿತು ಪ್ರಯೋಗಕ್ಕೆ ಮುಂದಾಗುತ್ತಾರೆ. ಪ್ರಾಯೋಗಿಕವಾದ ಯಾವ ಕೌಶಲಗಳಲ್ಲೂ ಅವರು ಕಡಿಮೆಯಿಲ್ಲ. ಆದರೆ ಇಂತಹ ಪ್ರತಿಭಾನ್ವಿತ ಮಕ್ಕಳ ಭಾಷಾ ಸಾಮರ್ಥ್ಯ ನೋಡಿದರೆ ಯಾರಾದರೂ ತಲೆ ಚಚ್ಚಿಕೊಳ್ಳಬೇಕು. ಕನ್ನಡವಂತೂ ಕೇಳಲೇಬೇಕಿಲ್ಲ. ಮಕ್ಕಳ ಭಾಷಾ ಕೌಶಲಕ್ಕೆ ಧಕ್ಕೆ ಬಂದಿರುವುದಾದರೂ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆಗಳನ್ನೇ ಗಮನದಲ್ಲಿ ಇಟ್ಟುಕೊಂಡಂತೆ ಇರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಅಧ್ಯಯನದ ವಿಷಯಗಳಿಗೆ ಬಂದರೆ ವಿಸ್ತಾರವಾದ ಪರಿಧಿಯಿದೆ. ಮಕ್ಕಳಿಗೆ ಕಲಿತು ಮುಗಿಯುವುದಕ್ಕಿಲ್ಲ ಅನಿಸುವಷ್ಟು ಸಿಲೆಬಸ್ ಇದೆ. ಉಪನ್ಯಾಸಕ ವೃಂದದವರೂ ಸಿಲೆಬಸ್ ಪೂರ್ತಿ ಮಾಡುವಷ್ಟರಲ್ಲಿ ಹೈರಾಣಾಗುತ್ತಾರೆ. ಆದರೆ, ಭಾಷೆಯ ವಿಷಯಕ್ಕೆ ಬಂದರೆ ಹಾಗಲ್ಲ. ಪಿಯುಸಿ ಎರಡೂ ವರ್ಷಗಳ ಪಠ್ಯಪುಸ್ತಕಗಳನ್ನು ನೋಡಿದರೆ, ಅದರಲ್ಲಿ ಮೂಲ ಇಂಗ್ಲಿಷ್ ಪದ್ಯಗಳೋ ಪ್ರಬಂಧ, ಕಥೆಗಳೋ ಇರುವುದಕ್ಕಿಂತ ಹೆಚ್ಚಾಗಿ ಕನ್ನಡ, ತೆಲುಗಿನ ಅನುವಾದಿತ ಕೃತಿಗಳ ಸಂಖ್ಯೆಯೇ ಹೆಚ್ಚಾಗಿದೆ. ಹತ್ತನೆಯ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಈ ಪಠ್ಯದಲ್ಲಿ ಲವಲೇಶದಷ್ಟು ಆಸಕ್ತಿಯೂ ಮೂಡುವುದಿಲ್ಲ. ಅನುವಾದಿತ ಕೃತಿಗಳನ್ನು ಓದಬಾರದೆಂದು ಅಭಿಪ್ರಾಯವಲ್ಲ. ಆದರೆ ಕುವೆಂಪು, ತೇಜಸ್ವಿ, ಲಂಕೇಶ್ ಅವರಂತಹ ಕನ್ನಡ ಸಾಹಿತಿಗಳ ಕೃತಿಗಳನ್ನು ಕನ್ನಡದಲ್ಲೇ ಓದಿದಷ್ಟು ಸಂತೋಷ
ವನ್ನು ಅನುವಾದಿತ ಕೃತಿಗಳು ಕೊಡುತ್ತಿಲ್ಲ. ನಮ್ಮ ನೆಲದ ಕೃತಿಗಳನ್ನು ನಮ್ಮ ಭಾಷೆಯಲ್ಲೇ ಓದಿದರೆ ಅದರ ಸೌಂದರ್ಯ ಬೇರೆ. ಇದಕ್ಕೂ, ತರಗತಿಯಲ್ಲಿ ಆಸಕ್ತಿದಾಯಕವಾಗಿ ಪಾಠ ಮಾಡುವುದು ಶಿಕ್ಷಕರ ಕೈಯಲ್ಲಿದೆ ಎಂಬ ಸುಲಭ ಪರಿಹಾರವನ್ನು ಯಾರೇ ಆದರೂ ಕೊಡಬಹುದು. ಆದರೆ ಪಾಠ ಬೋಧಿಸುವವರ ಸಂಕಟ ಅನುಭವಿಸಿದವರಿಗೇ ಅರ್ಥವಾಗಬೇಕಷ್ಟೆ.

ಕಾಲೇಜು ಮೆಟ್ಟಿಲು ಹತ್ತಿದ ತಕ್ಷಣ ಭಾಷಾ ತರಗತಿಗಳನ್ನಾಗಲೀ, ಉಪನ್ಯಾಸಕರನ್ನಾಗಲೀ ಕಡೆಗಣಿಸುವ ಸ್ಥಿತಿ ಇಂದಿದೆ. ಮಕ್ಕಳಿಗೂ ಜೆಇಇ, ನೀಟ್‌ಗೆ ಸಂಬಂಧಿಸಿದ ಪಠ್ಯಗಳನ್ನು ಬೋಧಿಸು

ವವರೇ ಮುಖ್ಯವಾಗುತ್ತಾರೆ ಹೊರತು, ಆ ವಿಷಯಗಳಿಗೂ ಭಾಷೆಯ ತಳಪಾಯಬೇಕು ಎಂಬ ಅರಿವು ಇರುವುದಿಲ್ಲ. ಅವರ ಪ್ರಕಾರ, ಭಾಷಾ ಶಿಕ್ಷಕರು ಯಾರೆಂದರೆ ಸೈನ್ಸ್, ಕಾಮರ್ಸ್ ಓದಲಾಗದೇ ಆರ್ಟ್ಸ್‌ ಓದಿರುವ ದಡ್ಡರು! ಈ ಮನಃಸ್ಥಿತಿಯನ್ನೇ ಅವರಲ್ಲಿ ಮೂಡಿಸುವ ಮಂದಿಗೇನೂ ಕಡಿಮೆಯಿಲ್ಲ. ಉಳಿದ ವಿಷಯಗಳ ಬೋಧಕರು ಕೊಟ್ಟಂತೆ ಬರವಣಿಗೆ ಕೆಲಸವನ್ನು ಭಾಷಾ ಶಿಕ್ಷಕರು ಕೊಡುವಂತಿಲ್ಲ. ಕೊಟ್ಟರೂ ಬರೆದುಕೊಂಡು ಬರುವ ಮಕ್ಕಳ ಸಂಖ್ಯೆ ಬೆರಳೆಣಿಕೆಯದು.

ಪರೀಕ್ಷೆಯ ಸ್ಥಿತಿಯಂತೂ ಇನ್ನೂ ದಯನೀಯ. ವ್ಯಾಕರಣದಲ್ಲೇ ಮಕ್ಕಳು ಐವತ್ತು ಅಂಕಗಳನ್ನು ಗಳಿಸಿ ಉತ್ತೀರ್ಣರಾಗುವಷ್ಟು ಸರಳವಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನಿಜವಾಗಿ ಒಂದು ಪದ ಪ್ರಯೋಗದಲ್ಲಿ ಅವರೆಷ್ಟು ನಿಪುಣರು ಅಥವಾ ತಮ್ಮದೇ ಆದ ವಾಕ್ಯ
ಗಳನ್ನು ರಚಿಸುವಲ್ಲಿ ಅವರ ಸಾಮರ್ಥ್ಯವೇನು ಎಂಬುದನ್ನು ಪರೀಕ್ಷಿಸುವ ಪ್ರಶ್ನೆಗಳಿಲ್ಲ. ಬದಲಾಗಿ, ವ್ಯಾಕರಣಕ್ಕೆ ಕೇಳುವ ಎಲ್ಲ ಪ್ರಶ್ನೆಗಳೂ ಅವರು ಓದಿರುವ ಪಠ್ಯದಿಂದಲೇ ಆಗಬೇಕು. ಕರ್ತರಿ ಕರ್ಮಣಿ ಪ್ರಯೋಗವಾಗಲೀ, ಪದಪುಂಜಗಳಾಗಲೀ ಹೆಚ್ಚೇಕೆ ಬಿಡಿಯಾದ ಪದಗಳನ್ನು ಜೋಡಿಸಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸುವುದಕ್ಕಾಗಲೀ ಪಠ್ಯದಿಂದಲೇ ಆಯ್ಕೆ ಮಾಡಿಕೊಡಬೇಕು. ಹೊಸ ಪದ್ಯ ಓದಿ ಉತ್ತರ ಬರೆಯಬೇಕಾದದ್ದನ್ನೂ ವರ್ಕ್‌ಬುಕ್‌ನಲ್ಲಿ ಕೊಡಲಾಗಿರುವ ಪದ್ಯಗಳಿಂದಲೇ ಕೊಡಬೇಕು. ಅಲ್ಲಿಗೆ ‘ಅನ್‌ನೋನ್ ಪ್ಯಾಸೇಜ್, ಪೊಯೆಮ್’ ಎಂಬುದಕ್ಕೆ ಏನರ್ಥ ಉಳಿಯುತ್ತದೆ? ಪ್ರತೀ ಪ್ರಶ್ನೆಯೂ ಮಕ್ಕಳ ನೆನಪಿನಶಕ್ತಿಯ ಪರೀಕ್ಷೆಯೇ ಹೊರತು ಅವರ ನಿಜವಾದ ಭಾಷಾ ಸಾಮರ್ಥ್ಯವನ್ನು ಈ ಮಾದರಿಯಲ್ಲಿ ಅಳೆದು ನೋಡಲಾಗದು. ಹಾಗೆಂದು ಇಷ್ಟು ಸರಳವಾದ ಪ್ರಶ್ನೆಗಳನ್ನಾದರೂ ಅವರು ಸರಿಯಾಗಿ ಅರ್ಥ ಮಾಡಿಕೊಂಡು ಬರೆಯುತ್ತಾರೆಯೇ ಎಂದರೆ ಅದೂ ಇಲ್ಲ. ಅಂತೂ ಮೂವತ್ತೈದಕ್ಕಿಂತ ಹೆಚ್ಚು ಗಳಿಸಿ
ಉತ್ತೀರ್ಣರಾಗುವುದಕ್ಕೆ ತೊಂದರೆಯಿಲ್ಲ. ಶಿಕ್ಷಣವೆಂದರೆ ತೇರ್ಗಡೆಯಾಗುತ್ತಾ ಸಾಗುವುದಷ್ಟೇ ಅಲ್ಲ ಅಥವಾ ಅತಿಹೆಚ್ಚು ಅಂಕಗಳನ್ನು ಗಳಿಸಿ ಬಿಂಕ ತೋರುವುದೂ ಅಲ್ಲ. ಭಾಷೆಯೆಂಬುದು ಕಲಿಕೆಯ ತಳಹದಿ. ಅದು ಸುಭದ್ರವಾಗದ ಹೊರತು ಮುಂದಿನ ದಾರಿ ಕಠಿಣವಾಗಿರುತ್ತದೆ. ಪದವಿ ತರಗತಿಗಳಿಗೆ ಬೋಧಿಸುವವರು ಆ ಹಂತಕ್ಕಿಂತ ಮೊದಲಿನವರನ್ನು ದೂಷಿಸುತ್ತಾರೆ. ಆದರೆ ಒಟ್ಟು ವ್ಯವಸ್ಥೆಗೇ ಗೆದ್ದಲು ಬಂದಿರುವಾಗ ಸುಧಾರಣೆಯ ಹೆಜ್ಜೆ ಎಲ್ಲಿಂದ? ‘ಶಿಕ್ಷಣ ಕ್ಷೇತ್ರದಲ್ಲಿನ ತಪ್ಪುಗಳು ವರ್ಷಾನು
ಗಟ್ಟಲೆ ಅನಾಥ ಪ್ರೇತಗಳಾಗಿ ತಿರುಗುತ್ತವೆ’ ಎಂಬ ಶಿವರಾಮ ಕಾರಂತರ ಮಾತನ್ನು ಮರೆತಿದ್ದೇವೆಯೇ? ಉತ್ತಮ ಭಾಷೆಯ ಹಿಡಿತ ನಮಗಿದ್ದರೆ ಅದೂ ನಮಗೊಂದು ಬಲವೇ ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸುವ ಹೊಣೆಗಾರಿಕೆ ಎಲ್ಲರದ್ದೂ ಆಗಿದೆ.

–ಲೇಖಕಿ: ಉಪನ್ಯಾಸಕಿ, ವಿದ್ಯಾನಿಧಿ ಪದವಿಪೂರ್ವ ಕಾಲೇಜು, ತುಮಕೂರು

ಪ್ರತಿಕ್ರಿಯಿಸಿ (+)