ಶನಿವಾರ, ನವೆಂಬರ್ 23, 2019
23 °C

ಕಪಾಟು

Published:
Updated:
Prajavani

ನೀವೂ ಓಡಬಹುದು...

ಲೇ: ಪ್ರಮೋದ್ ದೇಶಪಾಂಡೆ
ಪ್ರ: ಸಾವಣ್ಣ ಎಂಟರ್ ಪ್ರೈಸಸ್, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು–560004

ಮೊ: 90363 12786

ಪು:152

ಬೆ: 150

ಧಾವಂತದ ಜೀವನದಲ್ಲಿ ಮನುಷ್ಯ ಹಣ, ಅಧಿಕಾರ, ಅಂತಸ್ತು, ಬಡ್ತಿ, ಕೆಲಸಗಳ ಬೆನ್ನತ್ತಿ ದೈಹಿಕ, ಮಾನಸಿಕ ಆರೋಗ್ಯದ ಕೂಗನ್ನು ಕಡೆಗಣಿಸಿರುವುದು ನಿತ್ಯಸತ್ಯ. ಅಂತೆಯೇ ನಮ್ಮೆಲ್ಲ ಯಶಸ್ವಿ ಚಟುವಟಿಕೆಗಳಿಗೆ ದೇಹ ಮತ್ತು ಮನಸಿನ ಆರೋಗ್ಯ ಅಷ್ಟೇ ಮುಖ್ಯ. ಇದಕ್ಕೆ ಕ್ರೀಡೆ, ಕಸರತ್ತು, ನಡಿಗೆ, ವ್ಯಾಯಾಮ, ಓಟ ಸಹಕಾರಿ. ಈ ಕುರಿತ ಮನೋಜ್ಞ ವಿಶ್ಲೇಷಣಾ ಕೃತಿ ‘ನೀವೂ ಓಡಬಹುದು’.

ಓಟಕ್ಕೆ ಯಾವುದೇ ವಯಸ್ಸು, ಲಿಂಗ, ಎತ್ತರ, ಆಕಾರ ಇತ್ಯಾದಿಗಳ ಹಂಗಿಲ್ಲ. ಮಾತ್ರವಲ್ಲ ಅದು ಆರೋಗ್ಯದ ರಹದಾರಿ ಹಾಗೂ ಸಾಧನೆಯ ಮಾಧ್ಯಮವೂ ಹೌದು. ಈ ಕುರಿತ ಪೂರ್ವಾಗ್ರಹ, ಪ್ರಶ್ನೆಗಳಿಗೆ ಪರಿಹಾರ ಸೂಚಿಸಿದ್ದಾರೆ ಪ್ರಮೋದ್ ದೇಶಪಾಂಡೆ. ಎಲ್ಲರೂ ಓಡಬಹುದಾದ ಓಟದ ಅನಂತ ಲಾಭಗಳು, ಯೋಜನೆ, ಪ್ರಾಮುಖ್ಯತೆ, ಅದು ದೇಹ, ಮನದ ಮೇಲೆ ಬೀರಬಹುದಾದ ಉಲ್ಲಸಿತ ಪರಿಣಾಮಗಳನ್ನು ಸರಳವಾಗಿಯೂ, ವೈಜ್ಞಾನಿಕವಾಗಿಯೂ ಚಿತ್ರಿಸಿದ್ದಾರೆ. ಜೊತೆಗೆ ಉಪಯುಕ್ತ ಟಿಪ್ಪಣಿಗಳು, ಸಾಧಕರ ಪರಿಚಯ, ವೇಳಾ ಪಟ್ಟಿ, ಚಿತ್ರಗಳ ಅಳವಡಿಕೆ ಓದಿನ ಅಂದ ಹೆಚ್ಚಿಸಿವೆ. ಕ್ರೀಡಾಪಟುಗಳಿಗೆ ಮಾತ್ರವಲ್ಲದೆ ನಿತ್ಯದ ಆರೋಗ್ಯ ಕಾಳಜಿಗೆ ಎಲ್ಲರಿಗೂ ನೆರವಾಗುವ ಪುಸ್ತಕವಿದು.

-------

ಡಾ.ಬಿ.ಆರ್. ಅಂಬೇಡ್ಕರ್ ಪುಸ್ತಕ ಪ್ರೀತಿ
ಲೇ: ಎಚ್.ಟಿ. ಪೋತೆ
ಪ್ರ: ಕುಟುಂಬ ಪ್ರಕಾಶನ, ಅಭಯಪೂರ್ಣವರ್ಷ, ಪೂಜಾ ಕಾಲೋನಿ, ಕಲಬುರಗಿ
ಮೊ: 94819 08555

ಪು: 106
₹100

ಅಂಬೇಡ್ಕರ್ ಅವರಿಗೆ ದಾದಾ ಕೆಳೂಸ್ಕರ ನೀಡಿದ ಬುದ್ಧನ ಜೀವನ ಚರಿತ್ರೆಗೆ ಸಂಬಂಧಿಸಿದ ಪುಸ್ತಕ ಬಾಬಾವಸಾಹೇಬರ ಜೀವನದ ತಿರುವಿನ ಕಾರಣಗಳಲ್ಲೊಂದು. ಅವರು ಉತ್ಕಟ ಪುಸ್ತಕ ಪ್ರೇಮಿ ಮತ್ತು ಐವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸ್ವತಂತ್ರ ಗ್ರಂಥಾಲಯ ಹೊಂದಿದ್ದ ಜಗತ್ತಿನ ಏಕೈಕ ವ್ಯಕ್ತಿ. ಇಂತಹದ್ದೇ ವಿಷಯಗಳ ಸಾರ ಸಂಗ್ರಹ ಈ ಪುಸ್ತಕ.

ಅಂಬೇಡ್ಕರೋತ್ತರ ದಲಿತ ಭಾರತದ ಸ್ಥಿತಿ, ಅವರನ್ನು ಪ್ರಭಾವಿಸಿದ ವ್ಯಕ್ತಿಗಳು, ಘಟನೆ, ಮತ್ತವರ ಜೀವನ ಮೌಲ್ಯಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ ಲೇಖಕರು. ಓದಿದಂತೆಲ್ಲ ಅಂಬೇಡ್ಕರರ ಜೀವನ ಆದರ್ಶವೂ, ಸಾಧನೆಯ ಸಫಲತೆಗೆ ಅದು ಕೈಮರವಾಗಬಲ್ಲದು ಎನಿಸುವುದೂ ಸುಳ್ಳಲ್ಲ. ಭೂತ, ವರ್ತಮಾನಕ್ಕೆ ಸಂಬಂಧಿಸಿದ ಸಂಗತಿಗಳನ್ನು ಕುರಿತ ಲೇಖಕರ ವಿಚಾರಧಾರೆಯೂ ಇಲ್ಲಿದೆ. ದಲಿತರ ನೋವು, ಸಂಘರ್ಷ, ಮೇಲ್ಜಾತಿಗಳಿಂದ ಅನುಭವಿಸಿದ, ವಾಸ್ತವದಲ್ಲೂ ಹಸಿಯಾಗಿರುವ ಹಿಂಸೆ, ತುಳಿಯುವಿಕೆಗಳ ನವಿರು ಚಿತ್ರಣವೂ ಈ ಪುಸ್ತಕದ ವಸ್ತು. ಅದನ್ನರಿಯುವಲ್ಲಿ ಓದಲೇಬೇಕೆನಿಸುವ ಪುಸ್ತಕವಿದು.

----

ಪ್ರೀತಿ ಮಮತೆಗಳ ನಡುವೆ
ಲೇ: ವಿ.ವಿ. ಗೋಪಾಲ್
ಪ್ರ: ಕಾವ್ಯಕಲಾ ಪ್ರಕಾಶನ
ಮೊ: ‌99641 24831

ಪು:‌152
₹ ‌130

ವೈವಿಧ್ಯಮಯ ಕಥಾವಸ್ತುಗಳನ್ನೊಳಗೊಂಡ ಹದಿನೈದು ಕಥೆಗಳ ಗುಚ್ಛ ‘ಪ್ರೀತಿ ಮಮತೆಗಳ ನಡುವೆ’. ಸರಳ ನಿರೂಪಣಾ ಶೈಲಿ ಓದಿನ ಆಸಕ್ತಿ ಹೆಚ್ಚಿಸುತ್ತದೆ. ಕೌಟುಂಬಿಕ ವಿಘಟನೆ, ಅಗಲಿದ ಸಂಬಂಧ, ಉಳ್ಳವರ ಸ್ವಾರ್ಥ–ಕುತಂತ್ರ, ಅದಕ್ಕೆ ಬಲಿಯಾದ ಇಲ್ಲದವರ ಪಾಡು, ನೋವಿನಲ್ಲೂ ನಗುವ, ಅಂತ್ಯದಲ್ಲೂ ಆರಂಭ ಕಂಡ, ಬದುಕಿನ ಬಗ್ಗೆ ಭರವಸೆ ತುಂಬುವ ಸಾರ್ವಕಾಲಿಕ ಕಥೆಗಳಿವೆ ಇಲ್ಲಿ. ಕೆಲ ಕಥೆಗಳು ಸಾಮಾಜಿಕ ಕಳಕಳಿ, ಸಂಬಂಧಗಳ ಮಹತ್ವ ಸಾರಿದರೆ, ಮತ್ತೆ ಕೆಲವು ನಿಗೂಢ, ಆಸಕ್ತಿದಾಯಕ ಕುತೂಹಲ ಕೆರಳಿಸುವ, ಉಸಿರು ಬಿಗಿ ಹಿಡಿದು ಓದಿಸುವ ಪತ್ತೇದಾರಿ ಕಥೆಗಳು. ಈ ಎಲ್ಲವೂ ಪುಸ್ತಕದ ಒಟ್ಟಂದವನ್ನು ಹೆಚ್ಚಿಸಿವೆ. ಮೇಲ್ನೋಟಕ್ಕೆ ಕಲ್ಪಿತ ಕಥೆಗಳಂತೆ ಭಾಸವಾದರೂ ವಾಸ್ತವಕ್ಕೆ ಹತ್ತಿರವಿವೆ. ಅನಿರೀಕ್ಷಿತ ಅವಘಡ, ಅಪಘಾತಗಳೆಡೆ ಅನುಸರಿಸಬೇಕಾದ ಜಾಣ್ಮೆಯ ನಿರ್ಣಯಗಳನ್ನು ಲೇಖಕರು ತಮ್ಮ ಕಥೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಒಮ್ಮೆ ಹಿಡಿದರೆ ಓದಿಯೇ ಕೆಳಗಿಡಬೇಕೆನಿಸುವ ಪುಸ್ತಕವಿದು.

------

ಸಮಾಜಮುಖಿ
ಲೇ: ಈ.ಧನಂಜಯ ಎಲಿಯೂರು
ಪ್ರ: ಪ್ರಗತಿ ಪ್ರಕಾಶನ, ಮೈಸೂರು
ಮೊ: 0821 4287558
ಪು:276
₹ 200

‘ಸಮಾಜಮುಖಿ’ ಹೆಸರೇ ಸೂಚಿಸುವಂತೆ ಸಾಮಾಜಿಕ ಕಳಕಳಿಯಿಂದ ಬರೆದ, ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡು ಮೆಚ್ಚುಗೆ ಪಡೆದ ವೈಚಾರಿಕ ಲೇಖನಗಳ ಸಂಗ್ರಹ. ಸಮಾಜದ ಒಳಹುಗಳು, ಪೆಡಂಭೂದಂತಹ ಸಮಸ್ಯೆ, ಸವಾಲುಗಳು, ಪರಿಹಾರ ಮುಂತಾದವುಗಳನ್ನು ಬರಹದ ಮೂಲಕ ತಿಳಿಸಲು ಪ್ರಯತ್ನಿಸಿದ್ದಾರೆ ಲೇಖಕರು.

ಸಂಕುಚಿತ ಮನಸ್ಥಿತಿ ಅಥವಾ ದೃಷ್ಟಿಕೋನ, ಮೌಢ್ಯ, ಲೇಖಕರು ಕಂಡಂತೆ ಕವಿಗಳು ಮತ್ತವರ ಒಡನಾಡಿಗಳು, ಬಾಲ್ಯದ ಬಗೆಗಿನ ಕಾಳಜಿಗಳೇ ಇಲ್ಲಿನ ಬಹುಪಾಲು ಲೇಖನಗಳ ವಸ್ತು. ಹಲವು ಪ್ರಕಟಿತ ಬರಹಗಳಿಗೆ ಲೇಖಕರ ಪ್ರತಿಕ್ರಿಯೆ, ನಿಷ್ಠುರ ಬರವಣಿಗೆಯ ಸಂಗ್ರಹವೂ ಇಲ್ಲಿದೆ. ಮಿಗಿಲಾಗಿ ಕಥೆ, ಕಾದಂಬರಿಗಳ ಮೂಲಕ ಜೀವನದ, ಸಮಾಜದ ವಿವಿಧ ಮಜಲುಗಳನ್ನು ಪರಿಚಯಿಸಿದ ಜೀವಪರ ಚೇತನಗಳ ಪರಿಚಯವೂ ಪುಸ್ತಕದ ಭಾಗವಾಗಿದೆ. ಅಲ್ಲಲ್ಲಿ ಸ್ವಗತವೆಂಬಂತೆ ಭಾಸವಾಗುವ ಇಲ್ಲಿನ ಲೇಖನಗಳು ನಮ್ಮ ಅನುಭವಕ್ಕೂ ನಿಲುಕಿದರೆ ಆಶ್ಚರ್ಯವೇನಿಲ್ಲ. ವಿಷಯ ವೈವಿಧ್ಯತೆ ಓದನ್ನು ಆಸಕ್ತಿದಾಯಕವಾಗಿಸುತ್ತದೆ.

ಪ್ರತಿಕ್ರಿಯಿಸಿ (+)