ಶುಕ್ರವಾರ, ನವೆಂಬರ್ 15, 2019
22 °C

ಪುಕ್ಕಲು ಸಂಸದರು, ಬಲಹೀನ ಮುಖ್ಯಮಂತ್ರಿ: ಸಿದ್ದರಾಮಯ್ಯ ವಾಗ್ದಾಳಿ

Published:
Updated:

ಮಂಡ್ಯ: ‘ಬಿ.ಎಸ್‌.ಯಡಿಯೂರಪ್ಪ ಅತ್ಯಂತ ಬಲಹೀನ ಮುಖ್ಯಮಂತ್ರಿ (ಮೋಸ್ಟ್‌ ವೀಕೆಸ್ಟ್‌ ಸಿಎಂ). ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಪುಕ್ಕಲರು. ಹೀಗಾಗಿ ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಒಂದೂವರೆ ತಿಂಗಳಾದರೂ ಕೇಂದ್ರ ಸರ್ಕಾರದಿಂದ ಇನ್ನೂ ಒಂದು ರೂಪಾಯಿ ಸಹಾಯ ಬಂದಿಲ್ಲ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮಂಡ್ಯ ಜಿಲ್ಲೆಯವರಾದ ಯಡಿಯೂರಪ್ಪ ಅವರಿಗೆ ಗಡುಸು ಇರಬೇಕಾಗಿತ್ತು. ಸಂತ್ರಸ್ತರಿಗೆ ಸಹಾಯ ಕೊಡಿ ಎಂದು ಗಡುಸಿನಿಂದ ಕೇಳಬೇಕಾಗಿತ್ತು. ಆದರೆ ಮಂತ್ರಿಗಳಾಗಲೀ, ಸಂಸದರಾಗಲೀ ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ಸಂತ್ರಸ್ತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಜನದ್ರೋಹಿ ಸರ್ಕಾರವನ್ನು ನಾನು ಹಿಂದೆಂದೂ ನೋಡಿಲ್ಲ’ ಎಂದು ಆರೋಪಿಸಿದರು.

‘ಪ್ರವಾಹದಿಂದ ₹ 37 ಸಾವಿರ ಕೋಟಿ ಹಾನಿಯಾಗಿದೆ. ರಾಜ್ಯದಲ್ಲಿ 25 ಮಂದಿ ಬಿಜೆಪಿ ಸಂಸದರಿದ್ದಾರೆ, ಅವರಿಗೆ ಜವಾಬ್ದಾರಿ ಇಲ್ಲ. 105 ವರ್ಷಗಳ ನಂತರ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದ ನೆರೆ ಬಂದಿದೆ. ಪ್ರಧಾನಮಂತ್ರಿ ರಾಜ್ಯಕ್ಕೆ ಬಂದು ಪರಿಸ್ಥಿತಿಯ ಅವಲೋಕನ ಮಾಡಬೇಕಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಡವರ ಮೇಲೆ ಕಾಳಜಿ ಇಲ್ಲ’ ಎಂದರು.

ಹಣಕಾಸು ಸ್ಥಿತಿ ಅರ್ಥವಾಗಿಲ್ಲ: ‘ಜನವಿರೋಧಿಯಾಗಿರುವ ಕೇಂದ್ರ ಸರ್ಕಾರ ಇಲ್ಲಸಲ್ಲದ ನೆಪ ಹೇಳಿ ಅನುದಾನಗಳನ್ನು ವಾಪಸ್‌ ಪಡೆಯುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜ್ಯುದ ಹಣಕಾಸು ಸ್ಥಿತಿ ಅರ್ಥವಾಗಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ’ ಎಂದು ಆರೋಪಿಸಿದರು.

ಮಾತೃಹೃದಯಿ ಮನಮೋಹನಸಿಂಗ್‌ : ‘2009ರಲ್ಲಿ ಇದೇ ಬಿ.ಎಸ್‌.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು, ಮನಮೋಹನ್‌ ಸಿಂಗ್‌ ಪ್ರಧಾನಮಂತ್ರಿಯಾಗಿದ್ದರು, ನಾನು ವಿರೋಧ ಪಕ್ಷದ ನಾಯಕನಾಗಿದ್ದೆ. ಆಗಲೂ ಉತ್ತರ ಕರ್ನಾಟಕದಲ್ಲಿ ನೆರೆ ಬಂದಿತ್ತು. ನಾನು ಮನವಿ ಮಾಡಿದ 24 ಗಂಟೆಯೊಳಗೆ ಮನಮೋಹನ ಸಿಂಗ್‌ ವೈಮಾನಿಕ ಸಮೀಕ್ಷೆ ನಡೆಸಿ ಸ್ಥಳದಲ್ಲೇ ₹ 1,400 ಕೋಟಿ ಹಣ ಕೊಟ್ಟರು, ಅದು ಮಾತೃ ಹೃದಯ.

ಬಾಡಿ ಬಿಲ್ಡರ್‌ಗಳಿಗೂ  56 ಇಂಚಿನ ಎದೆ ಇದೆ

ಈಗಿನ ಪ್ರಧಾನಮಂತ್ರಿಗೆ 56 ಇಂಚಿನ ಎದೆ ಇದೆ ಎನ್ನುತ್ತಾರೆ. ಬಾಡಿ ಬಿಲ್ಡರ್‌ಗಳಿಗೂ ಎದೆ ಇರುತ್ತದೆ. ಆದರೆ ಎದೆಯೊಳಗಿನ ಹೃದಯಕ್ಕೆ ಮಾತೃ ಹೃದಯವಿಲ್ಲ. ಬಡವರ ಮೇಲೆ ಕಾಳಜಿ ಇಲ್ಲ’ ಎಂದು ವ್ಯಂಗ್ಯವಾಡಿದರು.

ಪ್ರತಿಕ್ರಿಯಿಸಿ (+)