ಶುಕ್ರವಾರ, ನವೆಂಬರ್ 15, 2019
22 °C

ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಸಿಗಲಿ

Published:
Updated:
Prajavani

ಮಂಡ್ಯ: ಖಾಸಗಿ ಕಂಪನಿಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ನೀಡಬೇಕು, ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಕದಂಬ ಸೈನ್ಯ ಸದಸ್ಯರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

2017ರಲ್ಲಿ ಪರಿಷ್ಕೃತ ವರದಿಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿತ್ತು. ಆದರೆ ಅದನ್ನು ಜಾರಿ ಮಾಡಲಿಲ್ಲ. ಖಾಸಗಿ ಉದ್ಯಮಗಳು ಕನ್ನಡಿಗರಿಗೆ ಉದ್ಯೋಗ ನೀಡಿದರೆ ಕನಿಷ್ಠ ವೇತನ, ಕಾರ್ಮಿಕ ಕಾನೂನು ಅನ್ವಯಿಸುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಹೊರ ರಾಜ್ಯದವರಿಗೆ ಸಿ, ಡಿ ದರ್ಜೆ ಉದ್ಯೋಗ ನೀಡಿ ಕಡಿಮೆ ಸಂಬಳದಲ್ಲಿ ಹೆಚ್ಚು ಕೆಲಸ ತೆಗೆದುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಮೂರು ದಶಕದಿಂದ ಹೋರಾಟ ಮಾಡುತ್ತಿದ್ದರೂ ಆಡಳಿತ ನಡೆಸಿದ ಸರ್ಕಾರಗಳು ಕಾಯ್ದೆ ಜಾರಿಗೆ ತರದೆ ನಿರ್ಲಕ್ಷ್ಯ ಧೋರಣೆ ತಳೆದಿವೆ. ಆಂಧ್ರಪ್ರದೇಶ ಶೇ 75, ಗೋವಾ ಶೇ 80 ಹಾಗೂ ವಿವಿಧ ರಾಜ್ಯಗಳು ಸ್ಥಳೀಯರಿಗೆ ಉದ್ಯೋಗ ನೀಡಲು ಕಾಯ್ದೆಗಳನ್ನು ಜಾರಿಗೆ ತರುತ್ತಿವೆ. 2011ರ ಜನಗಣತಿ ಪ್ರಕಾರ ಶೇ 50ಕ್ಕೂ ಹೆಚ್ಚು ವಲಸಿಗರು ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಆದರೆ ಕನ್ನಡಿಗರು ಕೆಲಸಕ್ಕಾಗಿ ಪರದಾಡುತ್ತಿದ್ದಾರೆ ಎಂದು ದೂರಿದರು.

ಉದ್ಯೋಗ, ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊರ ರಾಜ್ಯದವರಿಗೆ ಅವಕಾಶಗಳು ಸಿಗುತ್ತಿವೆ. ಇದನ್ನು ಪರಿಶೀಲಿಸಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲ್ಲಿಲ್ಲದ ಹಾವಿನಂತಾಗಿದ್ದು, ಮೊದಲು ಇದಕ್ಕೆ ಕಾನೂನು ಬಲ ತುಂಬಬೇಕು. ಸ್ಥಳೀಯರು ಎಂದು ಪರಿಗಣಿಸಲು ಇದ್ದ ಮಾನದಂಡವನ್ನು 15ವರ್ಷದಿಂದ 10ವರ್ಷಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದರು.

ಅನ್ಯ ಭಾಷಿಕರಿಂದ ನಿರಂತರವಾಗಿ ಕನ್ನಡಿಗರ ಉದ್ಯೋಗ ಕಸಿಯುವ ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ಸರ್ಕಾರ ಕಾಯ್ದೆಯನ್ನು ಜಾರಿಗೆ ತರದಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಕಂಪನಿಗಳು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಕೂಡಲೇ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕದಂಬ ಸೈನ್ಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್‌, ಬಾಬು, ಎಂ.ಕಾಂತರಾಜು, ಭಗವಾನ್‌, ಚಂದ್ರಶೇಖರ್‌ ಇದ್ದರು.

ಪ್ರತಿಕ್ರಿಯಿಸಿ (+)