ಗುರುವಾರ , ನವೆಂಬರ್ 21, 2019
27 °C

ಚಲುವರಾಯಸ್ವಾಮಿ, ನಿಮ್ಮ ಪಕ್ಷ ಯಾವುದು? : ಶಾಸಕ ಸಿ.ಎಸ್‌.ಪುಟ್ಟರಾಜು ಪ್ರಶ್ನೆ

Published:
Updated:
Prajavani

ಮಂಡ್ಯ: ‘ಎನ್‌.ಚಲುವರಾಯಸ್ವಾಮಿ ಅವರು ಯಾವ ಪಕ್ಷದಲ್ಲಿದ್ದಾರೆ ಎಂಬುದನ್ನು ಮೊದಲು ಹೇಳಬೇಕು. ಬೆಳಿಗ್ಗೆ ಸಿದ್ದರಾಮಯ್ಯ ಅವರ ಜೊತೆಗಿದ್ದರೆ, ರಾತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮನೆಯಲ್ಲಿರುತ್ತಾರೆ’ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಬುಧವಾರ ಆರೋಪಿಸಿದರು.

ಪಾಂಡವಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡಿದವರು ಮನೆಗೆ ಹೋಗಿದ್ದಾರೆ. ಅಂಬರೀಷ್‌ ಅಜಾತಶತ್ರು, ಅವರ ನಾಮಬಲದಿಂದ ಸುಮಲತಾ ಅವರು ಗೆಲುವು ಸಾಧಿಸಿದ್ದಾರೆ. ನಿಖಿಲ್‌ ಸೋಲಿಗೆ ನಾನೇ ಹೊಣೆ ಹೊತ್ತುಕೊಂಡಿದ್ದೇನೆ. ಅದರ ಬಗ್ಗೆ ಬೇರೊಬ್ಬರಿಂದ ಹೇಳಿಸಿಕೊಳ್ಳಬೇಕಾಗಿಲ್ಲ’ ಎಂದು ಆರೋಪಿಸಿದರು.

‘ಚಲುವರಾಯಸ್ವಾಮಿ ಬಾಳೆ ಎಲೆ ಆಗಬೇಕು, ಎಂಜಲು ಎಲೆ ಆಗಬಾರದು. ಸಿದ್ದರಾಮಯ್ಯ ಅವರ ಪಕ್ಕದಲ್ಲಿ ಕುಳಿತು ಯಡಿಯೂರಪ್ಪ ಅವರನ್ನು ಬೈಯ್ಯುವಂತೆ ಮಾಡುತ್ತಾರೆ. ಮತ್ತೆ ಯಡಿಯೂರಪ್ಪ ಅವರ ಬಳಿ ಹೋಗುತ್ತಾರೆ. ಚಲುವರಾಯಸ್ವಾಮಿ ನಾಟಕ ಮಂಡಳಿ ಮನ್‌ಮುಲ್‌ನಲ್ಲಿ ಗೆದ್ದ ನಿರ್ದೇಶಕರನ್ನು ವಜಾ ಮಾಡಲು ಹೊರಟಿದೆ. ಅಧಿಕಾರಿಗಳು ಸಹ ಇದಕ್ಕೆ ಸಹಕಾರ ನೀಡುತ್ತಿದ್ದಾರೆ’ ಎಂದರು.

‘ದೇವೇಗೌಡರ ಕುಟುಂಬ ನನಗೆ ಎಂದಿಗೂ ಕಿರುಕುಳ ಕೊಟ್ಟಿಲ್ಲ. ಜೆಡಿಎಸ್‌ ಪಕ್ಷ ನನಗೆ ಶಾಸಕ, ಸಂಸದ, ಸಚಿವನ ಪಟ್ಟ ಕೊಟ್ಟಿದೆ. ಚಲುವರಾಯಸ್ವಾಮಿ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರ ನಡುವೆ ಇರುವ ಸಂಬಂಧವನ್ನು ಹಾಳು ಮಾಡಲು ಹುನ್ನಾರ ಮಾಡುತ್ತಿದ್ದಾರೆ. ಕಳೆದ ವಿಧಾನಸಬಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೂಡಲೇ ಮೈಷುಗರ್‌ ಕಾರ್ಖಾನೆ ಆರಂಭಗೊಳ್ಳಬೇಕು. ಕಬ್ಬು ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಾರ್ಖಾನೆ ಒಂದು ವಾರದಲ್ಲಿ ಆರಂಭವಾಗಬೇಕು. ಇಲ್ಲದಿದ್ದರೆ ದಸರಾ ನಡೆಯಲು ಬಿಡುವುದಿಲ್ಲ. ಬೃಹತ್‌ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ದೇವೇಗೌಡರ ವಿರುದ್ಧ ಮಾತನಾಡಲು ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡರಿಗೆ ಯಾವ ನೈತಿಕತೆಯೂ ಉಳಿದಿಲ್ಲ. ಅವರಿಂದ ಜೆಡಿಎಸ್‌ ಮುಖಂಡರು ಪಾಠ ಕಲಿಯಬೇಕಾಗಿಲ್ಲ’ ಎಂದು ಆರೋಪಿಸಿದರು.

ಪ್ರತಿಕ್ರಿಯಿಸಿ (+)