ಶುಕ್ರವಾರ, ನವೆಂಬರ್ 22, 2019
20 °C
ಕ್ರಿಕೆಟ್‌ ‘ಟೆಸ್ಟ್’: ಶಹಬಾಜ್‌, ಕುಲದೀಪ್‌ ದಾಳಿಗೆ ಕುಸಿದ ದಕ್ಷಿಣ ಆಫ್ರಿಕಾ ‘ಎ’

ಭಾರತ ‘ಎ’ ತಂಡದ ಬಿಗಿ ಹಿಡಿತ

Published:
Updated:
Prajavani

ಮೈಸೂರು: ಬ್ಯಾಟ್ಸ್‌ಮನ್‌ಗಳ ಮೆರೆ ದಾಟದ ಬಳಿಕ ಶಹಬಾಜ್‌ ನದೀಮ್‌ ಮತ್ತು ಕುಲದೀಪ್‌ ಯಾದವ್‌ ಸ್ಪಿನ್‌ ಜಾದೂ ತೋರಿದರು. ಇದರ ಪರಿಣಾಮ ಭಾರತ ‘ಎ’ ತಂಡ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ನಾಲ್ಕು ದಿನಗಳ ಕ್ರಿಕೆಟ್‌ ‘ಟೆಸ್ಟ್‌’ನಲ್ಲಿ ಹಿಡಿತ ಬಿಗಿಗೊಳಿಸಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ‘ಎ’ 417 ರನ್‌ಗಳಿಗೆ ಆಲೌಟಾಯಿತು. ಎರಡನೇ ದಿನವಾದ ಬುಧವಾರದ ಆಟದ ಅಂತ್ಯಕ್ಕೆ ಪ್ರವಾಸಿ ತಂಡ 46 ಓವರ್‌ಗಳಲ್ಲಿ 5 ವಿಕೆಟ್‌ಗೆ 159 ರನ್‌ ಗಳಿಸಿ ಕುಸಿತದ ಹಾದಿ ಹಿಡಿದಿದೆ.

ಭಾರತದ ಮೊದಲ ಇನಿಂಗ್ಸ್‌ ಮೊತ್ತಕ್ಕೆ ದಕ್ಷಿಣ ಆಫ್ರಿಕಾ ‘ಎ’ ದಿಟ್ಟ ಉತ್ತರ ನೀಡಿತ್ತು.

ನಾಯಕ ಏಡನ್‌ ಮರ್ಕರಮ್‌ (ಬ್ಯಾಟಿಂಗ್ 83) ಮತ್ತು ಥೆನಿಸ್‌ ಡಿ ಬ್ರುಯ್ನ್ (41) ಎರಡನೇ ವಿಕೆಟ್‌ಗೆ 82 ರನ್‌ ಕಲೆಹಾಕಿದರು.

ಬ್ರುಯ್ನ್ ವಿಕೆಟ್‌ ಪಡೆದ ನದೀಮ್‌ ಈ ಜತೆಯಾಟ ಮುರಿದರು. ಆ ಬಳಿಕ ತಂಡ ಹಠಾತ್ ಕುಸಿತ ಕಂಡಿತು. 40 ರನ್‌ ಸೇರಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

258 ರನ್‌ ಹಿನ್ನಡೆಯಲ್ಲಿರುವ ಪ್ರವಾಸಿ ತಂಡಕ್ಕೆ ಮರ್ಕರಮ್‌ ಏಕೈಕ ಭರವಸೆ ಎನಿಸಿದ್ದಾರೆ. 140 ಎಸೆತಗಳನ್ನು ಎದುರಿಸಿರುವ ಅವರು 12 ಬೌಂಡರಿ ಗಳಿಸಿದ್ದಾರೆ.

ಸಹಾ, ದುಬೆ ಅರ್ಧಶತಕ: ಇದಕ್ಕೂ ಮುನ್ನ ಮೂರು ವಿಕೆಟ್‌ಗೆ 233 ರನ್‌ಗಳಿಂದ ಎರಡನೇ ದಿನದಾಟ ಮುಂದುವರಿಸಿದ ಆತಿಥೇಯ ತಂಡ ಕರುಣ್‌ ನಾಯರ್‌ (78) ಅವರನ್ನು ಬೇಗನೇ ಕಳೆದುಕೊಂಡಿತು. ಹಿಂದಿನ ದಿನದ ಮೊತ್ತಕ್ಕೆ ಅವರು ಯಾವುದೇ ರನ್‌ ಸೇರಿಸಲಿಲ್ಲ. ಆದರೆ ಸಹಾ (60, 126 ಎಸೆತ), ಶಿವಂ ದುಬೆ (68, 84 ಎಸೆತ) ಮತ್ತು ಜಲಜ್‌ ಸಕ್ಸೇನಾ (ಔಟಾಗದೆ 48) ಜವಾಬ್ದಾರಿಯುತ ಆಟವಾಡಿ ತಂಡದ ಮೊತ್ತವನ್ನು 400 ರನ್‌ಗಳ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್: ಭಾರತ ‘ಎ’ ಮೊದಲ ಇನಿಂಗ್ಸ್ 123 ಓವರ್‌ಗಳಲ್ಲಿ 417 (ಶುಭಮನ್ ಗಿಲ್‌ 92, ಕರುಣ್ ನಾಯರ್ 78, ವೃದ್ಧಿಮಾನ್‌ ಸಹಾ 60, ಶಿವಂ ದುಬೆ 60, ಜಲಜ್‌ ಸಕ್ಸೇನಾ ಔಟಾಗದೆ 48, ಉಮೇಶ್ ಯಾದವ್ 24, ವಿಯಾನ್‌ ಮುಲ್ಡೆರ್ 47ಕ್ಕೆ 3, ಡೇನ್ ಪಿಯೆಟ್‌ 78ಕ್ಕೆ 3); ದಕ್ಷಿಣ ಆಫ್ರಿಕಾ ‘ಎ’ ಮೊದಲ ಇನಿಂಗ್ಸ್ 46 ಓವರ್‌ಗಳಲ್ಲಿ 5 ವಿಕೆಟ್‌ಗೆ 159 (ಏಡನ್‌ ಮರ್ಕರಮ್‌ ಬ್ಯಾಟಿಂಗ್‌ 83, ಥೆನಿಸ್‌ ಡೆ ಬ್ರುಯ್ನ್ 41, ಸೆನುರನ್‌ ಮುತ್ತುಸ್ವಾಮಿ 12, ಶಹಬಾಜ್‌ ನದೀಮ್‌ 41ಕ್ಕೆ 2, ಕುಲದೀಪ್‌ ಯಾದವ್‌ 51ಕ್ಕೆ 2, ಮೊಹಮ್ಮದ್‌ ಸಿರಾಜ್ 27ಕ್ಕೆ 1).

ಪ್ರತಿಕ್ರಿಯಿಸಿ (+)